ವಿಜಯಪುರ: ವಿಜಯಪುರ ಮತ್ತು ಬೆಂಗಳೂರು ಮಧ್ಯೆ ವಂದೆ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಉಭಯ ಸಂಸದರಿಗೆ ಪತ್ರ ಬರೆದಿರುವ ಸುನಿಲಗೌಡ ಪಾಟೀಲ ಅವರು, ವಿಜಯಪುರದಿಂದ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳು ಸಂಚಾರ ಸಮಯ ಅನಕೂಲಕರವಾಗಿಲ್ಲ. ಅಲ್ಲದೇ, ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳಿಗಾಗಿ ಮತ್ತು ವ್ಯವಹಾರ ಸಂಬAಧಿ ಕೆಲಸಗಳಿಗಾಗಿ ಹಾಗೂ ಸರಕಾರಿ ಕೆಲಸಗಳಿಗಾಗಿ ಬೆಂಗಳೂರಿಗೆ ತೆರಳುವ ಜನರಿಗೆ ತೊಂದರೆಯಾಗಿದೆ. ಅಲ್ಲದೇ, ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳ ಸಂಚಾರ ಅವಧಿಯೂ ಹೆಚ್ಚಾಗಿದೆ. ಅಷ್ಟೇ ಅಲ್ಲ, ಹಬ್ಬಗಳು ಮತ್ತು ಸಾಲುಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದು ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರರಿಗೆ ತುಂಬಾ ಹೊರೆಯಾಗುತ್ತದೆ. ಜೊತೆಗೆ ಜನರ ಹಬ್ಬದ ಸಂಭ್ರದಮ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ವಿಜಯಪುರದಿಂದ ಪ್ರತಿದಿನ ರಾತ್ರಿ 9 ಗಂಟೆಗೆ ರೈಲು ಸಂಚಾರ ಪ್ರಾರಂಭಿಸಿ ಮರುದಿನ ಬೆಳಿಗ್ಗೆ 6 ಗಂಟೆಗೆ ಅಲ್ಲಿಗೆ ತಲುಪುವಂತಾಗಬೇಕು. ಅದೇ ರೀತಿ ಬೆಂಗಳೂರಿನಿಂದಲೂ ಪ್ರತಿದಿನ ರಾತ್ರಿ 9 ಗಂಟೆ ರೈಲು ಸೇವೆ ಪ್ರಾರಂಭಿಸಿ ಮರುದಿನ ಬೆಳಿಗ್ಗೆ 6 ಗಂಟೆಗೆ ಈ ರೈಲು ವಿಜಯಪುರ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಹಲವಾರು ಪ್ರಾಚೀನ ಸ್ಮಾರಕಗಳನ್ನು ಹೊಂದಿದ್ದು, ದೇಶ- ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಿಜಯಪುರ ನಗರ, ಆಲಮಟ್ಟಿ, ಕೂಡಲ ಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ, ಈ ಭಾಗದಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಸಪೋಟಾ, ಬಾರೆಹಣ್ಣು ಮುಂತಾದ ಹಣ್ಣುಗಳು, ಉತ್ತಮ ಗುಣಮಟ್ಟದ ಜೋಳ ಬೆಳೆಯುತ್ತಿದ್ದಾರೆ. ಅಲ್ಲದೇ, ರೇಷ್ಮೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಕೂಡಗಿ ಎನ್.ಟಿ.ಪಿ.ಸಿ ಯಲ್ಲಿರೂ ಸಾವಿರಾರು ಜನರು ಕೆಲಸ ಮಾಡುತ್ತಿದ್ದು, ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದರಿAದ ಈ ಭಾಗದ ಎಲ್ಲ ರೈತರು, ಜನಸಾಮಾನ್ಯರು, ಅಧಿಕಾರಿಗಳು, ಕಾರ್ಮಿಕರಿಗೆ ವರದಾನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಸಂಸದರು ಹಿರಿಯರಾಗಿದ್ದು ಅವರು ಕೇಂದ್ರ ರೇಲ್ವೆ ಸಚಿವರ ಮೇಲೆ ಒತ್ತಡ ಹಾಕಿದರೆ ಇದರಿಂದ ಅಖಂಡ ವಿಜಯಪುರ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಇಬ್ಬರೂ ಸಂಸದರು ಕ್ರಮ ಕೈಗೊಳ್ಳಬೇಕು. ವಂದೇ ಭಾರತ ರೈಲು ಸೇವೆ ಪ್ರಾರಂಭವಾದರೆ ಅದರ ಶ್ರೇಯಸ್ಸು ಕೂಡ ತಮಗೆ ಸಲ್ಲುತ್ತದೆ. ಈ ರೈಲು ಸೇವೆ ಪ್ರಾರಂಭಿಸಿದ ತಕ್ಷಣ ಆತ್ಮೀಯ ಸಂಸದರಾದ ರಮೇಶ ಜಿಗಜಿಣಗಿ ಮತ್ತು ಪಿ.ಸಿ. ಗದ್ದಿಗೌಡರ ಅವರನ್ನು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರ ಪರವಾಗಿ ಅಭಿನಂದನೆ ಸಮಾರಂಭ ಆಯೋಜಿಸಿ ಸನ್ಮಾನಿಸಲಾಗುವುದು. ಇಬ್ಬರೂ ಸಂಸದರು ಜನರ ಭಾವನೆಗಳಿಗೆ ಸ್ಪಂದಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಸುನೀಲಗೌಡ ಪಾಟೀಲ ಪತ್ರದಲ್ಲಿ ಮನವಿ ಮಾಡಿದ್ದಾರೆ.