ಭ್ರೂಣ ಹತ್ಯೆ, ಮಕ್ಕಳ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ- ಬಿಜೆಪಿಯವರೆಲ್ಲ ಸತ್ಯ ಹರಿಶ್ಚಂದ್ರರಾ? ಎಂ. ಬಿ. ಪಾಟೀಲ ಪ್ರಶ್ನೆ

ವಿಜಯಪುರ: ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳು ಭಾರತೀಯ ಜನತಾ ಪಕ್ಷದ ಮೋರ್ಚಾಗಳಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭ್ರೂಣಹತ್ಯೆ ವಿರುದ್ಧ ಕಿಡಿ‌ ಕಾರಿದರು.  ಅಲ್ಲದೇ, ನಿಗಮ‌, ಮಂಡಳಿ ಆಯ್ಕೆ ವಿಚಾರ ಸಿಎಂ, ಡಿಸಿಎಂ, ಕೆಪಿಸಿಸಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಐಟಿ, ಇಡಿ, ಸಿಬಿಐ ಯನ್ನು ತಮ್ಮ‌ ಅನುಕೂಲಕ್ಕೆ ತಕ್ಕಂತೆ‌ ಬಳಸುತ್ತಿದ್ದಾರೆ. ಆ ಪಕ್ಷದ ಮಹಿಳಾ ಮೋರ್ಚಾ, ಯುವ ಮೋರ್ಚಾ ಹೇಗಿವೆ ಅದೇ ರೀತಿ‌ ತನಿಖಾ ಸಂಸ್ಥೆಗಳನ್ನು ಮಾಡಿಬಿಟ್ಟಿದ್ದಾರೆ. ಕೇವಲ ಪ್ರತಿಪಕ್ಷದವರ ಹತ್ತಿಕ್ಕಲು, ಚಿತ್ರಹಿಂಸೆ ಕೊಡಲು ಅವುಗಳನ್ನು ದುರ್ಬಳಕೆ ಮಾಡಯತ್ತಿದ್ದಾರೆ. ಬಿಜೆಪಿಯವರ ವಿರುದ್ಧ ತಾಕೆ ದಾಳಿ ಮಾಡಿಲ್ಲ? ಅವರೆಲ್ಲರೂ ಸತ್ಯ ಹರಿಶ್ಚಂದ್ರರಾ? ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ಮುಖಂಡನ‌ ಮೇಲಾದರೂ ಐಟಿ ರೇಡ್ ಮಾಡ್ತಾರಾ? ಇಡಿ, ಸಿಬಿಐ ಕೇಸ್ ಹಾಕ್ತಾರಾ? ಎಂದು ಅವರು‌ ಖಾರವಾಗಿ ಪ್ರಶ್ನಿಸಿದರು.

ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ

ನಿಗಮ ಮಂಡಳಿ ನೇಮಕ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೊದಲ ಹಂತದಲ್ಲಿ ಶಾಸಕರಿಗೆ, ಕೆಲ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಸಭೆ ಕೂಡ ನಡೆದಿದೆ. ಲೋಕಸಭೆ ಚುನಾವಣೆ ಬಳಿಕ ಕಾರ್ಯಕರ್ತರಿಗೆ, ಸದಸ್ಯರಿಗೆ ನೀಡುವ ಪ್ರಕ್ರಿಯೆ ನಡೆದಿದೆ. ಅದು ಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ ಅವರಿಗೆ ಗೊತ್ತಿದೆ ಎಂದು ಹೇಳಿದರು.

ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮಾರಾಟ ಪ್ರಕರಣ ವಿಚಾರ

ಮೈಸೂರು ‌ಮತ್ತು ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ಪ್ರಕರಣ ಕುರಿತು ಪ್ರತಿಕ್ರಿಯೆ
ನೀಡಿದ ಅವರು, ಇದು ಅತ್ಯಂತ ಅಕ್ಷಮ್ಯ ಮತ್ತು ಹೀನಾಯ ಕೆಲಸ. ಇದನ್ನು ಯಾರು ಮಾಡುತ್ತಾರೆ ಮತ್ತು ಯಾವ ವೈದ್ಯರು ಶಾಮೀಲಾಗಿರುತ್ತಾರೆ ಅದೂ ಕೂಡ ಅಪರಾಧ. ಯಾವುದೇ ಸರಕಾರವಿದ್ದರೂ ಇಂಥವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಂಥ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದನ್ನು ತಡೆಗಟ್ಟಲು ರಾಜ್ಯ ಸರಕಾರ ಭದ್ದವಾಗಿದೆ. ಯಾರೇ ಹೆಣ್ಣು ಭ್ರೂಣ ಹತ್ಯೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು.

