ವಿಜಯಪುರ: ಕಲಬುರಗಿ ಜಿಲ್ಲೆಯ ಆಳಂದ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ ಅವರು ತಮ್ಮ ವಿರುದ್ಧ ಬರೆದಿರುವ ಪತ್ರದ ಕುರಿತು ಮುಖ್ಯಮಂತ್ರಿಗಳೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಂದಾಯ ಸಚಿವ ಕೃಷ್ಠ ಭೈರೇಗೌಡ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಬಿ. ಆರ್. ಪಾಟೀಲ ಅವರು ಮುಖ್ಯಮಂತ್ರಿಗೆ ಪತ್ರ ಬರೆದ ವಿಚಾರ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಶಾಸಕರು ಸಿಎಂ ಗೆ ಪತ್ರ ಬರೆದಿದ್ದಾರೆ. ಈ ಪತ್ರದ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಸದನದಲ್ಲಿ ಏನು ಉತ್ತರ ಕೊಟ್ಟಿದ್ದೇನೆ ಎಂಬುದರ ಕುರಿತು ಮಾಹಿತಿಯನ್ನು ಮಾಧ್ಯಮದವರಿಗೆ ನೀಡುತ್ತೇನೆ. ಅದರಲ್ಲಿ ಏನು ಹೇಳಿದ್ದೀವಿ? ಏನು ಬಿಟ್ಟಿದೀವಿ ಎಂಬುದನ್ನು ನೀವೇ ತೀರ್ಮಾನ ಮಾಡಬಹುದು. ಅಂತಿಮವಾಗಿ ಅದರ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಸದನದಲ್ಲಿ ಸಚಿವರು ವೀಡಿರುವ ಉತ್ತರದಿಂದ ಅವಮಾನವಾಗಿದ್ದು, ತಮ್ಮ ವ್ಯಕ್ತಿತ್ವದ ಬಗ್ಗೆ ಸಂಶಯ ಉಂಟಾಗಿದೆ ಎಂದು ಶಾಸಕರು ಪತ್ರದಲ್ಲಿ ಪ್ರಸ್ತಾಪಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಸದನದಲ್ಲಿ ನಡೆದ ಚರ್ಚೆಯ ಪ್ರತಿಯನ್ನು ನಾನು ತಮಗೆ ನೀಡುತ್ತೇನೆ. ತಾವು ಇದನ್ನು ಓದಬಹುದು. ಇದನ್ನು ಒದಿದ ನಂತರ ಅದನ್ನು ತಮ್ಮ ತೀರ್ಮಾನಕ್ಕೆ ಬಿಡುತ್ತೇನೆ. ಆ ರೀತಿ ಯಾಕೆ ಹೇಳುತ್ತಿದ್ದಾರೆ ಎಂಬುದರ ಕುರಿತು ಅವರ ಬಗ್ಗೆ ಇವರ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದರು.
ನಾನು ಇವತ್ತು ವಿಜಯಪುರ ಜಿಲ್ಲೆಯಲ್ಲಿ ಇದ್ದೇನೆ. ಇಲ್ಲಿನ ಸಮಸ್ಯೆಗಳನ್ನು, ರಾಜ್ಯದಲ್ಲಿ ಉಂಟಾಗಿರುವ ಬರ ಹಾಗೂ ಜನರ ಸಮಸ್ಯೆಗಳನ್ನು ಪ್ರತಿಯೊಂದು ಜಿಲ್ಲೆಗೆ ಹೋಗಿ ಅಲ್ಲಿಯೇ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ವಿಜಯಪುರ ಜಿಲ್ಲೆಗೆ ಬಂದಿದ್ದೇನೆ. ಜನಗಳ ವಿಷಯವಿದ್ದರೆ ನಾನು ತಮ್ಮ ಜೊತೆ ಚರ್ಚಿಸುತ್ತೇನೆ. ಬೇರೆ ಅದು, ಇದು ಎಂದು ಹೇಳಿ, ನಾನು ಯಾವುದೇ ಕಾಂಟ್ರೋವರ್ಸಿ ಕ್ರಿಯೆಟ್ ಮಾಡಲು ನಾನು ಇಲ್ಲಿಗೆ ಬಂದಿಲ್ಲ ಕೃಷ್ಣ ಭೈರೇಗೌಡ ತಿಳಿಸಿದರು.
