ವಿಜಯಪುರ: ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ಮೆಕ್ಕೆಜೋಳ ಸಂಗ್ರಹ ಹಾಪರ್(ತೊಟ್ಟಿ) ಕುಸಿದು ಸಾವಿಗೀಡಾದ ಏಳು ಜನರ ಪಾರ್ಥಿವ ಶರೀರಗಳನ್ನು ವಿಮಾನದ ಮೂಲಕ ಬಿಹಾರಕ್ಕೆ ಕಳುಹಿಸಿ ಕೊಡಲಾಗುವುದು. ಅಲ್ಲದೇ, ಸಾವಿಗೀಡಾದವರ ಕುಟುಂಬಗಳಿಗೆ ತಲಾ ರೂ. 7 ಲಕ್ಷ ಪರಿಹಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಫುಡ್ ಇಂಡಸ್ರ್ರಿಯಲ್ಲಿ ಮೆಕ್ಕೆಜೋಳ ಸಂಗ್ರಹಿಸಲಾಗಿದ್ದ ಹಾಪರ್ಶ್ರ(ಬೃಹತ್ ಯಂತ್ರ) ಕುಸಿದ ಪರಿಣಾಮ ಹಲವಾರು ಕಾರ್ಮಿಕರು ಮೆಕ್ಕೆಜೋಳದಡಿ ಸಿಲುಕಿದ್ದರು. ರಾತ್ರಿಯಿಡೀ ನಡೆದ ಕಾರ್ಯಚಾರಣೆಯಲ್ಲಿ ಏಳು ಜನರ ಶವಗಳನ್ನು ಹೊರ ತೆಗೆಯಲಾಯಿತು. ಅಲ್ಲದೇ, ಈ ಅವಘಡದಲ್ಲಿ ಗಾಯಗೊಂಡ ಓರ್ವ ವ್ಕಕ್ತಿಯನ್ನು ಆಸ್ಪತ್ರೆದೆ ದಾಖಲಿಸಲಾಗಿದೆ. ರಾತ್ರಿ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದ ಸಚಿವ ಎಂ. ಬಿ. ಪಾಟೀಲ, ಬೆಳಿಗ್ಗೆ ಜಿಲ್ಲಾಸ್ಪತ್ರೆಗೆ ತೆರಳಿ ಸಾವಿಗೀಡಾದ ಕಾರ್ಮಿಕರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಗುರು ಫುಡ್ ಇಂಡಸ್ಟ್ರಿಯಲ್ಲಿ ಹಾಪರ್ ಕುಸಿದ ಪರಿಣಾಮ ಒಟ್ಟು ಎಂಟು ಜನರಲ್ಲಿ ಏಳು ಜನ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಅವರನ್ನು ಕೃಷ್ಣ ಉರ್ಫ ಕಿಸನಕುಮಾರ, ರಾಜೇಶಕುಮಾರ್ ಮುಕಿಯ, ಸಂಬು ಮುಕಿಯ, ಲುಕೋ ಯಾದವ, ರಾಮ್ಬ್ರಿಚ್ ಮುಕಿಯ, ರಾಮಬಾಲಕ ಮುಕಿಯ, ದುಲ್ಹರಾ ಚಂದ್ ಮುಕಿಯ ಎಂದು ಗುರುತಿಸಲಾಗಿದೆ. ಈ ಅವಘಡದಲ್ಲಿ ಆರು ಜನರಾದ ಸೋನು ಕರಾಮಚಂದ, ರವೀಂಶಕುಮಾರ, ಅನಿಲ, ಕಲ್ಮೇಶ್ವರ ಮುಕಿಯ, ಕಿಶೋರ್ ಹಂಜಾರಿಮಲ ಜೈನ, ಪ್ರಕಾಶ್ ಧುಮಗೊಂಡ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಅಲ್ಲದೇ, ಸಾವಿಗೀಡಾದ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ರಾಜಗುರು ಫುಡ್ಸ್ ವತಿಯಿಂದ ತಲಾ ರೂ. 5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ. 2 ಲಕ್ಷ ಮತ್ತು ರಾಜ್ಯ ಸರಕಾರದ ವತಿಯಿಂದ ಸಾವಿಗೀಡಾದ ಕಾರ್ಮಿಕರ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ಸಾವಿಗೀಡಾದ ಕಾರ್ಮಿಕರ ಪಾರ್ಥಿವ ಶರೀರಗಳನ್ನು ವಿಜಯಪುರದಿಂದ ಹೈದರಾಬಾದಿಗೆ ರಸ್ತೆಯ ಮೂಲಕ ಮತ್ತು ನಂತರ ಹೈದರಾಬಾದಿನಿಂದ ಬಿಹಾರದ ಪಾಟ್ನಾಕ್ಕೆ ವಿಮಾನದ ಮೂಲಕ ಕಳುಹಿಸಿ ಕೊಡಲಾಗುವುದು ಎಂದು ಅವರು ತಿಳಿಸಿದರು.
ಕೈಗಾರಿಕೆಗಳಲ್ಲಿ ಕಾರ್ಮಿಕರ ಭದ್ರತೆಗೆ ಕ್ರಮ
ಇದೇ ವೇಳೆ ರಾಜ್ಯ ಎಲ್ಲ ಕಾರ್ಖಾನೆಗಳಲ್ಲಿ ಕಾರ್ಮಿಕರ ಭದ್ರತ್ರೆಗೆ ಕೈಗೊಳ್ಳಬೇಕಿರುವ ಕ್ರಮಗಳು ಮತ್ತು ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಸರಕಾರವೂ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೋಂಡ, ಅಗ್ನಿಶಾಮಕ ದಳ, ಪೊಲೀಸ್, ಎಸ್.ಡಿಆರ್.ಎಫ್, ಎನ್. ಡಿ. ಆರ್. ಎಫ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಪಂಚಾಯಿತಿ ಕಾರ್ಯವನ್ನು ಶ್ಲಾಘಿಸಿದ ಎಂ. ಬಿ. ಪಾಟೀಲ ಅವರು, ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ, ಎಸ್ಪಿ ಋಷಿಕೇಷ ಭಗವಾನ ಸೋನಾವಣೆ, ಜಿ. ಪಂ. ಸಿಇಓ ರಾಹುಲ ಶಿಂಧೆ, ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಎಡಿಸಿ ಮಹಾದೇವ ಮುರಗಿ, ತಹಸೀಲ್ದಾರ ಕವಿತಾ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ, ಎಸ್ಪಿ ಋಷಿಕೇಷ ಭಗವಾನ ಸೋನಾವಣೆ, ಜಿ. ಪಂ. ಸಿಇಓ ರಾಹುಲ ಶಿಂಧೆ, ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಎಡಿಸಿ ಮಹಾದೇವ ಮುರಗಿ, ತಹಸೀಲ್ದಾರ ಕವಿತಾ ಮುಂತಾದವರು ಉಪಸ್ಥಿತರಿದ್ದರು.