12 ನೇ ಶತಮಾನದಲ್ಲಿ ಬಸವಣ್ಣ ಮತ್ತು ಶರಣರು ಗಂಡು ಹೆಣ್ಣು ಬೇದಭಾವ ಅಳಿಸಿ‌ ಹಾಕಿದ್ದಾರೆ. ಹೆಣ್ಣು ಲಕ್ಷ್ಮೀ ಇದ್ದಂತೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಒಳ್ಳೆಯವರು. ತಂದೆ ತಾಯಿಯರನ್ನು ಅವರೇ ಸಾಕುತ್ತಾರೆ. ಜಿಲ್ಲೆಯಲ್ಲಿಯೂ ಇಂಥ ಕೆಲಸ ಮಾಡಲು ಬಿಡಲ್ಲ. ಜನರಲ್ಲೂ ಜಾಗೃತಿ ಮೂಡಬೇಕಿದೆ. ಇಂಥ ಘಟನೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಪಂಚರಾಜ್ಯ ಚುನಾವಣೆ ವಿಚಾರ

ಪಂಚರಾಜ್ಯ ಚುನಾವಣೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಐದರಲ್ಲಿ ಕನಿಷ್ಟ ಮೂರು ರಾಜ್ಯಗಳಲ್ಲಿ ನಾವು ಅಧಿಕಾರ ಹಿಡಿಯುತ್ತೇವೆ. ನಾಲ್ಕನೇ ಕಡೆಯೂ ಅಧಿಕಾರ ಹಿಡಿಯೋ ಸಾಧ್ಯತೆ ಇದೆ. ಸಂಜೆ ಎಕ್ಸಿಟ್ ಪೋಲ್ ಬರತ್ತೇ. ನೋಡಿ ನಿಮಗೂ ಗೊತ್ತಾಗುತ್ತದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.

ಪಂಚ ರಾಜ್ಯ ಚುನಾವಣೆ ವಿಚಾರದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಾ? ಎಂಬ ಪ್ರಶ್ನೆಗೆ ಸಚಿವರು ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ನೀವೆ ಒಪ್ಪಿದ್ದೀರಲ್ಲ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ವಿಚಾರ

ರಾಜ್ಯದಲ್ಲಿ ಕೈಗಾರಿಕೆಗೆ ಉತ್ತೇಜನ ನೀಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಇತರೆ ಭಾಗಗಳಲ್ಲಿ ಕೈಗಾರಿಕೆಗಳು ಬೆಳೆಯಲು ಅವಕಾಶ ನೀಡಲಾಗುತ್ತದೆ. ಇನ್ಸೆಂಟಿವ್ ನೀಡುವ ಮೂಲಕ ಕೈಗಾರಿಕೆ ಮತ್ತು ಬಂಡವಾಳ ಹರಿದು ಬರಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ನಾವು ಕ್ಲಿಷ್ಟಕರ ವಾತಾವರಣದಲ್ಲಿದ್ದೇವೆ. ಕೈಗಾರಿಕೋದ್ಯಮಿಗಳು ಬೆಂಗಳೂರು ಸುತ್ತಮುತ್ತ ಉದ್ಯಮ ಆರಂಭಿಸಲು ಬಯಸುತ್ತಾರೆ. ‌ ನಾವು ಬೆಂಗಳೂರಿನ ಹೊರಗಡೆ ರಾಜ್ಯದ ಇತರ ಕಡೆಗಳಲ್ಲಿ ಉದ್ಯಮ ಸ್ಥಾಪನೆ ಮಾಡಲು ಮನವೊಲಿಸುತ್ತೇವೆ. ಅದಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತೇವೆ. ಅದಕ್ಕೆ ಬೇಕಾದ ಪ್ರೋತ್ಸಾಹ ನೀಡುತ್ತೇವೆ. ಜೊತೆಗೆ ಬಂಡವಾಳ ಹಾಕುವವರು‌ ಮತ್ತು ಕೈಗಾರಿಕೆಗಳು ರಾಜ್ಯ ಬಿಟ್ಟು ಹೋಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಸೌಕರ್ಯಗಳಿವೆ. ಉದ್ಯಮಗಳ ಸ್ಥಾಪನೆಗೆ ಬೇಕಾಗುವ ಭೂಮಿ, ನೀರು, ವಿದ್ಯುತ್ ಸಾರಿಗೆ ಸೌಲಭ್ಯಗಳಿವೆ. ಇದೆಲ್ಲವನ್ನೂ ಮನವರಿಕೆ ಮಾಡುತ್ತೇವೆ. ಈ ಕುರಿತು ಅಧ್ಯಯನವನ್ನೂ ಮಾಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಡಿ ಕೆ ಶಿವಕುಮಾರ ಪ್ರಕರಣ

