ವಿಜಯಪುರ: ರಾಜ್ಯ ಸಚಿವ ಸಂಪುಟ ಕಾನೂನು ಪ್ರಕಾರವೇ ಡಿಸಿಎಂ ಡಿ. ಕೆ. ಶಿವಕುಮಾರ ವಿರುದ್ಧ ಸಿಬಿಐ ತನಿಖೆಗೆ ನೀಡಿರುವ ಆದೇಶ ರದ್ದು ಪಡಿಸುವಂತೆ ಶಿಫಾರಸು ಮಾಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಈ ನಿರ್ಧಾರದಿಂದ ಕಾನೂನು ಸಮರಕ್ಕೆ ಕಾರಣವಾಗಬಹುದಾ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ತೀಕ್ಷ್ಣವಾಗಿ ಉತ್ತರಿಸಿದರು. ಸಿಬಿಐ ಈ ವಿಚಾರದಲ್ಲಿ ಬೇಕಿದ್ದರೆ ಕೋರ್ಟಿಗೆ ಹೋಗಲಿ. ಸಿಬಿಐ ಕೋರ್ಟಿನಲ್ಲಿ ಚಾಲೆಂಜ್ ಮಾಡಬೇಡಿ ಎಂದು ಯಾರೂ ಹೇಳಲು ಆಗುವುದಿಲ್ಲ. ವಿಚಾರಣೆ ಏದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಾನೂನಿನ ಮೂಲಕವೇ ಸರಕಾರ ಈ ವಿಚಾರದಲ್ಲಿ ಮುಂದುವರೆದಿದೆ. ಅಡ್ವೇಕೇಟ್ ಜನರಲ್ ಸಲಹೆ ಆಧಾರದ ಮೇಲೆ ಸಿಬಿಐಗೆ ನೀಡಲಾಗಿರುವ ಅನುಮತಿಯನ್ನು ವಾಪಸ್ ಪಡೆದಿದೆ. ಅನುಮತಿ ನೀಡುವಾಗ ಅವರದೇ ಅಡ್ವಕೇಟ್ ಜನರಲ್ ಇದ್ದರು. ಈಗ ಅಡ್ವಕೇಟ್ ಜನರಲ್ ವಿಭಿನ್ನವಾಗಿ ಅಭಿಪ್ರಾಯ ನೀಡಿದ್ದಾರೆ. ಈ ಹಿಂದೆ ಬಿಜೆಪಿಯವರು ಕ್ಯಾಬಿನೆಟ್ ನಲ್ಲಿ ಪಾಸ್ ಆದ ಬಳಿಕ ಅಡ್ವಕೇಟ್ ಜನರಲ್ ಅಭಿಪ್ರಾಯ ಪಡೆದಿದ್ದರು ಎನ್ನುವ ಆರೋಪ ಕೇಳಿ ಬರುತ್ತಿದೆ. ಡಿ. ಕೆ. ಶಿವಕುಮಾರ ವಿರುದ್ಧ ಷಡ್ಯಂತ್ರ ಹಣೆಯಲಾಗಿದೆ ಎಂದು ಅನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಿಬಿಐ ತನಿಖೆ ವಾಪಸ್ ನಿರ್ಣಯ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ, ರಾಜಕೀಯ ಅಜೆಂಡಾಗಳಿಗಾಗಿ ಪ್ರತಿಪಕ್ಷಗಳ ಆತ್ಮ ಸ್ಥೈರ್ಯ ಕುಗ್ಗಿಸಬೇಕು ಎಂದು ಐಟಿ, ಇಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಮೇಲೆ ಯಾಕೆ ದಾಳಿಯಾಗುವುದಿಲ್ಲ ಎಂದು ಸಚಿವುರ ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.