ಮುಖ್ಯಮಂತ್ರಿಗಳು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ. ಮುಖ್ಯಮಂತ್ರಿಗಳಿಗೆ ಸಾಮರ್ಥ್ಯ ಇದೆ. ಅನುಭವ ಇದೆ. ಈ ವಿಷಯಗಳನ್ನು ತಿಳಿದುಕೊಳ್ಳುವ ಅನುಭವ ಸಿಎಂಗಿದೆ. ಸದನದಲ್ಲಿ ಏನು ನಡಿದಿದೆ ಎಂಬುದರ ಕುರಿತು ಪ್ರತಿಯನ್ನು ತಮಗೆ ನೀಡುತ್ತೇನೆ. ಅದರ ಬಗ್ಗೆ ನಿರ್ಧಾರವನ್ನು ತಮ್ಮ ವಿವೇಚನೆಗೆ ಬಿಡುತ್ತೇನೆ ಎಂದು ಅವರು ತಿಳಿಸಿದರು.
ಪತ್ರದಲ್ಲಿ ಭೂಸೇನೆ ನಿಗಮ ಕುರಿತು ಪ್ರಸ್ತಾಪಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿಮ್ಮ ಕೈಗೆ ಪ್ರತಿ ನೀಡುತ್ತಿದ್ದೇನೆ. ಅದರಲ್ಲಿ ಏನು ಇದೆ ನೀವೇ ನೋಡಿ. ನಾನು ಸದನದಲ್ಲಿ ಏನು ಹೇಳಿದ್ದೇನೆ ಎಂಬುದರ ಪ್ರತಿಯೊಂದು ಅಕ್ಷರವೂ ಈ ಪ್ರತಿಯಲ್ಲಿದೆ. ತಾವೇ ಅದನ್ನು ವಿಚಾರ ಮಾಡಬೇಕು ಎಂದು ಹೇಳಿದರು.
ಶಾಸಕರು ಯಾಕೆ ಯಾಕೆ ಹೀಗೆ ಪತ್ರ ಬರೆದಿದ್ದಾರೆ ಮತ್ತು ಏಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬುದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಾನು ಇಲ್ಲಿಗೆ ಜನರ ಸಮಸ್ಯೆ ಪರಿಹಾರ ಮಾಡಲು ಬಂದಿದ್ದೇನೆ. ರಾಜ್ಯದಲ್ಲಿ ಇರುವ ಬರದ ಕುರಿತು ಗಮನ ಕೊಡಲು ಬಂದಿದ್ದೇನೆ. ಇದರ ಮೇಲೆ ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ. ಸಿಎಂ ಗೆ ಅವರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರು ತೀರ್ಮಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಸಚಿವರು ಪ್ರಸ್ತಾಪಿಸಿರುವ ಇಲಾಖೆ ನನಗೆ ಬರುವುದಿಲ್ಲ. ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಹೀಗಾಗಿ ಇದು ಸಿಎಂ ಮತ್ತು ಸಂಬಂಧಿಸಿದ ಇಲಾಖೆಗೆ ಸಂಬಂಧಪಟ್ಟ ವಿಷಯವಾಗಿದೆ. ಈ ಕುರಿತು ತನಿಖೆ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಆ ಇಲಾಖೆಯ ಮಂತ್ರಿಗಳಿದ್ದಾರೆ. ಮುಖ್ಯಮಂತ್ರಿಗಳಿದ್ದಾರೆ. ಅವರಿಬ್ಬರ ನಡುವೆ ಏನು ತೀರ್ಮಾನ ಮಾಡುತ್ತಾರೆ. ಅದನ್ನು ನಾವು ಜಾರಿ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸಿಎಂ ಸಭೆ ಕರೆಯುವ ಕುರಿತು ನನಗೆ ಮಾಹಿತಿ ಬಂದಿಲ್ಲ. ನಾನು ಬೆಳಿಗ್ಗೆ 4 ಗಂಟೆಗೆ ಬೆಂಗಳೂರಿನಿಂದ ಹೊರಟು ಈಗ ವಿಜಯಪುರದಲ್ಲಿದ್ದೇನೆ. ಆ ವಿಷಯದ ಬಗ್ಗೆ ನಾನು ಏನು ಹೇಳಬೇಕು ಎಲ್ಲವನ್ನೂ ಹೇಳಿದ್ದೇನೆ. ವಿಜಯಪುರ ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಈಗ ಗಮನ ಹರಿಸುತ್ತಿದ್ದೇನೆ ಅವರು ತಿಳಿಸಿದರು.
