ವಿಜಯಪುರ:ಬಸವ ನಾಡಿನಲ್ಲಿ ನಡೆಯಿತು ಬಸನಗೌಡರ ಮದುವೆ ಆರತಕ್ಷತೆ ಸಂಭ್ರಮ. ಮಠಾಧೀಶರ ಸಾನಿಧ್ಯದ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಬಂದು ಹರಸಿದರು ಲಕ್ಷಾಂತರ ಜನ.
ಇದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ದಂಪತಿಯ ಹಿರಿಯ ಪುತ್ರ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಬಸನಗೌಡ ಪಾಟೀಲ ಹಾಗೂ ಹಿರಿಯ ಶಾಸಕ ಡಾ. ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳಾದ ಅಖಿಲಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದ ಝಲಕ್. ನಾಡಿನ ನಾನಾ ಕಡೆಗಳಿಂದ ಆಗಮಿಸಿದ್ದ ಸುಮಾರು 250 ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮ ಈಗ ಬಸವನಾಡಿನ ಜನ ಎಂ. ಬಿ. ಪಾಟೀಲ ಮತ್ತು ಅವರ ಕುಟುಂಬದ ಮೇಲೆ ಹೊಂದಿರುವ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಕಳೆದ ತಿಂಗಳು ಅಂದರೆ ನವೆಂಬರ್ 23 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಸನಗೌಡ ಮತ್ತು ಅಖಿಲಾ ಅವರ ಮದುವೆ ನಡೆದಿತ್ತು. ಈಗ ವಿಜಯಪುರ ನಗರದ ಬಿ. ಎಂ. ಪಾಟೀಲ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆ ಹೊಸ ಕ್ಯಾಂಪಸ್ ನಲ್ಲಿ ಮದುವೆಯ ಆರತಕ್ಷತೆ ನಡೆಯಿತು.
ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮೀಜಿಗಳು, ಕಾಶಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಮೋಟಗಿ ಡಾ. ಚನ್ನಬಸವ ಮಹಾಸ್ವಾಮೀಜಿ, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಶಿರಹಟ್ಟಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಬಂಥನಾಳ ಡಾ. ವೃಷಭಲಿಂಗ ಮಹಾಶಿವಯೋಗಿಗಳು, ಮಮದಾಪುರ ಮುರುಗೇಂದ್ರ ಮಹಾಸ್ವಾಮೀಜಿ, ಹೊಳೆಬಬಲಾದಿ ಶ್ರೀ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಸೇರಿದಂತೆ ಸುಮಾರು 250 ನಾನಾ ಸ್ವಾಮೀಜಿಗಳ ಸಾನಿದ್ಯದಲ್ಲಿ ವಿವಾಹ ಆರತಕ್ಷತೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದರಾದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ ವಿಜಯಪುರ ಜಿಲ್ಲೆಯ ನಾನಾ ಭಾಗಗಳಿಂದ ಮತ್ತು ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಬಸನಗೌಡ ಮತ್ತು ಅಖಿಲಾ ದಂಪತಿಗೆ ಶುಭ ಹಾರೈಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಆಗಮಿಸಿದ ಒಂದು ಲಕ್ಷಕ್ಕೂ ಹೆಚ್ಚು ಜನರು ಸಚಿವ ಎಂ. ಬಿ. ಪಾಟೀಲ ಮತ್ತು ಅವರ ಪತ್ನಿ ಆಶಾ ಎಂ. ಪಾಟೀಲ ಹಾಗೂ ಅವರ ಕುಟುಂಬ ವರ್ಗದವರ ಅವರ ಪ್ರೀತಿಯ ಅಭಿಮಾನಕ್ಕೆ ಸಾಕ್ಷಿಯಾದರು. ತರಹೇವಾರಿ ಮೃಷ್ಟಾನ್ನ ಸ್ವೀಕರಿಸಿದ ಜನ ಆದರಾತಿಥ್ಯಕ್ಕೆ ಮಾರು ಹೋಗಿದ್ದು, ಈ ಮದುವೆ ಬಹಳ ವರ್ಷಗಳ ಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ಪರಸ್ಪರ ಹೇಳುತ್ತಿದ್ದ ಮಾತುಗಳು ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.