ವಿಕಲಚೇತನರ ಕಲ್ಯಾಣಕ್ಕೆ ಸದಾ ಬದ್ಧನಾಗಿದ್ದೇನೆ- ಕೀಳರಿಮೆ ಭಾವನೆ ತೊರೆದು ಸ್ವಾವಲಂಬಿಗಳಾಗಿ ಬದುಕಿ- ಎಂ. ಬಿ. ಪಾಟೀಲ

ವಿಜಯಪುರ: ವಿಶೇಷ ಚೇತನರು ತಮ್ಮಲ್ಲಿರುವ ಕೀಳರಿಮೆ ಭಾವನೆ ತೊರೆದು ಸಕಾರಾತ್ಮಕ ಯೋಚನೆಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷಚೇತನರಿಗೆ ಕೇವಲ ಸಹಾನುಭೂತಿ ಒದಗಿಸದೇ, ಅವರಿಗೂ ಅವಕಾಶ ಕಲ್ಪಿಸಿಕೊಟ್ಟು ಸ್ವಾವಲಂಬಿಗಳನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಮನೋಭಾವ ಬೆಳೆಸಿಕೊಳ್ಳಬೇಕು. ಸರ್ಕಾರವು ಸಹ ವಿಶೇಷಚೇತನರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕಿ ಸುಂದರ ಬದುಕು ರೂಪಿಸಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ವಿಶೇಷಚೇತನರು ಯಾವುದೇ ಸಂದರ್ಭದಲ್ಲೂ ದೃತಿಗೆಡದೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಧೃಢ ವಿಶ್ವಾಸ, ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ನಾನೂ ಯಾರಿಗೂ ಕಡಿಮೆ ಇಲ್ಲ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು, ಸಾಧಕರಿಗೆ ಸಾಧನೆಗೈಯ್ಯಲು ವಿಕಲತೆ ಅಡ್ಡಿಯಾಗಲಿಲ್ಲ, ಅದನ್ನು ಮೀರಿ ಅವರು ತಮ್ಮ ಸಾಧನೆಯನ್ನು ಜಗತ್ತಿಗೆ ಸಾರಿದ್ದಾರೆ. ಜಗತ್ತಿಗೆ ಇವರು ದಾರಿದೀಪವಾಗಿದ್ದಾರೆ. ಇಂತಹ ಸಾಧಕರಿಂದ ಪ್ರೇರಣೆಗೊಂಡು ನೀವು ಸಹ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಬದುಕುವ ಮೂಲಕ ಉತ್ತಮ ಜೀವನ ನಿರ್ವಹಣೆ ಮಾಡಬೇಕು. ವಿಶೇಷ ಚೇತನರ ಪಾಲಕ-ಪೋಷಕರು ಸಹ ತಮ್ಮ ಮಗುವಿನ ಬಗ್ಗೆ ನಿರ್ಲಕ್ಷ್ಯ ವಹಿಸದೇ ಉತ್ತಮ ಶಿಕ್ಷಣ, ಪ್ರೇರಣೆ ನೀಡುವ ಮೂಲಕ ಸಾಧಕರನ್ನಾಗಿಸುವೆಡೆಗೆ ಚಿಂತಿಸಬೇಕು ಎಂದು ಸಚಿವರು ಹೇಳಿದರು.

ವಿಜಯಪುರದಲ್ಲಿ ವಿಕಲಚೇತನರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು

ಇಂದಿನ ದಿನಗಳಲ್ಲಿ ಜಗತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ವೈದ್ಯಕೀಯ ಅವಿಷ್ಕಾರಗಳಾಗಿವೆ. ಪ್ರತಿ ವಿಶೇಷಚೇತನರಿಗೆ ವೈದ್ಯಕೀಯ ಸೌಲಭ್ಯ ವಿವಿಧ ಯೋಜನೆಗಳ ಲಾಭ ದೊರಕಿಸಲು ಸರ್ಕಾರದೊಂದಿಗೆ ಸಮಾಜವು ಕೈ ಜೋಡಿಸಬೇಕು. ತಮ್ಮ ಶಾಸಕರ ನಿಧಿಯಲ್ಲಿ ಶೇ.10ರಷ್ಟು ವಿಕಲಚೇತನರಿಗಾಗಿ ಅನುದಾನ ವಿನಿಯೋಗಿಸಲಾಗುತ್ತಿದೆ. ಬಿಎಲ್‍ಡಿಇ ಸಂಸ್ಥೆಯಲ್ಲಿ ವಿಕಲಚೇತನರಿಗೆ ಹಲವು ಆರೋಗ್ಯ ಸೇವೆಗಳನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಶೇಷಚೇತನರು ಅಂಗವೈಕಲ್ಯತೆಯನ್ನು ಸವಾಲಾಗಿ ಸ್ವೀಕರಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಂತೆ ಹಾರೈಸಿದ ಅವರು, ತನ್ನಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿ, ತಮ್ಮಲ್ಲಿರುವ ಪ್ರತಿಭೆಯಿಂದ ಉತ್ತಮ ಸಾಧೆನಗೈಯ್ಯುವಂತೆ ಎಂ. ಬಿ. ಪಾಟೀಲ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ವಿಜಯಪುರ ತಾಲೂಕಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಕೆ. ಹೊಂಗಯ್ಯ, ಡಾ. ಜಾವೀದ ಜಮಾದಾರ, ನಾಗರಾಜ ಲಂಬು, ಸಂಜೀವ ಖೋತ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ನಾನಾ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