ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕನ ಆಯ್ಕೆಯಲ್ಲಿ ಉ.ಕ, ಲಿಂಗಾಯಿತ, ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಿದೆ- ಕೂಡಲ ಸಂಗಮ ಸ್ವಾಮೀಜಿ

ವಿಜಯಪುರ: ಬಿಜೆಪಿ ರಾಜ್ಯಾಧ್ಯ್ಕಕ್ಷ ಮತ್ತು ಪ್ರತಿಪಕ್ಷದ ನಾಯಕನ ಆಯ್ಕೆಯಲ್ಲಿ ಉತ್ತರ ಕರ್ನಾಟಕ, ಲಿಂಗಾಯಿತ ಹಾಗೂ ಪಂಚಮಸಾಲಿ ಲಿಂಗಾಯಿತ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕನಾಗಿ ಆರ್. ಅಶೋಕ ನೇಮಕಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಬಿಜೆಪಿ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡಿದ್ದಾರೆ ಅದರ ಬಗ್ಗೆ ಮಾತನಾಡುವುದಿಲ್ಲ.  ಆದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅದೇ ರೀತಿ ಲಿಂಗಾಯತ ನಾಯಕತ್ವಕ್ಕೂ ಅನ್ಯಾಯವಾಗಿದೆ.  ಪಂಚಮಸಾಲಿ ಸಮುದಾಯಕ್ಕೂ ಅನ್ಯಾಯವಾಗಿದೆ.  ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ದುಡಿದ ಅನೇಕ ನಾಯಕರಿದ್ದರು.  ಅವರೆಲ್ಲರನ್ನು ಕಡೆಗಣಿಸಿ ಉತ್ತರ ಕರ್ನಾಟಕದ ನಾಯಕತ್ವಕ್ಕೆ ಅನ್ಯಾಯ ಮಾಡಿದ್ದಾರೆ.  ಈ ನಿಟ್ಟಿನಲ್ಲಿ ಕೆಲವರು ಕುತಂತ್ರವನ್ನು ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಪಂಚಮಸಾಲಿ ಮೀಸಲಾತಿಯ ಹೋರಾಟವನ್ನು ಕುಗ್ಗಿಸಲು ಯಾರು ಪ್ರಯತ್ನ ಮಾಡಿದರು ಅವರೇ ಈ ಕುತಂತ್ರ ಮಾಡಿದ್ದಾರೆ.  ಯತ್ನಾಳ ಅವರೇ ಪ್ರತಿಪಕ್ಷದ ನಾಯಕರಾಗುತ್ತಾರೆ ಎಂದು ರಾಜ್ಯದ ಜನರು ಭಾವಿಸಿದ್ದರು.  ಆದರೆ ಅದು ಕೊನೆಯ ಘಳಿಗೆಯಲ್ಲಿ ಕೈ ತಪ್ಪಿದೆ.  ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಯಾರಾರು ಮುಂಚೂಣಿಯಲ್ಲಿದ್ದರೋ ಅವರೆಲ್ಲರನ್ನು ಕಡೆಗಣಿಸಲಾಗಿದೆ.  ಇದೆಲ್ಲವನ್ನು ಪಂಚಮಸಾಲಿ ಸಮಾಜ ಮತ್ತು ಉತ್ತರ ಕರ್ನಾಟಕದ ಜನರು ಪ್ರಶ್ನೆ ಮಾಡಬೇಕಿದೆ.  ಯತ್ನಾಳ ಅವರಂತೆ ಅರವಿಂದ ಬೆಲ್ಲದ, ಸಿ. ಸಿ. ಪಾಟೀಲ ಸೇರದಂತೆ ಅನೇಕ ನಾಯಕರು ಉತ್ತರ ಕರ್ನಾಟಕದಲ್ಲಿದ್ದಾರೆ.  ಬಸವರಾಜ ಬೊಮ್ಮಾಯಿ ಅವರು ಕೂಡ ಒಳ್ಳೆಯ ವಾಗ್ಮಿಗಳಾಗಿದ್ದಾರೆ.  ಅವರನ್ನಾದರೂ ಪ್ರತಿಪಕ್ಷದ ನಾಯಕನನ್ನಾಗಿ ಮಾಡಬೇಕಿತ್ತು ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ವಿ. ಸೋಮಣ್ಣ ಅವರ ನಾಯಕತ್ವಕ್ಕೂ ಹಿನ್ನಡೆ ಮಾಡಿದ್ದಾರೆ.  ಈ ವಿಚಾರದಲ್ಲಿ ನಮ್ಮ ಸಮಾಜದಲ್ಲಿ ಅಸಮಾಧಾನ ಬೇರೂರಿದೆ.  ಈ ಅಸಮಾಧಾನವನ್ನು ಯಾವ ರೀತಿ ಬಗೆಹರಿಸುತ್ತಾರೆ ಎಂಬುದು ಬಿಜೆಪಿ ವರಿಷ್ಠರಿಗೆ ಬಿಟ್ಟದ್ದು.  ಪ್ರತಿಪಕ್ಷದ ನಾಯಕನ ಸ್ಥಾನವನ್ನು ಒಳಸಂಚಿನಿಂದ ಯತ್ನಾಳ್ ಗೆ ತಪ್ಪಿಸಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದರು.

