ಬಸವ ನಾಡಿನಲ್ಲಿ ಗಮನ ಸೆಳೆದ ಗಣವೇಷಧಾರಿಗಳ ಪಥ ಸಂಚಲನ- ಜಾತಿ, ಸಮಾಜ ವಿಂಗಡಣೆ ಬಗ್ಗೆ ಎಚ್ಚರಿಕೆ ಅಗತ್ಯ- ನರೇಂದ್ರ

ವಿಜಯಪುರ: ಕೊರೊನಾದಂಥ ಅನೇಕ ವೈರಸ್ ನಮ್ಮ ಜೊತೆಗಿದ್ದು ಜಾತಿಗಳ ನಡುವೆ ವಿಘಟನೆ ಮತ್ತು ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ  ಪ್ರಯತ್ನ ಮಾಡುತ್ತವೆ ಎಂದು ಆರ್ ಎಸ್ ಎಸ್ ಉತ್ತರ ಕರ್ನಾಟಕ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದ್ದಾರೆ.

ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಆರ್ ಎಸ್ ಎಸ್ ನಗರ ವಾರ್ಷಿಕೋತ್ಸವದತ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೂ ಎಂಬುದು ಕೇವಲ ಮೆರವಣಿಗೆಯ ಘೋಷಣೆಗೆ ಸೀಮಿತವಾಗಬಾರದು.  ಪ್ರತಿದಿನ ಹಿಂದೂ ಆಗಬೇಕು.  ಹಿಂದೂ ಸಮಾಜ ಎಷ್ಟು ಬೇಗ ಸಂಘಟಿತವಾಗುತ್ತದೆಯೋ ಅಷ್ಟೇ ಸಮಯದಲ್ಲಿ ಗುಂಪುಗಳಾಗಿ ವಿಭಜನೆಯಾಗುತ್ತದೆ.  ಇದು ಸಮಾಜಕ್ಕೆ ದೊಡ್ಡ ಸವಾಲಾಗಿದೆ.  ದುಷ್ಟಶಕ್ತಿಗಳು ಈ ರೀತಿಯ ಸವಾಲುಗಳನ್ನು ಭಾರತದ ಯಾವಾಗಲೂ ಇರಿಸುತ್ತಿರುತ್ತವೆ.  ಅವುಗಳನ್ನು ನಾವು ಸಂಘಟಿತರಾಗಿ ಸಮರ್ಥವಾಗಿ ಎದುರಿಸಬೇಕಿದೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ನಡೆದ ಆರ್ ಎಸ್ ಎಸ್ ನಗರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನರೇಂದ್ರ ಮಾತನಾಡಿದರು

ಅಧಿಕಾರಿಯೊಬ್ಬರನ್ನು ನಾವು ಕರೆದು ಚಹಾ ಕುಡಿಸುತ್ತೇವೆ.  ಆದರೆ ಪೌರ ಕಾರ್ಮಿಕ ಬಂಧುಗಳನ್ನು ಕರೆದು ಚಹಾ ಕುಡಿಸುತ್ತೆವೆಯೇ? ಈ ಕಾರಣಕ್ಕಾಗಿಯೇ ಅವರು ರಾಬರ್ಟ್ ‌ಮೊದಲಾದ ಹೆಸರುಗಳನ್ನು ಪಡೆಯುವಂತೆ ಮಾಡುತ್ತಿದ್ದೇವೆ.  ಅನೇಕ ವೈರುದ್ಯಗಳು ಎದುರಿಸುತ್ತಿರುವ‌ ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಭಾರತ ಆಶಾಕಿರಣ ಮತ್ತು ಪರಿಹಾರವಾಗಿದೆ.  ಭಾರತದ ವಸುದೈವ‌ ಕುಟುಂಬಕಂ ಎಂಬ ಧ್ಯೆಯವೇ ಇಡೀ ಜಗತ್ತನ್ನು ಕೇಂದ್ರಿಕರಿಸುತ್ತಿದೆ.  ಹೀಗಾಗಿ ಎಲ್ಲ ದೇಶಗಳನ್ನು ಸಕ್ಷಮ ಮಾರ್ಗದಲ್ಲಿ ಸಾಗಿಸಬೇಕಾದ ಆದ್ಯ ಜವಾಬ್ದಾರಿ ಭಾರತದ ಮೇಲಿದೆ.  ಕೊರೊನಾ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳು ಕೋವಿಡ್ ಲಸಿಕೆ ಕಪಾಟಿನಲ್ಲಿರಿಸಿಕೊಂಡಿದ್ದವು.  ಆದರೆ, ಭಾರತ ಮಾತ್ರ ಲಸಿಕೆಗಳನ್ನು‌ ಬೇರೆ ಬಡ ರಾಷ್ಟ್ರಗಳಿಗೂ ನೀಡಿ ಮಾನವೀಯತೆ ಮೆರೆದಿದೆ ಎಂದು ಅವರು ಹೇಳಿರು.

