ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಬಾರಿಯೂ ನನಗೇ ಟಿಕೆಟ್ ಸಿಗುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವಿಷಯದಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಯಾರಿಗೆ ಟಿಕೆಟ್ ಕೊಡುತ್ತಾರೆ ಅವರು ಅಭ್ಯರ್ಥಿಯಾಗುತ್ತಾರೆ. ನಾನೇ ಅಭ್ಯರ್ಥಿಯಾಗಬೇಕು ಎಂದು ಹಟ ಇಲ್ಲ. ಯಾರು ಗೆಲ್ಲುತ್ತಾರೆ? ಗೆಲ್ಲಲು ಸಾಧ್ಯವಿದೆ ಅದರ ಕುರಿತು ಪಕ್ಷದವರು ಯೋಚನೆ ಮಾಡಿ ಟಿಕೆಟ್ ಕೊಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಪಕ್ಷದವರು ನನಗೇ ಟಿಕೆಟ್ ಕೊಟ್ಟೆ ಕೊಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದಿಂದ ರಾಜಕಾರಣ ಆಗುವುದಿಲ್ಲ. ಎಲ್ಲ ಸಮಾಜಗಳನ್ನು ಜೊತೆಗೆ ಕಟ್ಟಿಕೊಂಡು ಹೋದರೆ ಅದು ಒಳ್ಳೆಯ ರಾಜಕಾರಣ ಆಗುತ್ತದೆ ಎಂಬುದು ನನ್ನ ಅನುಭವದ ಮಾತು. ಆದ್ದರಿಂದ ನಾನು ಜಿಲ್ಲೆಯಲ್ಲಿ ಎಲ್ಲ ಜನರ ಜೊತೆ ಎಲ್ಲ ಸಮಾಜದವರ ಜೊತೆ ನಾನು ಬಸವಣ್ಣನವರು ಹೇಳಿದಂತೆ ಅತ್ಯಂತ ಸಣ್ಣವನಾಗಿ ಒಡನಾಡಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸಾಧ್ಯವಾದಷ್ಟು ಏನೇನು ಕೆಲಸ ಮಾಡಬೇಕು ಅದೆಲ್ಲವನ್ನೂ ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಸಲುವಾಗಿ ನಾನು ಸಂಸದನಾಗಿ ಬಂದ ಮೇಲೆ ರೂ. 1 ಲಕ್ಷ ಕೋ. ಹಣವನ್ನು ಕೇಂದ್ರದಿಂದ ಅಭಿವೃದ್ಧಿಗಾಗಿ ತಂದಿದ್ದೇನೆ. ಕೇವಲ ನನ್ನ ಸರಕಾರವಿದ್ದಾಗ ಮಾತ್ರವಲ್ಲ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರನ್ನು ಭೇಟಿ ಮಾಡಿ ಇಂಡಿ ಪಟ್ಟಣದ ಕುಡಿಯುವ ನೀರಿಗಾಗಿ ರೂ. 110 ಕೋ. ವ್ಯವಸ್ಥೆ ಮಾಡಿದ್ದೇನೆ. ಈಗ ಇಷ್ಟೋಂದು ಬರಗಾಲವಿದ್ದರೂ ಇಂಡಿ ತಾಲೂಕಿನ ಯಾವ ಗ್ರಾಮದಲ್ಲಿಯೂ ಕುಡಿಯುವ ನೀರಿನ ತೊಂದರೆಯಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಪಕ್ಷದವರು ನನ್ನ ಕೈ ಬಿಡುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.
