ವಿಜಯಪುರ: ನಗರದ ಹೊರವಲಯದ ಭೂತನಾಳ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಸೈಕ್ಲಿಂಗ್ ವೆಲೊಡ್ರೊಂ ಬಾಕಿ ಕಾಮಗಾರಿ ಒಂದು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಸಹಕಾರ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೈಕ್ಲಿಂಗ್ ವೆಲೊಡ್ರೊಂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕಾಮಗಾರಿಗೆ ಪೂರಕವಾಗಿ ಹೆಚ್ಚುವರಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಶ್ಯವಿರುವ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ತಯಾರಿಸಿ ಸಲ್ಲಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು ಮಾತನಾಡಿ, ಸರಕಾರ ಒದಗಿಸುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ರಾಜ್ಯದ ಉತ್ತಮ ಕ್ರೀಡಾಪಟುಗಳಾಗಿ, ಜಿಲ್ಲೆಯ ಕೀರ್ತಿ ಹೆಚ್ಚಿಸಲು ಕ್ರೀಡಾ ವಸತಿ ನಿಲಯದ ಸೈಕ್ಲಿಸ್ಟ್ ಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ ಲೋಣಿ, ಸೈಕ್ಲಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಸಂಜು ಪಡತಾರೆ, ಸೈಕ್ಲಿಂಗ್ ತರಬೇತಿದಾರರು, ಸಿಬ್ಬಂದಿ ಸೈಕ್ಲಿಸ್ಟ್ ಸೇರಿದಂತೆ ಇತರರು ಇದ್ದರು.