ಜಗತ್ತಿನ ಸಿಂಹಾಸನದ ಮೇಲೆ ಭಾರತಮಾತೆ

ಭಾರತ ಮಾತೆ ಜಗತ್ತಿನ ಸಿಂಹಾಸನದ ಮೇಲೆ ಆನಂದದಿಂದ ವಿರಾಜಮಾನವಾಗುವಂತೆ ಮಾಡುವುದು, ದುಷ್ಟಶಕ್ತಿಗಳು ನಮ್ಮ ಭಾರತದತ್ತ ಕಣ್ಣೆತ್ತಿ ನೋಡದಂತೆ ಮಾಡುವುದು ಆರ್ ಎಸ್ ಎಸ್ ಪ್ರಮುಖ ಧ್ಯೇಯವಾಗಿದೆ.  ದೇಶಭಕ್ತಿ ಒಂದು ಸ್ವಭಾವವಾಗಬೇಕು.  ಈ ಸ್ವಭಾವವನ್ನೇ ಬೆಳೆಸುವುದೂ ಸಂಘದ ಕರ್ತವ್ಯ ಎಂದು ಅವರು ಹೇಳಿದರು.

ಸಂವಿಧಾನ ಸಮರ್ಪಣೆ ಸಂದರ್ಭದಲ್ಲಿ ಡಾ. ಬಾಬಾಸಾಹೇಬರು ತಮ್ಮ ಭಾಷಣದಲ್ಲಿ ಅನೇಕ ಸಂದರ್ಭದಲ್ಲಿ ಹಿಂದೂ ಸಮಾಜ ಒಂದಾಗಲಿಲ್ಲ.  ಇದು ಮತ್ತೆ ಎಲ್ಲಿ ಮರಕಳುಸುತ್ತಿದ್ದೇಯೋ ಎಂಬ ಆತಂಕ ಹೊರಹಾಕಿದ್ದರು.  ಮೊಘಲ್ ಆಕ್ರಮಣ, ಆಂಗ್ಲಕ ಆಳ್ವಿಕೆ ಹೀಗೆ ಅನೇಕ ವಿಷಯ ಉಲ್ಲೇಖಿಸಿ ಹಿಂದೂ ಸಮಾಜ ಒಂದಾಗಲಿಲ್ಲ ಎಂಬ ಆಂತಕವನ್ನು ಡಾ. ಬಾಬಾಸಾಹೇಬರು ಅಂದೇ ವ್ಯಕ್ತಪಡಿಸಿದ್ದರು.  ಮಹಾಭಾರತ ಯುದ್ಧದ ನಂತರ ಅನೇಕ ವೈಭವದಿಂದಾಗಿ ಹಿಂದೂ ಸಮಾಜ ಕಂಗೊಳಿಸಿತ್ತು.  ಆದರೆ, ನಂತರ ತನ್ನನ್ನು ತಾನು ಮರೆತುಕೊಂಡಿತು.  ಇದರಿಂದ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವಂತಾಯಿತು.  ನಿರಂತರ ಆಕ್ರಮಣದಿಂದಾಗಿ ಉಂಟಾದ ಅನೇಕ ಬಿರುಕುಗಳನ್ನು ಸರಿಮಾಡಲು ನಮ್ಮ ಸಾಧು- ಸಂತರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ.  ಒಳಜಗಳ, ಮೇಲು- ಕೀಳು ಎಂಬ ಮನೋಭಾವದಿಂದಾಗಿ ಹಿಂದೂ ಸಮಾಜಕ್ಕೆ ಭವಿಷ್ಯವಿಲ್ಲ ಎಂದು ಅನೇಕರು ಭಾವಿಸಿದ್ದರು, ಆದರೆ ಅಂದು ತರುಣ ಯುವಕ ಡಾ. ಹೆಗಡೆವಾರ ಆರ್ ಎಸ್ ಎಸ್ ಸ್ಥಾಪಿಸಿ ಹಿಂದೂ ಸಮಾಜಕ್ಕೆ ಎದುರಾಗಿದ್ದ ಕೊರತೆಯನ್ನು ನೀಗಿಸಿದರು ಎಂದು ನರೇಂದ್ರ ಹೇಳಿದರು.