ನಿಮ್ಮ ಸರಕಾರ ಇರುವ ಕಡೆಗಳಲ್ಲಿ ಹಗರಣಗಳಿವೆ. ಅಲ್ಲಿ ಯಾಕೆ ಸಿಬಿಐ ದಾಳಿ ಮಾಡಲ್ಲ? ಪ್ರತಿ ಪಕ್ಷಗಳ ಮೇಲೆ ಯಾಕೆ ದಾಳಿಗಳಾಗುತ್ತವೆ? ಎಂದು ಪ್ರಶ್ನೆ ಮಾಡಿದ ಎಂ. ಬಿ. ಪಾಟೀಲ ಅವರು, ಬಿಜೆಪಿ ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ಡಿಕೆ ಶಿವಕುಮಾರ್ ವಿರುದ್ಧ ಯತ್ನಾಳ್ ಕೋರ್ಟ್‌ಗೆ ಹೋಗುವ ವಿಚಾರ
ಇದೇ ವಿಚಾರದ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಬಹಳ ರಾಜ್ಯಗಳಲ್ಲಿ ಈ ರೀತಿಯ ಸಂಘರ್ಷ ನಡೆಯುತ್ತಿದೆ. ಯತ್ನಾಳ ಮಾತ್ರ ಕೋರ್ಟಿಗೆ ಹೋಗುತ್ತಾರಾ? ಅಥವಾ ಅವರ ಪಕ್ಷದವರು ಹೋಗುತ್ತಾರಾ ಎಂದು ಪ್ರಶ್ನಿಸಿದರು.
ಯತ್ನಾಳ ಕೋರ್ಟಿಗೆ ಹೋಗೋದಾದರೆ ಹೋಗಲಿ. ಅವರ ಪಕ್ಷದವರ ಮೇಲೆ ಯತ್ನಾಳ್ ಗೆ ವಿಶ್ವಾಸ ಇಲ್ಲ ಎನ್ನುವಂತಾಗಿದೆ. ನನಗೆ ತಿಳಿದಂತೆ ಅವರ ಪಕ್ಷದವರು ಹೋರಾಟ ಮಾಡುತ್ತಾರೆ ಎಂದು ಕೊಂಡಿದ್ದೇನೆ. ಯತ್ನಾಳ್ ಇಬ್ಬರೇ ಮಾಡುತ್ತಾರೆ ಅಂದರೆ ಅವರ ಪಕ್ಷವೇ ಬೇರೆ ಇರಬಹುದು ಎಂದು ಸಚಿವರು ವ್ಯಗ್ಯವಾಡಿದರು.
ಬಿ. ವೈ. ವಿಜಯೆಂದ್ರ, ಆರ್ ಅಶೋಕಮಠಗಳಿಗೆ ಭೇಟಿ ವಿಚಾರ
ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷದ ನೂನತ ನಾಯಕ ಆರ್. ಅಶೋಕ ಮಠಗಳಿಗೆ ಭೇಟಿ ನೀಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿ. ವೈ. ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿದ್ದಾರೆ, ಆರ್. ಅಶೋಕ ಪ್ರತಿಪಕ್ಷದ ನಾಯಕರಾಗಿದ್ದಾರೆ. ಮಠಗಳಿಗೆ ಭೇಟಿ ನೀಡುವುದು ಸ್ವಾಭಾವಿಕ. ಅದರಿಂದ ಏನು ಪ್ರಯೋಜನಾಗಲ್ಲ. ವಿಜಯೇಂದ್ರ ನೇಮಕದ ಬಳಿಕ ಬಿಜೆಪಿಯಲ್ಲಿ ಎಷ್ಟು ಅಸಮಾಧಾನ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.