ಕೇಂದ್ರದಿಂದ ಬರ ಪರಿಹಾರ ನೀಡುವ ವಿಚಾರ
ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿದರೂ ಪರಿಹಾರ ಬಂದಿಲ್ಲ. ದೇಶದ 10-12 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇದೆ. ಬಹುಷಃ ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಬರ ಘೋಷಣೆ ಮಾಡಿದ್ದೇವೆ. ಅದರ ಆಧಾರದ ಮೇಲೆ ಕೇಂದ್ರ ಸರಕಾರಕ್ಕೆ ಸೆಪ್ಟೆಂಬರ್ 22ಕ್ಕೆ ವರದಿಯನ್ನು ಕೊಟ್ಟಿದ್ದೇವೆ ಬೇರೆ ರಾಜ್ಯಗಳು ಕೇಂದ್ರಕ್ಕೆ ವರದಿ ಸಲ್ಲಿಸುವ ಎರಡು ತಿಂಗಳು ಮೊದಲೇ ನಾವು ಕೇಂದ್ರ ಸರಕಾರಕ್ಕೆ ವರದಿಯನ್ನು ನೀಡಿದ್ದೇವೆ. ಅದರ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಬಂದ ತಂಡ ವೀಕ್ಷಣೆ ಮಾಡಿಕೊಂಡು ಹೋಗಿದೆ. ಅಲ್ಲದೇ, ಆ ತಂಡ ವರದಿಯನ್ನೂ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಕೇಂದ್ರ ಸರಕಾರದಲ್ಲಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಟ್ಟದಲ್ಲಿ ಒಂದು ಸಮಿತಿ ಇರುತ್ತದೆ. ಅವರೂ ಕೂಡ ಈ ವರದಿಯನ್ನು ಪರಿಶೀಲನೆ ಮಾಡಿ ಮಂತ್ರಿಗಳ ತಂಡಕ್ಕೆ ಸಲ್ಲಿಸಿದ್ದಾರೆ. ತಕ್ಕಮಟ್ಟಿಗೆ ಪ್ರಕ್ರಿಯೆಗಳು ಆಗಿವೆ. ಈಗ ಅಂತಿಮವಾಗಿ ತೀರ್ಮಾನವಾಗಬೇಕು. ಈ ಮಧ್ಯೆ ನಾವು ಕೇಂದ್ರ ಕೃಷಿ ಮತ್ತು ಗೃಹ ಕಾರ್ಯದರ್ಶಿ ಹಾಗೂ ಹಣಕಾಸು ಸಚಿವರನ್ನೂ ಕೂಡ ಭೇಟಿ ಮಾಡಿ ಆದಷ್ಟು ಶೀಘ್ರವಾಗಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ರೈತರ ಪರಿಸ್ಥಿತಿ ಕಷ್ಟದಲ್ಲಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕಡೊಂಡ, ಕಾಂಗ್ರೆಸ್ ಮುಖಂಡ ರಾಕೇಶ ಕಲ್ಲೂರ ಮುಂತಾದವರು ಉಪಸ್ಥಿತರಿದ್ದರು.