ವಿಜಯಪುರ: ದೇಶದ ಸಾಮಾಜಿಕ ಮತ್ತು ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಗಳ ಸ್ಥಳೀಯ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸೋಲಾಪುರ ರಸ್ತೆಯ ಕಿತ್ತೂರು ಚನ್ನಮ್ಮ ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆವರಣದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಶತಮಾನೋತ್ಸವ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಮತ್ತು ದೇಶದ ಸಾಮಾಜಿಕ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಹಕಾರಿ ರಂಗ ಸ್ವಾತಂತ್ರ್ಯ ಪೂರ್ವದಿಂದಲೂ ಬೆಳೆಯುತ್ತಾ ಬಂದಿದೆ. ಪ್ರತಿವರ್ಷ ನವೆಂಬರ್ 14 ರಿಂದ ಒಂದು ವಾರಗಳ ಕಾಲ ಸಹಕಾರಿ ಸಪ್ತಾಹವನ್ನು ಆಯೋಜಿಸಲಾಗುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಹಕಾರಿಗಳಿಗೆ ಕಳೆದ 2003 ರಿಂದ ಸಹಕಾರಿ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿಯೂ ಸಹ 71 ಜನರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕು ಎಂದು ಅವರು ಹೇಳಿದರು.
1905ರಲ್ಲಿ ಸಹಕಾರಿ ಪಿತಾಮಹ ಸಿದ್ದನಗೌಡ ಸಂಣರಾಮನಗೌಡ ಪಾಟೀಲ ಅವರು ಸೊಸಾಯಿಟಿ ಆರಂಭಿಸಿದ್ದರು. ಪ್ರಸ್ತುತ ರಾಜ್ಯದಲ್ಲಿ 45600 ಹಾಗೂ ದೇಶದಲ್ಲಿ 8.5 ಲಕ್ಷ ಸೊಸಾಯಿಟಿಗಳು ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ . ಸಹಕಾರಿ ಹಲವು ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡು ಪ್ರತಿ ಕ್ಷೇತ್ರದಲ್ಲಿ ಬೆಳವಣಿಗೆಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸಹಕಾರಿ ಕ್ಷೇತ್ರದಲ್ಲಿ ಬೆಳವಣಿಗೆ ಕಂಡ ಪ್ರತಿ ರಾಜ್ಯ, ದೇಶಗಳು ಆರ್ಥಿಕತೆಯನ್ನು ಸಾಧಿಸಿವೆ ಎಂದು ಹೇಳಿದರು.
ದೇಶದಲ್ಲಿ ಅನೇಕ ಜಾತಿ, ಧರ್ಮ, ಪಂಗಡಗಳಿವೆ. ಆದರೆ ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಭೇಧಭಾವವಿಲ್ಲ.ಜಾತ್ಯಾತೀತ, ಪಕ್ಷಾತೀತವಾದ ಸಹಕಾರ ರಂಗದ ಬೆಳವಣಿಗೆಗೆ ಪೂರಕವಾಗಿ ನಮ್ಮ ಸರ್ಕಾರ 5 ಜನಪರ ಯೋಜನೆಗಳನ್ನು ಜಾರಿಗೊಳಿಸಿ ಸಮಾಜದಲ್ಲಿನ ಅಸಮಾನತೆ, ಬಡತನ, ನಿರುದ್ಯೋಗ ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಸರ್ಕಾರ ಬಜೆಟ್ ಮಂಡಿಸಿದಾಗ ಜೀರೋ ಪಸೆರ್ಂಟ್ ಸಾಲವನ್ನು 3 ರಿಂದ 5 ಲಕ್ಷದವರೆಗೆ ಏರಿಸುವ ಕೆಲಸ ಮಾಡಿದ್ದೇವೆ. ರೈತರಿಗೆ ಸಾಲ ನೀಡಬೇಕೆಂದು ನಬಾರ್ಡ್ ಹಾಗೂ ಪ್ರಧಾನಮಂತ್ರಿಗಳಿಗೆ ನವರಿಗೆ ಕೂಡಲೇ ಪತ್ರ ಬರೆಯುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ 3 ಲಕ್ಷದವರೆಗೆ ಶೇ. 3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈಗ ಅದನ್ನು ಬಡ್ಡಿ ರಹಿತವಾಗಿ 3-5 ಲಕ್ಷದವರೆಗೆ ಸಾಲ ನೀಡುವ ಕೆಲಸ ಮಾಡಲಾಗಿದೆ. ಶೇ 3 ರಷ್ಟು ಬಡ್ಡಿಯನ್ನು 15 ಲಕ್ಷ ಆಗುವವರೆಗೆ ಮಾತ್ರ ನೀಡಬೇಕು ಎಂದು ಅವರು ಹೇಳಿದರು.
