ವಿಜಯಪುರ: ನಾನು ಆಳಂದ ಶಾಸಕ ಬಿ. ಆರ್. ಪಾಟೀಲ ಜೊತೆ ಮಾತನಾಡಿಲ್ಲ. ನನಗೆ ಆ ವಿಷಯ ಗೊತ್ತೂ ಇಲ್ಲ. ನಾನು ಎರಡ್ಮೂರು ದಿನಗಳಿಂದ ಮತಕ್ಷೇತ್ರದಲ್ಲಿ ಇರಲಿಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದು ಶಾಸಕ ಬಿ. ಆರ್. ಪಾಟೀಲ ಅವರ ಪತ್ರದ ಕುರಿತು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಟಪಡಿಸಿದ್ದರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತು ವಿಧಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ನಾನು ಓರ್ವ ಹಿರಿಯ ಶಾಸಕರು ವ್ಯಕ್ತಪಡಿಸಿರುವ ಆತಂಕಗಳ ಹಿನ್ನೆಲೆಯಲ್ಲಿ ಬಹಳ ಜನ ಶಾಸಕರೂ ಸಹಮತ ವ್ಯಕ್ತಪಡಿಸಿದ್ದರು. ಅಂದು ಬಿ. ಆರ್. ಪಾಟೀಲ ಅವರು ಮಾತನಾಡಿರುವುದಕ್ಕೆ ನನ್ನ ಬೆಂಬಲ ಇದೆ. ಪ್ರತಿಯೊಂದಕ್ಕೂ ಮಾಧ್ಯಮಗಳ ಬಳಿ ಹೋಗುವುದು ಬೇಡ. ಅಂದು ಅವರು ಮಾತನಾಡಿದ್ದನ್ನು ನಾನು ಹೇಳಿದ್ದೇನೆ. ಅದನ್ನು ಬಿಟ್ಟು ಗೊತ್ತಿರದ ವಿಷಯದ ಕುರಿತು ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹೇಳಿಕೆ ವಿಚಾರ ಅದು ಅವರ ಸ್ವಾತಂತ್ರ್ಯ. ಅವರಿಗೆ ಏನು ಅನಿಸಿರುತ್ತದೆ. ಮಾತನಾಡಲು ಅವರಿಗೆ ಹಕ್ಕಿದೆ. ನಾನೂ ಮೊನ್ನೆ ಮಾತನಾಡಿ ನನ್ನ ಸಮಸ್ಯೆಗಳನ್ನು ಹೇಳಿದ್ದೇನೆ. ಮೊನ್ನೆ ಸಿಎಂ ಕರೆದು ಮಾತನಾಡಿದರು. ಅದರಂತೆ ಕೊನೆಯ ಭಾಗದವರೆಗೆ ನೀರು ಬಂತು. ಕೆರೆಗಳೂ ತುಂಬುತ್ತಿದೆ. ಸಮಸ್ಯೆ ಪರಿಹಾರವಾಗಿದೆ. ಪ್ರಮುಖ ಸಮಸ್ಯೆಗಳಿರುತ್ತವೆ. ಪ್ರತಿಯೊಬ್ಬ ಶಾಸಕರಿಗೂ ಅವರದೇ ಆದ ಕೆಲವು ವಿಚಾರಧಾರೆಗಳಿರುತ್ತವೆ. ಅವರು ಮಾತನಾಡಿರುತ್ತಾರೆ. ಆದರೆ, ನಾವೆಲ್ಲರೂ ಒಂದೇ. ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ. ನಮ್ಮ ನಾಯಕತ್ವದ ಮೇಲೆ ನಮಗೆ ವಿಶ್ವಾಸವಿದೆ. ಆ ರೀತಿ ಯಾವುದೂ ಆಗುವುದಿಲ್ಲ. ಏನಾದರೂ ಆಗಿದ್ದರೆ ಮುಖ್ಯಮಂತ್ರಿ ಕರೆದು ಮಾತನಾಡುತ್ತಾರೆ ಎಂದು ಅವರು ಹೇಳಿದರು.
