ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿ- ಎಚ್. ಕೆ. ಪಾಟೀಲ

ವಿಜಯಪುರ: ಐತಿಹಾಸಿಕ ತಾಣಗಳಿಂದ ಕೂಡಿರುವ ವಿಜಯಪುರ ಜಿಲ್ಲೆಯಲ್ಲಿರುವ ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಸೇರಿದಂತೆ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಕ್ರಮವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್. ಕೆ. ಪಾಟೀಲ ಅವರು ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಭಾರತೀಯ ಪುರಾತತ್ವ ಇಲಾಖೆ, ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ  ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು. ಸ್ಮಾರಕಗಳ ರಕ್ಷಣೆಗೆ ಒತ್ತು ನೀಡಿ, ಸ್ಮಾರಕಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಸ್ಮಾರಕಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.  ಜಿಲ್ಲೆಯ ಸ್ಮಾರಕಗಳಿಗೆ  ಹೆಚ್ಚೆಚ್ಚು ಪ್ರವಾಸಿಗರು ಆಕರ್ಷಿಸುವ ನಿಟ್ಟಿನಲ್ಲಿ  ಮೈಸೂರು ಮಾದರಿಯಲ್ಲಿ ಪಾರಂಪರಿಕ ಟಾಂಗಾ ಬಳಕೆಗೆ ಪ್ರೊತ್ಸಾಹ ನೀಡಬೇಕು. ನಗರದ ಗೋಲಗುಂಬಜ್ ಸ್ಮಾರಕದಲ್ಲಿ ಧ್ವನಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಸ್ಮಾರಕಗಳ ಆವರಣದಲ್ಲಿ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ಸ್ಮಾರಕಗಳ ರಕ್ಷಣೆಯೊಂದಿಗೆ ಪಾರಂಪರಿಕ  ಕಲೆ, ಸಂಸ್ಕøತಿ, ಅನಾವರಣಗೊಳಿಸುವಂತೆ ಕಾರ್ಯಕ್ರಮಗಳನ್ನು ಪ್ರತಿ ವಾರ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ವಿಜಯಪುದಲ್ಲಿ ಸಚಿವ ಎಚ್. ಕೆ. ಪಾಟೀಲ ಅಧಿಕಾರಿಗೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಭೆ ನಡೆಸಿದರು

ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನಿಡುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಗಂಭೀರತೆಯಿಂದ ಕಾರ್ಯ ನಿರ್ವಹಿಸಬೇಕು.  ಜಿಲ್ಲೆಗೆ ಪ್ರವಾಸಿಗರು ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಮಾಹಿತಿ, ವಿವಿಧ ಸ್ಮಾರಕಗಳಿಗೆ ಹೋಗಲು ಸಾರಿಗೆ, ವ್ಯವಸ್ಥೆ, ಪ್ರವಾಸಿ ತಾಣಗಳಲ್ಲಿರುವ  ವೈಶಿಷ್ಟ್ಯತೆ ಸೇರಿದಂತೆ  ಸಮಗ್ರವಾದ ಮಾಹಿತಿ ಪ್ರವಾಸಿಗರಿಗೆ ಒದಗಿಸಲು ಕ್ರಮ ವಹಿಸಬೇಕು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಅನುಕೂಲ ಕಲ್ಪಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಚಿವರು ಹೇಳಿದರು.

ಕರೇಜ್ ಅಭಿವೃದ್ದಿಗಾಗಿ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ನಗರದಲ್ಲಿನ ಕರೆಜ್ ವ್ಯವಸ್ಥೆಯನ್ನು ಪುನರ್ ಪ್ರಾರಂಭಿಸಲಾಗುತ್ತಿದೆ. ಈ ತಿಂಗಳೊಳಗಾಗಿ ಕರೇಜ್ ವ್ಯವಸ್ಥೆ ಆರಂಭಕ್ಕೆ ಆದೇಶ ನೀಡಲಾಗುವುದುದರಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು.  ಈ ಮೊದಲಿನಂತೆ ಮೋಟದಲ್ಲಿ ಬೋಟ್ ಆರಂಭಿಸುವ ಮೂಲಕ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಬೇಕು ಎಂದು ಅವರು ಹೇಳಿದರು.

ಜನೇವರಿ ಒಳಗೆ ಐತಿಹಾಸಿಕ ಸ್ಮಾರಕಗಳನ್ನು ಅಧಿಸೂಚಿಸಲಾಗುತ್ತಿದ್ದು, ವಿಜಯಪುರ ನಗರದಲ್ಲಿ ಹಲವು ಸ್ಮಾರಕಗಳಿವೆ. ಮಹತ್ವದ ಸ್ಮಾರಕಗಳನ್ನು ಗುರುತಿಸಿ, ಅವುಗಳ ಪಟ್ಟಿ ಮಾಡಿ ಸಮೀಕ್ಷೆ ಕಾರ್ಯ ಕೈಗೊಂಡು ವರದಿ ಸಲ್ಲಿಸಬೇಕು. ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ದಿಗೆ ಸರ್ಕಾರ ಅಷ್ಟೇ ಅಲ್ಲದೇ ಸಾರ್ವಜನಿಕ ಸಹಭಾಗಿತ್ವ ಪಡೆದುಕೊಂಡು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿಗೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲಿರುವ ಅರೆಕಿಲ್ಲಾ ಸ್ಮಾರಕ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಅವರು, ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಪ್ರವಾಸೊದ್ಯಮ ಸಮಿತಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು  ಕಾಲಕಾಲಕ್ಕೆ ಸಭೆ ಕರೆದು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಈ ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾದ ಮನೋಹರ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಜಯಪುರ ತಹಶೀಲ್ದಾರ ಶ್ರೀಮತಿ ಕವಿತಾ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