ಪ್ರಧಾನಿ ವಿರುದ್ಧ ರಾಜ್ಯ ಸರಕಾರ ಆರೋಪ ವಿಚಾರ
ಪ್ರಧಾನಿ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ರಾಜ್ಯ ಸರಕಾರ ಪ್ರತಿಯೊಂದಕ್ಕೂ ಪ್ರಧಾನಿ ಮೋದಿ ಹಸರಿನಲ್ಲಿ ಕುಂಟು ನೆಪ ಹೇಳುತ್ತಿದೆ. ಆದರೆ, ಯಾವ ರೀತಿ ಪ್ರಧಾನಿಗಳ ಭೇಟಿಗೆ ಅವಕಾಶ ಕೇಳಬೇಕು? ಯಾರ ಮೂಲಕ ಹೋಗಬೇಕು ಎಂಬುದು ಅವರಿಗೆ ಗೊತ್ತೆ ಇಲ್ಲ. ಕಾಡುವ ದೇವರಿಗೆ ಪತ್ರ ಬರೆದಂತೆ ಜನರು ಬೈಯುತ್ತಾರೆ ಎಂಬ ಕಾರಣದಿಂದ ಪತ್ರ ಬರೆದಿದ್ದೇನೆ. ಕೇಂದ್ರ ಸರಕಾರ ಏನೂ ಮಾಡಿಲ್ಲ ಎಂದು ಕೈ ಮುಗಿದುಕೊಂಡು ಇಲ್ಲಿ ಕುಳಿತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿನವರು ಕೇವಲ ಮೋದಿ ವಿರುದ್ಧ ಮಾತನಾಡುವುದಿಲ್ಲ. ಬದಲಾಗಿ ಕಳೆದ 75 ವರ್ಷಗಳಿಂದ ದಲಿತರು, ದಲಿತರು, ದಲಿತರು ಎಂದು ಹೇಳಿಕೊಂಡು ದಲಿತರ ಹೆಸರಿನಲ್ಲಿ ಮತ ಪಡೆಯುತ್ತಿದ್ದಾರೆ. ಈ ಹಿಂದೆ ಎಂದೂ ನಡೆಯದಷ್ಟು ಅಭಿವೃದ್ಧಿ ಕೆಲಸಗಳನ್ನು ಮೋದಿ ಮಾಡಿದ್ದಾರೆ. ಎಸ್.ಸಿ.ಪಿ. ಟಿ.ಎಸ್.ಪಿ ಯೋಜನೆಯಡಿ ರೂ. 11 ಸಾವಿರ ಕೋ. ಹಣವನ್ನು ದಲಿತರ ಹಣವನ್ನು ಬೇರೆ ಬೇರೆ ಕಾರಣಕ್ಕಾಗಿ, ಬೇರೆ ಅಭಿವೃದ್ಧಿಗಾಗಿ ಹಣವನ್ನು ದುರ್ಬಳಕೆ ಮಾಡಿರುವುದು ಬಹಳ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಮಾಗಡಿ ಶಾಸಕರ ವಿರುದ್ಧ ಆಕ್ರೋಶ
ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಮಾಗಡಿ ಶಾಸಕರು ಮಾಡಿರುವ ಆರೋಪದ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೈನಿಕರು ಸಾಯಲು ಮೋದಿ ಯಾಕೆ ಕಾರಣರಾಗುತ್ತಾರೆ? ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮನ್ನು ರಕ್ಷಣೆ ಮಾಡಿದ್ದಾರೆ. ಅವರು ನಮ್ಮ ಸೈನಿಕರಿಗೆ ತೊಂದರೆ ಮಾಡಿದ ಹಿನ್ನೆಲೆಯಲ್ಲಿ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಆದರೆ, ಮಾಗಡಿ ಶಾಸಕರ ಬಗ್ಗೆ ಹೆಚ್ಚೆನೂ ಹೇಳುವುದಿಲ್ಲ. ಮೋದಿಯವರು ಬ್ರಿಟೀಷರಲ್ಲ. ಈ ರೀತಿ ಹೇಳಿಕೆ ನೀಡಿರುವ ಮಾಗಡಿ ಶಾಸಕರೇ ಬ್ರಿಟೀಷರಿದ್ದಂತೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರ
ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಗೆ ಆದ ಗತಿಯೇ ರಾಜ್ಯದಲ್ಲಿ ಬಿಜೆಪಿಗೆ ಆಗುತ್ತದೆ ಎಂದು ಪ್ರತಿಪಕ್ಷಗಳು ಹೇಳುತ್ತಿರುವುದು ಸುಳ್ಳು. ಅವರು ಏನಾದರೂ ಹೇಳಲಿ. ಜೆಡಿಎಸ್ ಜೊತೆ ಹೊಂದಾಣಿಕೆ ವಿಷಯದಲ್ಲಿ ನಮ್ಮ ನಾಯಕರು ಮಾಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ರಾಜಕಾರಣದಲ್ಲಿ ಒಬ್ಬರ ಮೈಮೇಲೆ ಕೆಸರೆರಚುವುದು ಸ್ವಾಭಾವಿಕ. ಅವರು ಎರಚುತ್ತ ಕುಳಿತಿರುತ್ತಾರೆ. ಅವರು ಹೇಳುವುದನ್ನು ಹೇಳುತ್ತಾರೆ. ಜನ ನಮಗೆ ಮತ ಹಾಕುತ್ತಾರೆ. ಇದು ಸತ್ಯ. ಹೆಚ್ಚೇನೂ ಹೇಳುವುದಿಲ್ಲ ಎದು ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯ್ಕಷ ಆರ್. ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಸಂಜಯ ಪಾಟೀಲ ಕನಮಡಿ, ಜೋಗೂರ ಮುಂತಾದವರು ಉಪಸ್ಥಿತರಿದ್ದರು.