ನಗರದ ಖ್ಯಾತ ವೈದ್ಯ ಡಾ. ರಮೇಶ ಮಾನಕರೆ ಮಾತನಾಡಿ, ಹಿಂದೂಗಳನ್ನು ಒಗ್ಗೂಡಿಸಿ ಹಿಂದೂ ರಾಷ್ಟ್ರ ನಿರ್ಮಾಣವೇ ಆರ್ ಎಸ್ ಎಸ್ ಧ್ಯೇಯವಾಗಿದ್ದು, ಹಿಂದೂ ಸಂಸ್ಕೃತಿಯೇ ಆರ್ ಎಸ್ ಎಸ್ ಉಸಿರಾಗಿದೆ.  ಸತ್ಯ, ಒಳ್ಳೆಯ ನಡತೆ, ಪ್ರೀತಿ, ಶಾಂತಿ ತತ್ವಗಳು ಹಿಂದೂ ಧರ್ಮದ ಸಂಹಿತೆಗಳಾಗಿವೆ.  ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ವಯಂ ಸೇವಕರು ಸದಾ ಸೇವೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ.  ಇದು ಅವರ ಸೇವಾ ಬದ್ದತೆಗೆ ಸಾಕ್ಷಿಯಾಗಿದೆ.  ಝಾರ್ಖಂಡ್ ರಾಜ್ಯದಲ್ಲಿ ಹಿಂದುಳಿದ ಪ್ರದೇಶವೊಂದರಲ್ಲಿ ಆರ್ ಎಸ್ ಎಸ್ ಸ್ವಯಂ ಸೇವಕರು ಮಾಡಿದ ಸಮಾಜ ಸೇವೆ ಅನನ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿದಂಬರ ಕರಮಣಕರ, ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪೂರ,ಮಾಜಿ ಶಾಸಕ ರಮೇಶ ಭೂಸನೂರ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಡಾ. ಬಾಬು ರಾಜೇಂದ್ರ ನಾಯಕ ಸೇರಿದಂತೆ ಸಾವಿರಾರು ಗಣವೇಷಧಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಗುಮ್ಮಟ ನಗರಿಯಲ್ಲಿ ಗಮನ ಸೆಳೆದ ಆರ್ ಎಸ್ ಎಸ್ ಪಥ ಸಂಚಲನ