ಪತ್ರ ಬರೆದಿರುವ ಶಾಸಕರನ್ನೇ ಕೇಳಬೇಕು. ನಮ್ಮ ಪಕ್ಷದಲ್ಲಿ ಆಂತರಿಕ ಸಮಸ್ಯೆಯಿಲ್ಲ. ನಾವು ಸಂಪೂರ್ಣವಾಗಿ ಒಗ್ಗಟ್ಟಿನಿಂದಿದ್ದೇವೆ. ಎಲ್ಲ 135 ಶಾಸಕರನ್ನು ಜನ ಆಯ್ಕೆ ಮಾಡಿದ್ದಾರೆ. ಐದು ವರ್ಷ ಅತ್ಯಂತ ಬದ್ಧತೆಯಿಂದ ಜನಪರ ಕಾರ್ಯಗಳನ್ನು ಡಿ. ಕೆ. ಶಿವಕುಮಾರ ಮತ್ತು ಎಸ್. ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಗೆದ್ದಿದ್ದೇವೆ. ಅವರ ನೇತೃತ್ವದಲ್ಲಿ ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದ್ದೇವೆ. ನೀವು ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ಶಾಸಕಾಂಗ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಏಕೆ ಆಯಿತು ಎಂಬುದರ ಕುರಿತು ನಾನು ಮಾಧ್ಯಮಗಳ ಎದುರು ಏನೂ ಹೇಳುವುದಿಲ್ಲ. ಶಾಸಕಾಂಗ ಸಭೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಡೆದ ಸಭೆ. ಮುಖ್ಯಮಂತ್ರಿಗಳ ಜೊತೆ ನಮ್ಮ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತೇವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಇದಕ್ಕಾಗಿಯೇ ಶಾಸಕಾಂಗ ಸಭೆ ನಡೆಯುತ್ತದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಸ್ವಲ್ಪ ಏನಾದರೂ ಮಾತನಾಡಿದರೆ, ಮಾಧ್ಯಮಗಳು ದೊಡ್ಡ ವಿಷಯವನ್ನಾಗಿ ಮಾಡುತ್ತವೆ. ಅದರಲ್ಲೂ ವಿದ್ಯುನ್ಮಾನ ಮಾಧ್ಮಯಗಳ ಕೈಯ್ಯಲ್ಲಿ ಸಿಕ್ಕ ನಮ್ಮ ಹಣೆಬರಹ ದೇವರೆ ಬಲ್ಲ. ನಾವೆಲ್ಲರೂ ಪಕ್ಷದ ಪರವಾಗಿ ಒಕ್ಕಟ್ಟಿನಿಂದ ಇದ್ದೇವೆ. ನಾನೂ ಕೂಡ ಬಿ. ಆರ್. ಪಾಟೀಲ ಅವರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇವೆ. ನಾವೆಲ್ಲರೂ ಪಕ್ಷದ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಸಮಸ್ಯೆಗಳೇನೇ ಇದ್ದರೂ ಕುಳಿತುಕೊಂಡು ಮಾತನಾಡೋಣ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕರ ಪತ್ರದಲ್ಲಿರುವಂತೆ ನಾನು ಅಂದು ಅಂದು ಅವರ ಪರವಾಗಿ ಮಾತನಾಡಿದ್ದೇನೆ. ಆದರೆ, ಅದು ಯಾರ ವಿರುದ್ಧವೂ ಅಲ್ಲ. ನಮ್ಮ ಸರಕಾರದ ವಿರುದ್ಧವೂ ಅಲ್ಲ. ಅವರು ಭೂಸೇನಾ ನಿಗಮ ಬಗ್ಗೆ ಒಂದು ವಿಚಾರ ಹೇಳಿದ್ದರು. ನಾವು ಬಹಳಷ್ಟು ಕಡೆ ನೋಡಿದ್ದೇವೆ. ಎಲ್ಲ ಕಡೆ ಭೂಸೇನಾ ನಿಗಮ ಉತ್ತಮ ಕೆಲಸ ಮಾಡಿಲ್ಲ ಎಂಬ ಭಾವನೆಯಿಲ್ಲ. ಅವರಿಗೆ ಆದ ಸಮಸ್ಯೆಯನ್ನು ಅವರು ಹೇಳಿದ್ದಾರೆ. ನಾವು ಮತ್ತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತಿರುತ್ತೇವೆ. ಕೆಲವು ವಿಷಯಗಳಿಗೆ ಇಷ್ಟು ಮಹತ್ವ ಕೊಡುವ ಅಗತ್ಯವಿಲ್ಲ. ಇದೆಲ್ಲ ಬಹಳ ಸಣ್ಣ ವಿಷಯ. ಎಲ್ಲರೂ ಕೂಡಿ ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಯಶವಂತರಾಯಗೌಡ ಪಾಟೀಲ ತಿಳಿಸಿದರು.