ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದ ಸಚಿವ ಎಚ್. ಕೆ. ಪಾಟೀಲ

ವಿಜಯಪುರ: ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಅವರು ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಬಸ್‌ನ ಮೂಲಕ ಪ್ರವಾಸ ಕೈಗೊಂಡು ವಿಜಯಪುರ ಜಿಲ್ಲೆಯ ನಾನಾ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.

ಈ ಸ್ಮಾರಕಗಳಲ್ಲಿ ಅಳವಡಿಸಲಾಗಿರುವ ಕಲೆ, ಶಿಲ್ಪಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲೆಯನ್ನು ವೀಕ್ಷಿಸಿ, ಐತಿಹಾಸಿಕ ಸ್ಮಾಕರಗಳ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಳಿಗ್ಗೆ ಮುತ್ತಗಿಯಲ್ಲಿರುವ ಸ್ಮಾರಕ ಹಾಗೂ ದೇವಾಲಯಗಳ ವೀಕ್ಷಣೆ ನಡೆಸಿ, ವಿಜಯಪುರಕ್ಕೆ ಆಗಮಿಸಿದ ಸಚಿವರು,  ಐತಿಹಾಸಿಕ ಸ್ಮಾರಕದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಆದಿಲ್ ಶಾಹಿ ದರ್ಬಾರ ಹಾಲ್,  ಜಿಲ್ಲಾ ಖಜಾನೆ ಕಚೇರಿ, ಆಡಳಿತಾತ್ಮಕ ಸಭಾಂಗಣಗಳು, ಶೇಖರಣಾ ಕಚೇರಿಗಳು, 7 ಅಂತಸ್ತಿನ ಆದಿಲ್ ಶಾಹಿ ಅರಮನೆ ಸಾತಮಂಜಿಲ್, ಜಲಮಹಲ್, ನರಸಿಂಹ ದೇವಸ್ಥಾನ, ಆನಂದ ಮಹಲ್, ಗಗನ್ ಮಹಲ್, ಪಾರ್ಶ್ವನಾಥ ಮಂದಿರ, ಹಳೆ ತಹಶೀಲ್ದಾರ ಕಚೇರಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದ ಅವರು ಅಧಿಕಾರಿಗಳು ಹಾಗೂ ಮಾರ್ಗದರ್ಶಕರಿಂದ ್ಲ ಐತಿಹಾಸಿಕ ಸ್ಮಾರಕಗಳಲ್ಲಿ ಅಳವಡಿಸಲಾದ ಶಿಲ್ಪಕಲೆ, ಸಂಸ್ಕೃತಿ,  ಕಲಾಕೃತಿ ಕುರಿತು ಸೂಕ್ತ ಮಾಹಿತಿ ಪಡೆದರು.

ವಿಜಯಪುರದಲ್ಲಿ ಸಚಿವ ಎಚ್. ಕೆ. ಪಾಟೀಲ ನಾನಾ ಪ್ರಾಚೀನ ಸ್ಮಾರಕಗಳನ್ನು ವೀಕ್ಷಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ದೇಶದಲ್ಲಿ ಅತಿ ಹೆಚ್ಚು ಸ್ಮಾರಕ ಹೊಂದಿರುವ ಐತಿಹಾಸಿಕ ನಗರ ಇಲ್ಲಿ ಹಲವಾರು ಸ್ಮಾರಕಗಳಿವೆ. ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಅಗತ್ಯ. ಕರ್ನಾಟಕದಲ್ಲಿನ ಸ್ಮಾರಕಗಳ ದರ್ಶನ ಮಾಡಲು ಹಾಗೂ ಅವುಗಳ ಸಂರಕ್ಷಣೆಗಾಗಿ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕೈಗೊಂಡು ಕಲ್ಬುರ್ಗಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಯ ಐಹೊಳೆ, ಇದೀಗ ವಿಜಯಪುರದ ಮುತ್ತಗಿಯಿಂದ ಆರಂಭಿಸಿದ್ದೇನೆ.  ಇತಿಹಾಸ ತಜ್ಞರೊಂದಿಗೆ ಚರ್ಚೆ ಮಾಡಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಇತಿಹಾಸದ ಭಾಗಗಳನ್ನು ಸ್ಮಾರಕಗಳ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಗಮನ ಸಳೆದ ವಿದೇಶಿ ಪ್ರವಾಸಿಗರು

ಪ್ರವಾಸೋದ್ಯಮ ಇಲಾಖೆ ಸಚಿವ ಎಚ್. ಕೆ. ಪಾಟೀಲ ಅವರು ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ಅಮೇರಿಕಾ ದೇಶದ ಪ್ರವಾಸಿಗರು, ಜಿಲ್ಲೆಯು ಸುಂದರವಾದ ಸ್ಮಾರಕಗಳನ್ನು ಹೊಂದಿರುವ ಕುರಿತು ಹಾಗೂ ಇಲ್ಲಿನ ಜನರ ಸಂಸ್ಕೃತಿ, ಭಾಷೆ, ನಡವಳಿಕೆಯಿಂದ ಪ್ರಭಾವಿತವಾಗಿರುವ ಕುರಿತು ತಮ್ಮ ಅನಿಸಿಕೆಗಳನ್ನು ಕನ್ನಡದಲ್ಲಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕರಾದ ಅಶೋಕ ಮನಗೂಳಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾದ ಮನೋಹರ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಸೇರಿದಂತೆ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯವ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