ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ಅವರ ಹಿರಿಯ ಪುತ್ರ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಅವರ ವಿವಾಹ ಹಿರಿಯ ಶಾಸಕ ಡಾ. ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳಾದ ಅಖಿಲಾ ಅವರೊಂದಿಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.
ಸಿದ್ದಗಂಗಾ ಸ್ವಾಮೀಜಿ, ಸುತ್ತೂರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ, ಬೇಲಿಮಠ ಸ್ವಾಮೀಜಿ, ಸೇರಿದಂತೆ ಪ್ರಮುಖ ಸ್ವಾಮೀಜಿಗಳ ಸಾನಿದ್ಯದಲ್ಲಿ ನಡೆದ ವಿವಾಹದಲ್ಲಿ ಬಸನಗೌಡ ಮತ್ತು ಅಖಿಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ, ಸಚಿವ ಸಂಪುಟದ ಎಲ್ಲ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣ. ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ, ಕೇಂದ್ರ ಮಾಜಿ ಸಚಿವ ಸುಶೀಲಕುಮಾರ ಶಿಂಧೆ, ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಲೆ, ಮಾಜಿ ಸಂಸದ ಪ್ರಭಾಕರ ಕೋರೆ, ಶಾಸಕ ವೀರಣ್ಣ ಚರಂತಿಮಠ, ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ ಇನ್ಫೋಸಿಸ್‌ನ ಸುಧಾಮೂರ್ತಿ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದು ನೂತನ ದಂಪತಿಗಳಿಗೆ ಶುಭ ಕೋರಿದರು.
ಸಂಜೆ ಅರಮನೆ ಮೈದಾನದಲ್ಲಿ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಬಂಧುಗಳು, ಸ್ನೇಹಿತರು, ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.
ಡಿಸೆಂಬರ್ 1 ರಂದು ವಿಜಯಪುರದಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ
ಡಿಸೆಂಬರ್ 1 ರಂದು ವಿಜಯಪುರದಲ್ಲಿ ಬೆಳಿಗ್ಗೆ 11 ಗಂಟೆಗೆ ಬಸನಗೌಡ ಮತ್ತು ಅಖಿಲಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ವಿಜಯಪುರ ನಗರದ ಬಿ. ಎಂ. ಪಾಟೀಲ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆಯ ಹೊಸ ಆವರಣದಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ.