ಸಂವಿಧಾನ ಸಮಾನತೆ ನೀಡಿದ್ದರೂ ಮಹಿಳೆಯರು ಇನ್ನೂ ವಂಚಿತರಾಗುತ್ತಿರುವುದು ವಿಷಾಧನೀಯ- ಪ್ರೊ. ಚಂದ್ರಮ್ಮ

ವಿಜಯಪುರ: ನಮ್ಮ ಸಂವಿಧಾನವು ಮಹಿಳೆಯರಿಗಾಗಿ ಸಮಾನ ವೇತನ ಕಾಯಿದೆ, ಮಾತೃತ್ವ ಸವಲತ್ತು ಕಾಯಿದೆ, ಬಹು ಪತ್ನಿತ್ವ ನಿಷೇಧ ಕಾಯಿದೆ, ಅಂತರ್ಜಾತಿ ವಿವಾಹ ಕಾಯಿದೆ ಸೇರಿದಂತೆ ಹಲವಾರು ವಿಧಿಗಳನ್ನು ನೀಡಿದ್ದರು ಇಂದಿಗೂ ಹಲವು ಕಡೆಗಳಲ್ಲಿ ಮಹಿಳೆಯರು ಇದರಿಂದ ವಂಚಿತರಾಗುತ್ತಿರುವುದು ವಿಷಾದನೀಯ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವೆ ಪ್ರೊ. ಚಂದ್ರಮ್ಮ ಎಂ. ಅಭಿಪ್ರಾಯಪಟ್ಟಿದ್ದಾರೆ.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಹಿಳಾ ಅಧ್ಯಯನ ಕೇಂದ್ರ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿಡಿದ್ದ ಸಂವಿಧಾನ ದಿನ ಕಾಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕ ವಲಯ ಇಂದಿಗೂ ಅದೆಷ್ಟೋ ದೌರ್ಜನ್ಯಕ್ಕೆ ಒಳಗಾಗುತ್ತಿವೆ. ಮಹಿಳೆಯರು ದೇಶದಲ್ಲಿ ಇಂದಿಗೂ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಉಳಿದಿದ್ದಾರೆ.  ನಮ್ಮ ಯಾವುದೇ ಧರ್ಮಗಳು ಮಹಿಳೆಯರಿಗೆ ಮೊದಲ ಆದ್ಯತೆ ನೀಡಿಲ್ಲ.  ಆದರೆ ನಮ್ಮ ಸಂವಿಧಾನ ಮಹಿಳೆಯರಿಗೆ ಸಿಗಬೇಕಾದ ಎಲ್ಲಾ ಹಕ್ಕುಗಳನ್ನು ನೀಡಿದೆ ಎಂದು ಹೇಳಿದರು.

ವಿವಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಮಾತನಾಡಿ, ಸಂವಿಧಾನ ದಿನದ ಪ್ರಮುಖ ಉದ್ದೇಶವೇ ಸಂವಿಧಾನದ ಕುರಿತು ಎಲ್ಲರಲ್ಲೂ ಅರಿವು ಮೂಡಿಸುವುದು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸುವುದು ಎಂದು ಹೇಳಿದರು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕುಲಪತಿ ಡಾ. ಬಿ. ಕೆ. ತುಳಸಿಮಾಲಾ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು

ಇಂದಿನ ದಿನ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ.  ಏನೆಂದರೆ ಡಾ. ಅಂಬೇಡ್ಕರ ಅವರ ಚಿಂತನೆ ಏನಾಗಿತ್ತು? ಅವರ ಕನಸು ಏನಾಗಿತ್ತು? ಸಂವಿಧಾನದ ಮಾರ್ಗ ಸೂಚಿಸಿರುವುದು ಏನು? ಅದರ ಮಾರ್ಗದಲ್ಲಿ ನಾವು ನಡೆದಿದ್ದೇವೆಯೇ? ಇವೆಲ್ಲದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಕಣ್ಣನ್ ಮಾತನಾಡಿ, ನಮಗೆ ಸ್ವಾತಂತ್ರ್ಯ ಸಿಕ್ಕ ಮೇಲೂ ಸಂಪೂರ್ಣ ಸ್ವಾತಂತ್ರ ಸಿಕ್ಕಿರಲಿಲ್ಲ.  ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದ್ದು 1949, ನವೆಂಬರ್ 26 ರಂದು.  ಜನರಿಗೆ, 1949ಕ್ಕೂ ಮೊದಲು ಪ್ರಜೆ ಎಂಬ ಕಲ್ಪನೆಯೇ ಇರಲಿಲ್ಲ.  ಪ್ರಜೆ ಎಂಬ ಹಕ್ಕು ದೊರಕಿರುವುದು ಸಂವಿಧಾನದಿಂದ ಎಂದು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನ ಮಹಿಳೆಯರ ಸಮಾನತೆ ಹಾಗೂ ಸ್ವಾತಂತ್ರವನ್ನು ಎತ್ತಿಹಿಡಿದಿದೆ.  ಸಂವಿಧಾನದ 14, 15, 16, ಹಾಗೂ 21ನೇ ಕಲಂಗಳು ನಮ್ಮ ಸ್ವಾತಂತ್ರಕ್ಕಾಗಿಯೇ ರಚಿಸಲಾಗಿದೆ.  ಇಂದಿನ ಯುವ ಸಮುದಾಯ ಸಂವಿಧಾನವನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದು ಪ್ರೊ.ಲಕ್ಷ್ಮಿದೇವಿ ವೈ.  ಹೇಳಿದರು.

ಸಂವಿಧಾನ ದಿನದ ಅಂಗವಾಗಿ ನಡೆದ ರಸಪ್ರಶ್ನೆ ಹಾಗೂ ಭಾಷಣ ಸರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರೊ. ಚಂದಮ್ಮ ಎಂ. ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಡಿ. ಎಂ. ಮದರಿ, ಡಾ. ರಾಜ್ಕುಮಾರ್ ಮಾಲಿಪಾಟೀಲ, ಸೇರಿದಂತೆ ನಾನಾ ವಿಭಾಗಗಳ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು, ಸಂಶೋಧನೆ ವಿದ್ಯಾರ್ಥಿಗಳು ಹಾಗೂ ಸ್ನಾತ್ತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಯೋಜನಾ ಕೋಶದ ಸಂಯೋಜನಾಧಿಕಾರಿ ಪ್ರೊ. ಶಾಂತಾದೇವಿ ಟಿ. ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.  ಡಾ. ಸರೋಜ ಸಂತಿ ಪರಿಚಯಿಸಿದರು.  ಡಾ. ಶಶಿಕಲಾ ರಾಠೋಡ ಕಾರ್ಯಕ್ರಮ ನಿರೂಪಿಸಿದರು.  ಸಹಾಯಕ ಪ್ರಾಧ್ಯಾಪಕಿ ಡಾ. ಕಲಾವತಿ ಕಾಂಬಳೆ, ವಂದಿಸಿದರು.

Leave a Reply

ಹೊಸ ಪೋಸ್ಟ್‌