2ಎ ಮೀಸಲಾತಿ ಹೋರಾಟ ವಿಚಾರ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೂಡಲ ಸಂಗಮ ಸ್ವಾಮೀಜಿ, ಸಮಾಜದ ಮೀಸಲಾತಿಗಾಗಿ ನಾವು ಹೋರಾಟವನ್ನು ಮುಂದುವರಿಸುತ್ತೇವೆ.  ಮೀಸಲಾತಿ ವಿಚಾರವಾಗಿ ಕಳೆದ ಮೂರು ವರ್ಷದಿಂದ ನಿರಂತರ ಹೋರಾಟ ಮಾಡಿದ್ದೇವೆ.  ನಮಗೆ ಸಿಗಬೇಕಾದ ಮೀಸಲಾತಿ ಇನ್ನೂ ಜಾರಿಗೆ ಬಂದಿಲ್ಲ.  ಈ ವಿಚಾರದಲ್ಲಿ ನಾವು ಸರಕಾರದ ಮೇಲೆ ಗಮನ ಸೆಳೆದು ಒತ್ತಡ ಹಾಕುತ್ತೇವೆ.  ಮುಂದಿನ ಅಧಿವೇಶನದ ಒಳಗಾಗಿ ಮೀಸಲಾತಿ ವಿಚಾರದ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ನವೆಂಬರ 21 ರಂದು ಕನಮಡಿಯಲ್ಲಿ ಸಮಾವೇಶ

ಇದೇ ವೇಳೆ ನವೆಂಬರ 21 ರಂದು  ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಲಿಂಗಾಯಿತ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಮಾಡಲಾಗುವುದು.  ರಾಜ್ಯಾದ್ಯಂತ ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಮಾಡಿದ್ದೇವೆ.  ನಮ್ಮ ಬೇಡಿಕೆಗಳ ಕುರಿತು ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಸಿಎಂ ಸೂಕ್ತ ಗಮನ ಹರಿಸಬೇಕು.  ಯಡಿಯೂರಪ್ಪ ಸಿಎಂ ಆಗಿದ್ದಾಗ ತಮ್ಮ ಸಮಾಜಕ್ಕೆ ಮೀಸಲಾತಿ ನೀಡಿದರು‌.  ಜಗದೀಶ ಶೆಟ್ಟರ ಅವರು ಸಿಎಂ ಆಗಿದ್ದಾಗಲೂ ಶಿಫಾರಸ್ಸು ಮಾಡಿದ್ದರು.  ಈಗ ಸಿದ್ದರಾಮಯ್ಯ ಸಹ ತಮ್ಮ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿಗಾಗಿ ಶಿಫಾರಸು ಮಾಡಿದ್ದಾರೆ.  ಇದೆಲ್ಲವನ್ನು ನಾನು ಸ್ವಾಗತ ಮಾಡುತ್ತೇನೆ.  ನಾವು ಕೂಡ ಕಳೆದ ಮೂರು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ.  ನಮ್ಮ ಕಡೆಗೂ ಗಮನ ನೀಡಿ ಎಂದು ಅವರು ಮನವಿ ಮಾಡಿದರು.

ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಯಾಕೆ ಅಲಕ್ಷ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತದೆ.  ಮುಂದಿನ ಲೋಕಸಭೆ ಚುನಾವಣೆಯ ಒಳಗೆ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು.  ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದರ ಜೊತೆಗೆ ಇತರೆ ಎಲ್ಲಾ ಲಿಂಗಾಯಿತ ಒಳಪಂಗಡಗಳಿಗೆ ಓಬಿಸಿ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