ವಿಜಯಪುರ: ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಅವಶ್ಯಕತೆ ಇದೆ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ಸುರೇಶ ದೇಸಾಯಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ವಿವೇಕನಗರದ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಆಯೋಜಿಸಿದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಹಾಗೂ ಕ್ರೀಡೆಯ ಜೊತೆಗೆ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸುವುದರೊಂದಿಗೆ ಅವರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತರಲು ಶಿಕ್ಷಕರು ಹಾಗೂ ಪೋಷಕರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ. ಎಂ .ಬಿರಾದಾರ, ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ಇ.ಜಿ.ಬಿರಾದಾರ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎಲ್.ಬಿ.ಶೇಖ ಮಾಸ್ತರ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ಸ್ವಾಗತಿಸಿದರು. ಎಚ್. ಎ. ಮಮದಾಪುರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿಜಯಪುರದ ಕುಮಾರಿ ಸುಮಯ್ಯಾ ಶೇಖ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಾಟ್ಯ ಕಲಾ ಅಕಾಡೆಮಿಯಿಂದ ಸಮೂಹ ನೃತ್ಯ, ಹಿಟ್ನಳ್ಳಿಯ ನಿಜಾಬಾಯಿ ಹೋಸಾಳಿ ಅವರಿಂದ ಏಕಾಪಾತ್ರಾಭಿನಯ, ಜಾನವಿ ಎನ್. ಗೌಡ ಅವರಿಂದ ಸುಗಮ ಸಂಗೀತ, ಲಕ್ಷ್ಮಿ ಮುರಣಕೇರಿ ಅವರಿಂದ ಜಾನಪದ ಗೀತೆಗಳು, ಬಬಲೇಶ್ವರದ ಕುಮಾರ ಸಮರ್ಥ ಸಂಕೊಂಡ ಅವರಿಂದ ನಲಿ-ಕಲಿ ನಾಟಕ ಪ್ರದರ್ಶನ ಸೇರಿದಂತೆ ನಾನಾ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.