ವಿಜಯಪುರ: ಮೆಕ್ಕೆಜೋಳಗಳನ್ನು ತುಂಬಿಡಲಾಗಿದ್ದ ಗೋಣಿ ಚೀಲಗಳು ಕುಸಿದ ಪರಿಣಾಮ ಸುಮಾರು ಹತ್ತಾರು ಜನರು ಸಿಲುಕಿಕೊಂಡಿರುವ ಘಟನೆ ಗುಮ್ಮಟ ನಗರಿ ವಿಜಯಪುರ ನಗರದ ಹೊರವಲಯದಲ್ಲಿರುವ ಕೆ ಐ ಡಿ ಬಿ ವಸಾಹತು ಪ್ರದೇಶದಲ್ಲಿ ನಡೆದಿದೆ.
ಖ್ಯಾತ ರಾಜಗುರು ಇಂಡಸ್ಟ್ರೀಜ್ ಗೋದಾಮಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು 10ಕ್ಕೂ ಹೆಚ್ಚು ಜನ ಸಿಲುಕ್ಕಿದ್ದಾರೆ ಎೞದು ಪ್ರಾಥಮಿಕ ವರದಿಗಳು ತಿಳಿಸಿವೆ. ರಾಜಗುರು ಫುಡ್ ಪ್ರೊಸೆಸಿಂಗ್ ಯುನಿಟ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸಂಗ್ರಹಿಸಿ ಇಡಲಾಗಿದ್ದ ಮೆಕ್ಕೆಜೋಳದ ಚೀಲಗಳ ಮೇಲೆ ಬೃಹತ್ ಯಂತ್ರ ಬಿದ್ದಿದೆ. ಆಗ ಈ ಚೀಲಗಳು ಕುಸಿದು ಬಿದ್ದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರು ಅದರ ಕೆಳಗಡೆ ಸಿಲುಕಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಇಂಡಸ್ಟ್ರೀಜ್ ನಲ್ಲಿ ನಾನಾ ಕಡೆಗಳಿಂದ ಆಗಮಿಸಿರುವ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಂಜೆ ವೇಳೆ ಏಕಾಏಕಿ ನಡೆದ ಘಟನೆಯಿಂದಾಗಿ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಘಟನೆಯ ಬಳಿಕ ನಾಲ್ಕು ಜೆಸಿಬಿ ಗಳಿಂದ ಮೆಕ್ಕೆಜೋಳವನ್ನು ಪಕ್ಕಕ್ಕೆ ಸರಿಸಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ.
ಅಗ್ನಿಶಾಮಕ ದಳ ದೌಡು, ಸ್ಥಳಕ್ಕೆ ಎಸ್ಪಿ ಭೇಟಿ
ವಿಜಯಪುರ ನಗರದ ಹೊರವಲಯದಲ್ಲಿ ನಡೆದಿರುವ ಈ ಘಟನಾ ಸ್ಥಳಕ್ಕೆ ಎಸ್ಪಿ ಋಷಿಕೇಶ ಭಗವಾನ ಸೋನಾವಣೆ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಮೆಕ್ಕೆಜೋಳದ ತುಂಬಿರುವ ಚೀಲಗಳು ಕುಸಿದಿರುವ ಸ್ಥಳದಲ್ಲಿ ಒಳಗಡೆ ಸಿಲುಕಿರುವ ಮೂರು ಜನರ ವಿಡಿಯೋ ಲಭ್ಯವಾಗಿದೆ.
ಮೂವರು ಕಾರ್ಮಿಕರ ರಕ್ಷಣೆ
ಈ ಮಧ್ಯೆ, ಅವಘಡ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೂವರು ಕಾರ್ಮಿಕರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಕುರಿತು ಮಾಹಿತಿ ನೀಡಿರುವ ರಕ್ಷಣೆಗೊಳಗಾದ ಕಾರ್ಮಿಕ ರಂಜಾಮುತಿಯಾ, ಮೆಕ್ಕೆಜೋಳ ತುಂಬಿದ ಚೀಲಗಳು ಕುಸಿದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಪ್ರೊಸೆಸಿಂಗ್ ಯುನಿಟ್ ನಲ್ಲಿ ಕಾರ್ಮಿಕರು ಕೆಲಸ ಮಾಡುವಾಗ ಏಕಾಏಕಿ ಅವಘಡ ಸಂಭವಿಸಿತು. ಮೈಮೇಲೆ ಚೀಲಗಳು ಮತ್ತು ಮೆಕ್ಕೆಜೋಳದ ರಾಶಿಯೇ ಬಿತ್ತು. ಏನು ಮಾಡಬೇಕು ತೋಚಲಿಲ್ಲ. ಕುತ್ತಿಗೆಯ ವರೆಗೂ ಮೆಕ್ಕೆಜೋಳ ಬಂದಿತ್ತು. ಕೈಕಾಲು ಆಡಿಸಲು ಸಾಧ್ಯವಾಗಲಿಲ್ಲ. ಹೊರಗೆ ಬರಬೇಕೆಂದರೂ ಸಾಧ್ಯವಾಗಲಿಲ್ಲ. ಹೊರಗೆ ಉಳಿದಿದ್ದ ಕಾರ್ಮಿಕರು ಕೈ ಹಿಡಿದು ನನ್ನ ಜಗ್ಗಿ ಮೇಲಕ್ಕೆತ್ತಿ ಉಳಿಸಿದ್ದಾರೆ. ನನಗೆ ಕಾಲಿಗೆ ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದೆ. ದೇವರು ನನ್ನನ್ನು ಕಾಪಾಡಿದ್ದಾನೆ ಎಂದು ಕಣ್ಣೀರಿಡುತ್ತಲೇ ನಡೆದ ಘಟನೆ ಮತ್ತು ತಾನು ಎದುರಿಸಿದ ಸಂಕಷ್ಟದ ಸಮಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈ ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಇತರ ಕಾರ್ಮಿಕರೂ ಕೂಡ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಈ ಅವಘಡದಲ್ಲಿ ಇನ್ನೂ ಎಷ್ಟು ಜನ ಸಿಲುಕಿಕೊಂಡಿದ್ದಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.