ಆದಾಯಕ್ಕಿಂತ ಅಧಿಕ ಆಸ್ತಿ‌ ಪ್ರಕರಣ ಸಂಬಂಧ ಡಿಸಿಎಂ‌ ಡಿ. ಕೆ. ಶಿವಕುಮಾರ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ವಾಪಸ್‌ ಪಡೆದಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಂ. ಬಿ. ಪಾಟೀಲ ಅವರು, ಹಿಂದಿನ ಸರಕಾರ ಸಿಬಿಐ ತನಿಖೆಗೆ ನೀಡಿದ್ದು ತಪ್ಪು ಎಂದು ಎಜಿ ಅಭಿಪ್ರಾಯ ಮೇರೆಗೆ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ. ಕಾನೂನಾತ್ಮಕವಾಗಿ ಈ‌ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಸ್ವಂತ ಅಭಿಪ್ರಾಯ ತೆಗೆದುಕೊಂಡಿಲ್ಲ. ಕೇಸ್ ವಾಪಸ್ ಪಡೆಯಲು ಡಿಕೆಶಿಗೆ ಅನುಮತಿಯನ್ನು ನೀಡಲಾಗಿದೆ. ಮುಂದೆ ಕಾನೂನಾತ್ಮಕ ಹೋರಾಟ ನಡೆಯಲಿದೆ ಎಂದು ಹೇಳಿದರು.

ಬಿಹಾರದಲ್ಲಿ ಸರಕಾರಿ ರಜೆಗಳ ಕುರಿತು ಆಕ್ರೋಶ ವಿಚಾರ

ಬಿಹಾರದಲ್ಲಿ ರಾಷ್ಟ್ರೀಯ ಮಹಾನ್ ವ್ಯಕ್ತಿಗಳ ಜಯಂತಿ ರಜೆ ರದ್ದು ಮಾಡಿ‌ ರಂಜಾನ್ ಗೆ ಹೆಚ್ಚಿನ ರಜೆ ನೀಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ ಗಮನ ಹರಿಸುತ್ತದೆ.  ಇಂಡಿಯಾ ಮೈತ್ರಿಕೂಟ ಇರುವ ಕಾರಣ ನಮ್ಮ ಕಾಂಗ್ರೆಸ್ ವರಿಷ್ಟರು ಇದರ ಬಗ್ಗೆ ಗಮನ ಹರಿಸುತ್ತಾರೆ ಎಂದು ಎಂ. ಬಿ. ಪಾಟೀಲ‌ ತಿಳಿಸಿದರು.

ಶಾಸಕ‌ ಬಿ. ಆರ್. ಪಾಟೀಲ‌ ಪತ್ರ ವಿಚಾರ

ಆಳಂದ ಶಾಸಕ ಬಿ.‌ ಆರ್. ಪಾಟೀಲ ಅವರು ಸಿಎಂಗೆ ಪತ್ರ ಬರೆದ ಮತ್ತು ಸಿಎಂ‌ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿ. ಆರ್. ಪಾಟೀಲ್ ಒಳ್ಳೆಯವರು ಮತ್ತು ಹಿರಿಯರಿದ್ದಾರೆ. ಸ್ವಾಭಾವಿಕವಾಗಿ ಸ್ವಲ್ಪ ಅಸಮಾಧಾನಗೊಂಡಿದ್ದರು. ಅವರಿಗೆ ಕೆಲವು ಗೊಂದಲಗಳಿದ್ದವು. ಈ ಗೊಂದಲ ಬಗ್ಗೆ ಸಿಎಂಗೆ ಹೇಳಿದ್ದಾರೆ. ‌ಅದೇ ರೀತಿ ಕೃಷ್ಣಭೈರೇಗೌಡರು ಕೂಡ ತಮ್ಮ ವ್ಯಾಪ್ತಿಗೆ ಇದು‌ ಬರಲ್ಲ ಎಂದು ಹೇಳಿದ್ದಾರೆ. ನಂದೇನಿದ್ದರೂ ಹೇಳಿ ನಾನು ಮಾಡುತ್ತೇನೆ ಎಂದು ಬಿ. ಆರ್. ಪಾಟೀಲ ಅವರಿಗೆ ಹೇಳಿದ್ದಾರೆ. ಇದು ನಮ್ಮ ಆಂತರಿಕ ವಿಚಾರ. ಮಾಧ್ಯಮದವರು ದೊಡ್ಡದು ಮಾಡಿದ್ದೀರಿ ಎಂದು ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಹೇಳಿದರು.

Leave a Reply

ಹೊಸ ಪೋಸ್ಟ್‌