ಇದಕ್ಕೂ ಮುಂಚೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಆರ್ ಎಸ್ ಎಸ್ ಗಣವೇಶಧಾರಿಗಳ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.  ಸಂಘದ ಸಮವಸ್ತ್ರ ಧರಿಸಿದ ಸಾವಿರಾರು ಗಣ ವೇಷಧಾರಿಗಳು ಕೈಯಲ್ಲಿ ಶಿಸ್ತುಬದ್ದವಾಗಿ ಲಾಠಿ ಹಿಡಿದುಕೊಂಡು ಏಕಕಾಲಕ್ಕೆ ಹೆಜ್ಜೆ ಹಾಕಿದರು.  ಸಾಲಂಕೃತ ವಾಹನದಲ್ಲಿ ಸಂಘದ ಸಂಸ್ಥಾಪಕ ಡಾ. ಕೇಶವಜೀ ಹೆಗಡೆವಾರ ಹಾಗೂ ಸಂಘವನ್ನು ಬೆಳೆಸಿದ‌ ಮಹನೀಯರ ಭಾವಚಿತ್ರವನ್ನು ಇರಿಸಿ ಗೌರವಿಸಲಾಯಿತು.  ದಾರಿಯುದ್ದಕ್ಕೂ ಪಥಸಂಚಲನ ನಿರತ ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಟಿ ಮಾಡಿದರು.  ಮಾರ್ಗದುದ್ದಕ್ಕೂ ಅಲ್ಲಲ್ಲಿ ಚಿತ್ತಾಕರ್ಷಕ ರಂಗೋಲ್ಲಿ ಹಾಕಲಾಗಿತ್ತು.  ಪುಟಾಣಿ ಮಕ್ಕಳೂ ಕೂಡ ಸಂಘದ ಗಣವೇಷಧರಿಸಿ, ಭಾರತ ಮಾತಾ ಕೀ ಜೈ ಎಂಬ ಉದ್ಗೋಷ ಹಾಕಿ ಪುಷ್ಪವೃಷ್ಟಿ ಮಾಡಿದರು.  ಸಂಘದ ಸ್ವಯಂ ಸೇವಕ ತಂಡದ ವಾದ್ಯವೃಂದದ ಸಂಗೀತ ಮೆರವಣಿಗೆಗೆ ಕಳೆ ನೀಡಿತು

ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಆರಂಭದ ಪಥ ಸಂಚಲನೆ ಶಿವಾಜಿ ಚೌಕವೃತ್ತ, ಉಪ್ಪಲಿ ಬುರುಜ್, ಡೋಬಳ ಗಲ್ಲಿ, ರಾಮಮಂದಿರ, ಡಾ. ಹೆಗಡೆವಾರ ವೃತ್ತ ಸೇರಿದಂತೆ ನಾನಾ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಗಾಂಧಿವೃತ್ತದಲ್ಲಿ ಸಂಗಮಗೊಂಡಿತು.  ನಂತರ ಅಲ್ಲಿಂದ ಪುನ: ಸಮಾವೇಶ ನಡೆಯಲಿರುವ ದರಬಾರ ಹೈಸ್ಕೂಲ್ ಮೈದಾನದವರೆಗೂ ಪಥ ಸಂಚಲನ ನಡೆಯಿತು.

ದರಬಾರ ಹೈಸ್ಕೂಲ್ ಆವರಣದಲ್ಲಿ ಸ್ವಯಂ ಸೇವಕರು ಆತ್ಮರಕ್ಷಣೆಯ ಸಾಹಸ ಕಲೆಯನ್ನು ಪ್ರದರ್ಶಿಸಿದರು.  ಏಕಾಗ್ರತೆ ಸವಾಲು ಎದುರಿಸುವ ನಿಟ್ಟಿನಲ್ಲಿ ಪೂರಕವಾದ ರೈಲು ಬಂಡಿ, ಗುಹೆ ಪ್ರವೇಶ ಹೀಗೆ ಅನೇಕ ಆಟಗಳನ್ನು ಆಡಿ ಗಮನ ಸೆಳೆದರು.

Leave a Reply

ಹೊಸ ಪೋಸ್ಟ್‌