ಪ್ರತಿ ಲೀಟರ್ ಹಾಲಿಗೆ ರೂ. 8 ಪ್ರೋತ್ಸಾಹ ಧನ ನೀಡುವ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ವರ್ಷ 1200 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸಹಕಾರ ಸಂಘಗಳಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದ ಸಾಲ ಯೋಜನೆಯನ್ನು 3 ರಿಂದ 5ಲಕ್ಷ ರೂ.ವರೆಗೆ ಏರಿಕೆ ಮಾಡಲಾಗಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡಲು 50 ಸಾವಿರದವರಗೆ ಸಂಪೂರ್ಣ ಮನ್ನಾ ಮಾಡಲಾಯಿತು. ಹೀಗೆ ಮನ್ನಾ ಮಾಡದ್ದರಿಂದ ಸಹಕಾರಿ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳಿಗೆ ಶಕ್ತಿ ಬರಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಸಹಕಾರ ಸಂಘದ ಸದಸ್ಯರಾಗಲು ಸರ್ಕಾರವೇ ಜನರ ಪರವಾಗಿ ಶೇರು ಮೊತ್ತವನ್ನು ಭರಿಸಲಾಗಿತ್ತು. ಈ ಕಾರ್ಯಕ್ರಮ ಇಂದಿಗೂ ಮುಂದುವರೆಯುತ್ತಿದೆ. ಎಲ್ಲ ದಲಿತರು ಹಾಗೂ ಮಹಿಳೆಯರು ಸಹಕಾರ ಸಂಘದ ಸದಸ್ಯರಾಗಬೇಕು. ಸರ್ಕಾರದ ಸಹಾಯದಿಂದಾಗಿ ದಲಿತರು ಹಾಗೂ ಮಹಿಳೆಯರು ಹಾಲು ಸಹಕಾರ ಸಂಘದಲ್ಲಿ ಸದಸ್ಯರಾಗುತ್ತಿದ್ದಾರೆ. ನಮ್ಮ ಸರ್ಕಾರ ಹಾಲಿನ ಪ್ರತಿ ಲೀ.ಗೆ ರೂ. 5 ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈಗ ಪ್ರೋತ್ಸಾಹ ಧನವನ್ನು ಪ್ರತಿ ಲೀ.ಗೆ ರೂ. 5 ರಿಂದ ರೂ 8 ಗೆ ಹೆಚ್ಚಳ ಮಾಡಲಾಗಿದೆ. ಈ ಹಣ ರೈತರಿಗೆ ನೇರವಾಗಿ ತಲುಪುತ್ತಿದೆ ಎಂದು ಅವರು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದವರು ಹಾಲು ಉತ್ಪಾದನೆ ಜಾಸ್ತಿಯಾಗಿದ್ದು, ಸರಕಾರ ಈ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂಬ ಬೇಡಿಕೆಯನ್ನು ಸಲ್ಲಿಸಿತ್ತು. ಆದ್ದರಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ನೀಡುವ ಯೋಜನೆಯನ್ನು ಹಮ್ಮಿಕೊಂಡು , ಹಾಲು ಉತ್ಪಾದಕರ ಸಮಸ್ಯೆ ಬಗೆಹರಿಸುವ ಜೊತೆಗೆ ಮಕ್ಕಳ ಪೌಷ್ಟಿಕತೆ ಹೆಚ್ಚಳಕ್ಕೂ ಅನುಕೂಲ ಕಲ್ಪಿಸಲಾಗಿದೆ ಎಂದು ಸಿಎಂ ಹೇಳಿದರು.
ನಿಸ್ವಾರ್ಥವಾಗಿ ಕಾರ್ಯದಿಂದ ಬ್ಯಾಂಕುಗಳಿಗೆ ಲಾಭ
ಸಹಕಾರಿ ಬ್ಯಾಂಕುಗಳು ಸುಸ್ಥಿರವಾಗಿರಬೇಕು. ಸುಸ್ಥಿರವಾಗಿದ್ದರೇ ಮಾತ್ರ ಅವು ರೈತರಿಗೆ ಸಾಲ ನೀಡಲು ಸಾಧ್ಯ. ರೈತರಿಗೆ ವ್ಯವಸಾಯ ಮಾಡಲು ಸಕಾಲದಲ್ಲಿ ಸಾಲ ಸಿಕ್ಕರೆ ವ್ಯವಸಾಯ ಮಾಡಲು ಅನುಕೂಲವಾಗಿ ಉತ್ಪಾದನೆಯೂ ಹೆಚ್ಚಾಗಲಿದೆ. ಯಾವುದೇ ಬ್ಯಾಂಕಿನಲ್ಲಿ ಎಲ್ಲರೂ ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಮಾತ್ರ ಅದು ಲಾಭದಾಯಕವಾಗಿ ನಡೆಯುತ್ತದೆ. ಸ್ವಾರ್ಥ ಬಿಟ್ಟು ಸೇವೆ ಮಾಡುವ ಕ್ಷೇತ್ರವಿದು. ವಿಜಯಪುರ ಡಿಸಿಸಿ ಬ್ಯಾಂಕ್ ಪ್ರಾರಂಭವಾಗಿ 105 ವರ್ಷಗಳಾಗಿರುವ ಸ್ಮರಾಣಾರ್ಥ 15-16 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಿರುವುದರ ಅರ್ಥ ಬ್ಯಾಂಕು ಆರ್ಥಿಕವಾಗಿ ಸುಸ್ಥಿರವಾಗಿರುವುದರ ದ್ಯೋತಕ ಎಂದರು.
ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ :12 ರಾಜ್ಯಗಳಲ್ಲಿ ಬರಗಾಲವಿದ್ದು, ಕರ್ನಾಟಕದಲ್ಲಿಯೂ ಕೂಡ 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಬರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸುವ ಕೆಲಸವನ್ನು ನಮ್ಮ ಸಂಸದರು ಮಾಡಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದ ಡಿಸಿ, ಸಿಇಒ ಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ಬಳಿ ರೂ. 800 ಕೋ. ಲಭ್ಯವಿದೆ. ಮೇವಿಗೆ, ಉದ್ಯೋಗ ನೀಡಲು, ಕುಡಿಯುವ ನೀರಿಗೆ ರಾಜ್ಯ ಸರ್ಕಾರ ಈಗಾಗಲೇ 800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಬರಗಾಲವನ್ನು ನಮ್ಮ ಸರಕಾರ ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಅವರು ಭರವಸೆ ನೀಡಿದರು.
ಸಹಕಾರ ಇಲಾಖೆ ಸಚಿವ ಕೆ. ಎನ್, ರಾಜಣ್ಣ ಅವರು ಮಾತನಾಡಿ, ಕಳೆದ 70 ವರ್ಷಗಳಿಂದ ನಡೆದು ಬಂದಿರುವ ಸಹಕಾರಿ ಆಂದೋಲವನ್ನು ಮುನ್ನಡೆಸಿಕೊಂಡು, ಸಹಕಾರಿ ತತ್ವ ಸಿದ್ಧಾಂತದ ಕುರಿತು ಮುಂದಿನ ಪೀಳಿಗೆಗೆ ತಲುಪಿಸಬೇಕು. ಸಹಕಾರಿ ಆಂದೋಲನ ಯಾವುದೇ ಒಂದು ಪಕ್ಷ, ಜಾತಿ, ಧರ್ಮಕ್ಕೆ ಸೀಮೀತವಾಗಿಲ್ಲ. ಸಹಕಾರಿ ಒಂದು ಕುಟುಂಬವಿದ್ದಂತೆ. ಸಹಕಾರಿಗಳು ಸಂಘಟಿತರಾಗಬೇಕು. ಸಹಕಾರಿಗೆ ಮಾರಕವಾಗುವಂತಹದನ್ನು ಪ್ರತಿಭಟಿಸುವ ಮೂಲಕ ಸಹಕಾರಿ ರಂಗದ ಬೆಳೆವಣಿಗೆಯಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮತ್ತು ಜವಳಿ, ಸಕ್ಕರೆ, ಕಬ್ಬು ಅಭಿವೃದ್ದಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಎಲ್ಲರಿಗಿಂತಲು ಮೊದಲು ರಾಜ್ಯದಲ್ಲಿ ಸಹಕಾರಿ ಚಳುವಳಿ ಪ್ರಾರಂಭವಾದರೂ ಮಹಾರಾಷ್ಟ್ರ, ಗುಜರಾತ್ ಸಹಕಾರಿ ರಂಗದಲ್ಲಿ ಮುಂದಿದೆ. ಮಹಾರಾಷ್ಟ್ರ, ಗುಜರಾತ ಮಾದರಿಯಲ್ಲಿ ರಾಜ್ಯಕ್ಕೆ ಪೆÇ್ರೀತ್ಸಾಹ, ಶಕ್ತಿ ತುಂಬುವ ಅವಶ್ಯಕತೆ ಇದೆ. ದೇಶದ ಅಭಿವೃದ್ದಿಯಲ್ಲಿ ಅಪಾರ ಕೊಡುಗೆ ನೀಡಿದ ಸಹಕಾರಿ ರಂಗ ಸಹಕಾರಿ ತತ್ವದ ಜಾಗೃತಿಯಾಗಬೇಕು. 119 ವರ್ಷದಿಂದ ಸಹಕಾರಿ ಚಳುವಳಿ ದಾಪುಗಾಲಿಟ್ಟಿದ್ದು ಸಹಕಾರಿ ರಂಗಕ್ಕೆ ಸರ್ಕಾರದ ಸಹಾಯ ಸಹಕಾರ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಸರಕಾರ ವಿಶೇಷವಾಗಿ ಎ ಮತ್ತು ಬಿ ಬ್ಯಾಂಕ್‍ಗಳತ್ತ ಗಮನ ಹರಿಸಿ ಉತ್ತೇಜನ ನೀಡಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ ಅವರು, ಕೇಂದ್ರ ಸರಕಾರ ಹಾಗೂ ನಬಾರ್ಡ್‍ದಿಂದ ಹಣ ಬಿಡುಗಡೆ ಮಾಡಿಸುವ ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರ ನೀಡಬೇಕು. ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯದಂತೆ ನಮ್ಮಲ್ಲೂ ಸಹಕಾರ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದರೆ ಜನರಿಗೆ ಇನಷ್ಟು ಆಸಕ್ತಿ ಮೂಡಿ ಸಹಕಾರಿ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಎರಡೂ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಸಹಕಾರಿ ರಂಗದಲ್ಲಿ ಮುಂಚೂಣಿಗೆ ಬರುವ ಕನಸು ನನಸಾಗಲಿದೆ ಎಂದು ಅವರು ಹೇಳಿದರು.
ಈ ಸಮಾರಂಭದಲ್ಲಿ ಸಹಕಾರಿ ಪಿತಾಮಹ ಸಿದ್ದನಗೌಡ ಸಂಣರಾಮನಗೌಡ ಪಾಟೀಲ, ಶ್ರೀ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ಅವರು ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಸಹಕಾರ ಮಹಾಮಂಡಳದ ಕಾರ್ಯ ಚಟುವಟಿಕೆಗಳ ಕೈಪಿಡಿಯನ್ನು ಅಬಕಾರಿ ಖಾತೆ ಸಚಿವ ಆರ್. ಬಿ. ತಿಮ್ಮಾಪುರ ಬಿಡುಗಡೆ ಮಾಡಿದರು. 73 ಸಹಕಾರಿಗಳಿಗೆ ಸಹಕಾರ ರತ್ನ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಮತ್ತು ಶಾಸಕ ಜಿ. ಟಿ. ದೇವೇಗೌಡ, ವಿಧಾನಸಭೆಯಲ್ಲಿ ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಕರ್ನಾಟಕದ ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಸಂಸದರಾದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ, ಶಾಸಕರಾಗಳಾದ ಯಶವಂತರಾಯಗೌಡ ಪಾಟೀಲ, ಸಿ. ಎಸ್. ನಾಡಗೌಡ, ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ದುರ್ಯೋಧನ ಐಹೊಳೆ, ಹಣಮಂತ ನಿರಾಣಿ, ಸಿದ್ದು ಸವದಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ. ಎಚ್. ಪೂಜಾರ, ಎಚ್. ವೈ. ಮೇಟಿ, ಜಿ. ಟಿ. ಪಾಟೀಲ, ಭೀಮನಗೌಡ(ರಾಜುಗೌಡ) ಬಸನಗೌಡ ಪಾಟೀಲ, ಎಂ. ನಾಗರಾಜು, ಬಾಬಾಸಾಹೇಬ ಪಾಟೀಲ, ಹಿರಿಯ ಅಧಿಕಾರಿಗಳಾದ ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ, ಸಹಕಾರ ಸಂಘಗಳ ಅಪರ ನಿಬಂಧಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಕೆ. ಎಸ್. ನವೀನ್, ಜಂಟಿ ನಿಬಂಧಕ ಲಕ್ಷ್ಮೀಪತಯ್ಯ, ಸಂಯುಕ್ತ ನಿಬಂಧಕ ಡಾ. ಸುರೇಶಗೌಡ ಪಾಟೀಲ, ಸಹಕಾರ ಸಂಘಗಳ ಅಪರ ನಿಬಂಧಕ ಬಿ. ಸಿ. ಸತೀಶ, ಜಂಟಿ ನಿಬಂಧಕ ನೀಲಪ್ಪನವರ, ವಿಜಯಪುರ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಎಸ್. ಕೆ. ಭಾಗ್ಯಶ್ರೀ ಸೇರಿದಂತೆ ರಾಜ್ಯದ ನಾನಾ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಇತರರು ಉಪಸ್ಥಿತರಿದ್ದರು.