ದಾಸ ಸಾಹಿತ್ಯಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿದ ಸಂತ ಕನಕದಾಸರು- ಸಚಿವ .ಎಂ. ಬಿ. ಪಾಟೀಲ

ವಿಜಯಪುರ: ದಾಸ ಸಾಹಿತ್ಯಕ್ಕೆ ವೈಚಾರಿಕೆ ನೆಲೆಗಟ್ಟನ್ನು ಒದಗಿಸಿದ ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. 

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ.  ಕ್ಲಿಷ್ಟಕರ ಹಾಗೂ ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊAಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರ.  ಆಧ್ಯಾತ್ಮಿಕ, ಸಾಮಾಜಿಕ ಮತ್ತು ವೈಚಾರಿಕೆ ಪ್ರಜ್ಞೆ ಬೆಳೆಸಿದ ಕನಕದಾಸರ ತತ್ವಾದರ್ಶಗಳು ದಾರಿದೀಪವಾಗಿವೆ. ದೇಶದ ಭವ್ಯವಾದ ಸಂಸ್ಕೃತಿ, ಪರಂಪರೆ ಇಲ್ಲಿನ ದಾರ್ಶನಿಕರ ವಿಚಾರಧಾರೆಗಳನ್ನು ಅವರ ಚಿಂತನೆಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದ್ದೆ. ಇಂತಹ ಶ್ರೇಷ್ಠ ಸಂತರು, ಸತ್ಪುರುಷರು ದೇಶ, ನಾಡನ್ನು ಬೆಳಗಿದ್ದಾರೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಕನಕದಾಸ ಜಯಂತಿ ಅಂಗವಾಗಿ ಸಚಿವ ಎಂ. ಬಿ. ಪಾಟೀಲ ಅವರು ಭಾವಚಿತ್ರಕ್ಕೆ ನಮನ ಸಲ್ಲಿಸಿದರು

ದಾಸ ಸಾಹಿತ್ಯ, ಪದಗಳ ಮೂಲಕ ಸಮಾಜದ ಓರೆ-ಕೊರೆಗಳನ್ನು ತಿದ್ದಿ, ಅನಿಷ್ಠ ಪದ್ಧತಿಗಳು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದವರಾಗಿದ್ದು, ಇಂತಹ ಶ್ರೇಷ್ಠರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ನಡೆಯಬೇಕು.  ಸಂತ ಶ್ರೇಷ್ಠ ಸೇರಿದಂತೆ ಮಹಾತ್ಮರ ವಿಚಾರಧಾರೆಗಳಂತೆ ನಮ್ಮ ಸರಕಾರ ಎಲ್ಲ ವರ್ಗದ ಜನರ ಅಭಿವೃದ್ದಿಗಾಗಿ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. 2013ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯದಂತಹ ಅನೇಕ ಜನಪರ ಹಾಗೂ ಬಡವರ ಪರ ಯೋಜನೆಗಳನ್ನು ಜಾರಿಗೆ ತಂದು, ಬಡವರ ಬಾಳಿನ ಬೆಳಕಾಗಿದ್ದರು. ಪ್ರಸ್ತುತ ನಮ್ಮ ಸರ್ಕಾರ 5 ಗ್ಯಾರಂಟಿಗಳ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಸ್ತ್ರೀ ಸ್ವಾವಲಂಬನೆಯ ದಿಟ್ಟ ಹೆಜ್ಜೆಯನ್ನಿಡಲಾಗಿದೆ.  ಉಚಿತ ಪ್ರಯಾಣದಿಂದ ಬಹಳಷ್ಟು ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಆಸರೆ ದೊರಕಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಬ್ಯಾಂಕ್ ಖಾತೆಗೆ ಒದಗಿಸುವ ಮೂಲಕ ಜನರ ಜೀವನಕ್ಕೆ ಅನುಕೂಲ ಕಲ್ಪಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಯೋಜನೆಯಿಂದ ಹಲವರ ಬದುಕಿನಲ್ಲಿ ಆಶಾಕಿರಣ ಮೂಡಿದ್ದು, ಎಲ್ಲ ವರ್ಗದ ಜನರ ಆರ್ಥಿಕ ಸ್ವಾವಲಂಬನೆ ತಂದು ಕೊಡುವಲ್ಲಿ ಯೋಜನೆಗಳು ಜನಪರವಾಗಿವೆ ಎಂದು ಹೇಳಿದರು.

ಸರಕಾರ ಬಂದ 6 ತಿಂಗಳಲ್ಲಿಯೇ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿಯೂ  ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ  ಅಭಿವೃದ್ಧಿಗೆ  ಶ್ರಮಿಸಲಾಗುವುದು. ಎಲ್ಲ ದಾರ್ಶನಿಕರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಅವರ ವಿಚಾರಗಳಿಂದ ಪ್ರೇರಣೆ ಪಡೆದು, ಸುಂದರ ಸಮಾಜ ಸುಂದರ ನಾಡನ್ನು ರೂಪಿಸಲು ಎಲ್ಲರೂ ಕೈಜೋಡಿಸೋಣ ಎಂದು ಅವರು ಹೇಳಿದರು.

 

ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಅವರು ಮಾತನಾಡಿ, ಕನಕದಾಸರ ರಚನೆಯ ಮೋಹನ ತರಂಗಿಣಿ, ನಳಚರಿತ್ರೆ, ಸಾಹಿತ್ಯದ ಕುರಿತು ಅವಲೋಕಿಸಿದ ಅವರು,  ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜನರಲ್ಲಿ ವೈಚಾರಿಕ ಮನೋಭಾವ ಬೆಳೆಸುವಲ್ಲಿ ಕನಕದಾಸರ ಕೀರ್ತನೆಗಳು ಅಪಾರ ಕೊಡುಗೆಯಾಗಿವೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ನಗರದ ಕನಕದಾಸ ವೃತ್ತದಲ್ಲಿ ಕನಕದಾಸ ಪ್ರತಿಮೆಗೆ ಸಚಿವರು ಪುಷ್ಪಾರ್ಚನೆ ಸಲ್ಲಿಸಿದರು. ಕೊಳಮಲಿ, ಬೀರಪ್ಪ ಜುಮನಾಳ, ಲಾಯಪ್ಪ ಇಂಗಳೆ ಕವನ ವಾಚಿಸಿದರು. ಶ್ರೀಮತಿ ಗೀತಾ ಕುಲಕರ್ಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು. ನಿವೃತ್ತ ಶಿಕ್ಷಕ ಮಮದಾಪೂರ ಅವರು ನಿರೂಪಸಿ,ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಉಪಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸೇರಿದಂತೆ ಸಮಾಜದ ಮಲ್ಲಣ್ಣ ಶಿರಶ್ಯಾಡ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