ವಿಜಯೇಂದ್ರ ನೇಮಕ ಬಳಿಕ ಬಿಜೆಪಿಯಲ್ಲಿ ಅಸಮಧಾನ ವಿಚಾರ
ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವುರ, ಬಿಜೆಪಿ ಹೈಕಮಾಂಡ್ ನಿರ್ಧಾರದಿಂದ ವಿ. ಸೋಮಣ್ಣ, ಸಿ. ಟಿ. ರವಿ, ಯತ್ನಾಳ ಸೇರಿದಂತೆ ನಾನಾ ಮುಖಂಡರು ಅಸಮಾಧಾನಗೊಂಡಿದ್ದಾರೆ. ಸೋಮಣ್ಣ ಅವರನ್ನು ಬಲಿ ಪಶು ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನಿಲ್ಲಿಸಿ ಬಲಿ ಪಶು ಮಾಡಿದ್ದಾರೆ. ಎರಡೂ ಕಡೆಗೆ ನಿಲ್ಲಿಸಿ ಸೋಮಣ್ಣರನ್ನ ಬಲಿ ಪಶು ಮಾಡಲಾಗಿದೆ. ಬೆಂಗಳೂರಿನಲ್ಲಿ ಅವರು ನಿಂತಿದ್ದರೂ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಿದ್ದರು ಎಂದು ಸಚಿವರು ತಿಳಿಸಿದರು.
ಪ್ರತಿಪಕ್ಷಗಳ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರ
ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಅಸಮಾಧಾನ ಹೊಂದಿರುವ ಶಾಸಕರು ಮತ್ತು ನಾಯಕರು ಅಸಮಾಧಾನ ಹೊಂದಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ನನಗೂ ಬಹಳಷ್ಟು ಜನ ಸಂಪರ್ಕ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ, ಸಿದ್ದರಾಮಯ್ಯರಿಗೆ, ಜಾರಕಿಹೊಳಿ ಅವರಿಗೆ ಸಂಪರ್ಕ ಮಾಡಿದ್ದಾರೆ. ಬಹಳಷ್ಟು ಜನ ಬಹಳಷ್ಟು ಜನರ ಸಂಪರ್ಕದಲ್ಲಿದ್ದಾರೆ. ಕಾದು ನೋಡಿ. ಲೋಕಸಭೆ ಚುನಾವಣೆ ಹೊತ್ತಿಗೆ ಮತ್ತು ಚುನಾವಣೆ ನಂತರ ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆ ಆಗಲಿವೆ. ವಿ. ಸೋಮಣ್ಣ ಅವರು ಬಿಜೆಪಿಗೆ ಡೆಡ್ ಲೈನ್ ವಿಚಾರದ ಕುರಿತು ಕಾದು ನೋಡೋಣ ಎಂದು ಅವರು ತಿಳಿಸಿದರು.
ಜಾತಿ ಸಮೀಕ್ಷೆ ವಿರೋಧ ವಿಚಾರ
ಲಿಂಗಾಯತ ಮತ್ತು ಒಕ್ಕಲಿಗರು ಜಾತಿಗಣತಿ ಮಂಡನೆಗೆ ವಿರೋಧ ಮಾಡುತ್ತಿರುವ ಕುರಿತು ನಾನು ಸಿಎಂ ಜೊತೆ ಮಾತನಾಡುತ್ತೇನೆ. ಸಿಎಂ ಬಳಿ ನಾನು ನನ್ನ ಅಧಿಕೃತ ನಿಲುವು ಸ್ಪಷ್ಟ ಪಡೆಸುತ್ತೇನೆ. ಕೆಲವೊಂದು ವಿಚಾರ ಇವೆ. ಅವುಗಳ ಕುರಿತೂ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಜಾತಿ ಗಣತಿಯಿಂದ ಜಾತಿಗಳ ನಡುವೆ ಸಂಘರ್ಷದ ವಿಚಾರಗಳ ಬಗ್ಗೆ ಏನೇ ವಿಷಯಗಳಿದ್ದರೂ ಪಕ್ಷ ಮತ್ತು ಸರಕಾರದ ಚೌಕಟ್ಟಿನಲ್ಲಿ ಮಾತನಾಡುತ್ತೇನೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸುತ್ತೇವೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.