ವಿಜಯಪುರ: ತಾಯಿ ಸಾಕ್ಷಿಯಾಗಿ, ದೇವರ ಸಾಕ್ಷಿಯಾಗಿ ಹೇಳುತ್ತಿದ್ದೇವೆ. ಮುಂಬರುವ ಲೋಕಸಭೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರದ ಹಿನ್ನೆಲೆಯಲ್ಲಿ ತಮ್ಮ ಮುಂದಿನ ನಿರ್ಧಾರವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಭಾರತ ಮತ್ತೋಂದು ಇಸ್ರೆಲ್ ಆಗಬಾರದು
ನಾನು, ಶಾಸಕರಾದ ಸುನೀಲಕುಮಾರ, ರಮೇಶ ಜಾರಕಿಹೊಳಿ, ಅರವಿಂದ ಬೆಲ್ಲದ, ಸೋಮಣ್ಣ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಇನ್ನಿತರರೂ ತನು- ಮನದಿಂದ ಬಿಜೆಪಿ ಪರ ಕೆಲಸ ಮಾಡಲಿದ್ದೇವೆ. ತಾಯಿ ಸಾಕ್ಷಿಯಾಗಿ, ದೇವರ ಸಾಕ್ಷಿಯಾಗಿ ನಾವು ಬಿಜೆಪಿ ಚುನಾವಣೆ ಮಾಡುತ್ತೇವೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಬಿಜೆಪಿ ಪರ ಕೆಲಸ ಮಾಡುತ್ತೇವೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ನಾವೆಲ್ಲರೂ ಶ್ರಮಿಸುತ್ತೇವೆ. ತಾಯಿ ಮೇಲೆ ಪ್ರಮಾಣ ಮಾಡುತ್ತೇನೆ. ಮೋದಿ ಪ್ರಧಾನಿಯಾಗಲು ಕೆಲಸ ಮಾಡುತ್ತೇನೆ. 2024ರಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ಭಾರತ ಮತ್ತೊಂದು ಇಸ್ರೇಲ್ ಆಗಬಾರದು. ಭಯೋತ್ಪಾದಕ ರಾಷ್ಟ್ರ ಆಗಬಾರದು. ನಮ್ಮ ಸ್ವಾರ್ಥ ಬಿಡುತ್ತೇವೆ. ನಮಗೆ ಅದು ಕೊಟ್ಟಿಲ್ಲ. ಇದು ಇಲ್ಲ ಎಂದು ಸ್ವಾರ್ಥ ಮಾಡುವುದಿಲ್ಲ.
ಎಲ್ಲ ಅಡೆತಡೆಗಳನ್ನು ನಿವಾರಿಸಿ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ನಾವೇಲ್ಲ ತೀರ್ಮಾನ ಮಾಡಿದ್ದೇವೆ ಎಂದು ಯತ್ನಾಳ ತಿಳಿಸಿದರು.
ವಿ. ಸೋಮಣ್ಣ 6 ನೇ ತಾರಿಖು ಡೆಡ್ ಲೈನ್ ನೀಡಿರುವ ವಿಚಾರ
ಇದೇ ವೇಳೆ, ಮಾಜಿ ಸಚಿವ ವಿ. ಸೋಮಣ್ಣ ಅವರು ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲು ಡಿಸೆಂಬರ್ 6ರ ವರೆಗೆ ಡೆಡಲೈನ್ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದು ಸುಳ್ಳು. ಡಿಸೆಂಬರ್ 6ರ ವರಗೆ ಹೈಕಮಾಂಡ್ ಏನಾದರೂ ಹ ಹೇಳಿರಬಹುದು. ನಿಮ್ಮ ಜೊತೆ ಚರ್ಚೆ ಮಾಡಬಹುದು ಎಂದು ಹೈಕಮಾಂಡ್ ಹೇಳಿರಬಹುದು. ಹೀಗಾಗಿ ಡಿಸೆಂಬರ್ 6 ಎಂದು ಸೋಮಣ್ಣ ಡೆಡಲೈನ್ ಹೇಳಿರಬಹುದು ಎಂದು ಯತ್ನಾಳ ತಿಳಿಸಿದರು.
ಡಿಸಿಎಂ ಡಿ. ಕೆ. ಶಿವಕುಮಾರ ವಿರುದ್ದ ಸಿಬಿಐ ತನಿಖೆ ಕೈಬಿಡುವುದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ
ಇದೇ ವೇಳೆ ಡಿಸಿಎಂ ಡಿ. ಕೆ. ಶಿವಕುಮಾರ ವಿರುದ್ಧ ಸಿಬಿಐ ನಡೆಸುತ್ತಿರುವ ಪ್ರಕರಣ ಹಿಂಪಡೆಯುವ ಕುರಿತು ಸಚಿವ ಸಂಪುಟ ನಿರ್ಧರಿಸಿರುವ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಕ್ಯಾಬಿನೆಟ್‌ನಲ್ಲಿ ನಿನ್ನೆ ತೆಗೆದುಕೊಂಡ ನಿರ್ಧಾರ ಅಕ್ರಮವಾಗಿದೆ. ಈಗಾಗಲೇ ಶೇ. 90ರಷ್ಟು ಸಿಬಿಐ ತನಿಖೆಯಾಗಿದೆ. ಈ ಹಿಂದೆ ಕ್ಯಾಬಿನೆಟ್ ನಲ್ಲಿ ಮನಸ್ಸಿರಲಿಲ್ಲ. ಆದರೂ ಕೇಂದ್ರ ಸರಕಾರದ ಒತ್ತಾಯದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲು ನಿರ್ಣಯವಾಗಿತ್ತು. ನಂತರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇದನ್ನು ಸ್ಕ್ವ್ಯಾಶ್ ಮಾಡಲಾಗಿತ್ತು. ಬಳಿಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ಪ್ರಕರಣ ಹೋಗಿತ್ತು. ಆದರೆ, ಅದಕ್ಕೆ ತಡೆಯಾಜ್ಞನೆ ನೀಡಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಚುರುಕಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ ಪರ ವಾದ ಮಾಡಿರುವ ಶಶಿಕಿರಣ ಶೆಟ್ಟಿ ಅವರೇ ಈಗ ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ಬಳಿಕ ಕ್ಯಾಬಿನೆಟ್ ಈ ಕೇಸ್ ನಲ್ಲಿ ವಾಪಸ್ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಈ ಕುರಿತು ನಾನು ಟ್ವಿಟ್ ಮಾಡಿದ್ದೇನೆ. ಈ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ನ್ಯಾಯಾಲಯದ ಮೊರೆ ಹೋಗುವೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಯಾರಾರು ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ತಮ್ಮ ಸರಕಾರ ಇದೆ ಎಂದು ಬೇಕಾಬಿಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸರಕಾರಕ್ಕಿಲ್ಲ. ನ್ಯಾಯವಾದಿಗಳ ಜೊತೆಗೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.