ವಿಜಯಪುರ: ಜಿಲ್ಲೆಯ ನಾನಾ ಸ್ಥಳೀಯ ಸಂಸ್ಥೆಗಳಲ್ಲಿ ಲ್ಲಿ ಕಾರ್ಯನಿರ್ವಹಿಸುತ್ತಿರುವ 308 ಪೌರಕಾರ್ಮಿಕರಿಗೆ ಸೇವಾ ಖಾಯಂ ನೇಮಕಾತಿ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ವಿತರಣೆ ಮಾಡಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ನಾನಾ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳಿಂದ ನೇಮಕಾತಿ ಆದೇಶ ಪಡೆದುಕೊಂಡರು.ಆದೇಶ ಪ್ರತಿ ಪಡೆದ ಪೌರಕಾರ್ಮಿಕರು ಅಪಾರ ಸಂತಸ ವ್ಯಕ್ತಪಡಿಸಿ, ನಮ್ಮ ಬಾಳಿಗೆ ಬೆಳಕು ಕಲ್ಪಿಸಿದ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳಿಗೆ ಕೃತಜ್ಞೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು, ನಗರ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರು ಸ್ವಚ್ಛತಾ ಸೈನಿಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರ ಬದುಕಿಗೆ ಆಧಾರ ಕಲ್ಪಿಸಲು ಸರ್ಕಾರ ನೇಮಕಾತಿ ಆದೇಶ ನೀಡಿದ್ದು, ಪ್ರತಿ ಪೌರಕಾರ್ಮಿಕರಿಗೆ ಎರಡು ಜೊತೆ ಸಮವಸ್ತ್ರ, ಸುರಕ್ಷಾ ಸಾಧನಗಳನ್ನು ಒದಗಿಸಲಾಗುವುದು. ತಮ್ಮ ಆರೋಗ್ಯ ಕಾಪಾಡಿಕೊಂಡು ಸುರಕ್ಷಾ ಸಾಧನಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಮ್ಮ ಕಾರ್ಯ ಶ್ಲಾಘನೀಯವಾಗಿದ್ದು, ನಿಮ್ಮ ವೈಯಕ್ತಿಕ ಆರೋಗ್ಯವನ್ನು ಸಧೃಡವಾಗಿಟ್ಟುಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯರು ಕ್ಲಿನಿಕ್ ಸ್ಥಾಪನೆ ಮಾಡಲಾಗುವುದು, ಈ ಕೇಂದ್ರದಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಮತ್ತು ಉಚಿತ ಔಷಧೋಪಚಾರ ದೊರೆಯಲಿದ್ದು, ಬಿಡುವಿನ ಸಮಯದಲ್ಲಿ ತಮ್ಮ ಆರೋಗ್ಯ ಕುರಿತು ಚಿಕಿತ್ಸೆ ಪಡೆದುಕೊಳ್ಳಬೇಕು. ವೈದ್ಯಕೀಯ ತಪಾಸಣೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಆಸ್ಪತ್ರೆ ಔಷಧೋಪಚಾರ ಉಚಿತವಾಗಿದ್ದು, ಈ ವರ್ಷ ಪೌರಕಾರ್ಮಿಕರಿಗೆ ವೈದ್ಯಕೀಯ ವಿಮೆ ಸಹ ನೀಡಲಾಗುತ್ತಿದ್ದು, ಮುಂದಿನ ವರ್ಷದಿಂದ ಪೌರಕಾರ್ಮಿಕರ ಅವಲಂಬಿತ ಕುಟುಂಬದವರಿಗೂ ವಿಮೆ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.
15ನೇ ಹಣಕಾಸು ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಸುವಿಧಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸುವಿಧಾ ಕೇಂದ್ರದಲ್ಲಿ ಸ್ನಾನಗೃಹ, ವಿಶ್ರಾಂತಿ ಕೊಠಡಿ, ಶೌಚಾಲಯ ಒಳಗೊಂಡಿರುತ್ತದೆ. ಮುಂದಿನ ವರ್ಷ ಪ್ರತಿ ಐದು ವಾರ್ಡಿಗೊಂದು ಸುವಿಧಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮೂರು ತಿಂಗಳಗೊಮ್ಮೆ ಪೌರಕಾರ್ಮಿಕರ ಕುಂದು ಕೊರತೆ ಸಭೆ ನಡೆಸಿ ಪರಿಹಾರ ಒದಗಿಸಲು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ಪೌರಕಾರ್ಮಿಕಳಾಗಿ ಕಾರ್ಯನಿರ್ವಹಿಸುತ್ತಿದ್ದು, 500 ರೂ. ಪಗಾರದಿಂದ ಕೆಲಸ ಆರಂಭ ಮಾಡಿದ್ದೀನಿ. ಪೌರ ಕಾರ್ಮಿಕ ಹುದ್ದೆ ಖಾಯಂ ನೇಮಕಾತಿ ಆದೇಶ ಜಿಲ್ಲಾಧಿಕಾರಿಗಳಿಂದ ಪಡದಿದ್ದು, ಭಾಳ ಖುಷಿಯಾಗೇತಿ, ನಮಗ ಅನುಕೂಲ ಮಾಡಿಕೊಟ್ಟಂತಹ ಜಿಲ್ಲಾಧಿಕಾರಿಗಳಿಗೆ ಮನಸ್ಸಿನಿಂದ ಕೃತಜ್ಞತೆ ಸಲ್ಲಿಸತೀನ್ರಿ ಎಂದು ಆಲಮೇಲದ ಪೌರಕಾರ್ಮಿಕರೊಬ್ಬರು ತಮ್ಮ ಸಂತಸವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಜಗದೀಶ, ಬಾಬು ಸಜ್ಜನ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.