ವಿಜಯಪುರ: ನಮ್ಮ ವಿಜಯಪುರದ ಆಯುಷ್ ಪಂಚಕರ್ಮ ಘಟಕವು ಇತರ ಘಟಕಗಳಿಗೆ ಮಾದರಿಯಾಗಬೇಕು ಆ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ವಿಜಯಪುರದ ಆಯುಷ್ ಹೈಟೆಕ್ ಪಂಚಕರ್ಮ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಆಯುಷ್ ಘಟಕ ಕಾರ್ಯನಿರ್ವಹಿಸುತ್ತಿರುವ ಕುರಿತು ಹಾಗೂ ಈ ಘಟಕದಲ್ಲಿ ದೊರೆಯು ಸೌಲಭ್ಯಗಳ ಕುರಿತು ವಿವಿಧ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ, ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು, ಮನೆ ಮದ್ದು ಕಾರ್ಯಕ್ರಮಗಳನ್ನು ಮತ್ತು ಯೋಗ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಮಾದರಿ ಆಯುಷ್ ಘಟಕವನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳ ಮಾಹಿತಿ, ಆಸ್ಪತ್ರೆಯ ಕೆಲಸದ ಸಮಯ, ಈ ಆಸ್ಪತ್ರೆಯಲ್ಲಿ ದೊರಕುವ ಆಯುಷ್ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಫಲಕ ಅಳವಡಿಸಬೇಕು. ಘಟಕಕ್ಕೆ ಬರುವ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ಹಾಗೂ ಹೆಚ್ಚಿನ ಆಸನದ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಮುಂಭಾಗ ಖಾಲಿ ಇರುವ ಸ್ಥಳದಲ್ಲಿ ಔಷಧಿಯುಕ್ತ ಸಸಿಗಳನ್ನು ನೆಟ್ಟು ಸುಂದರ ಉದ್ಯಾನವನ ನಿರ್ಮಿಸುವಂತೆ ಸೂಚಿಸಿದ ಅವರು, ಮಸಾಜಿಸ್ಟ್ ಸಿಬ್ಬಂದಿಗಳನ್ನು ತರಬೇತಿಗಾಗಿ ಕೇರಳಕ್ಕೆ ಕಳುಹಿಸಲು ಸಲಹೆ ನೀಡಿ, ಅದಕ್ಕೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದರು.
ಆಸ್ಪತ್ರೆಗೆ ಬರುವ ಸಾರ್ವಜನಿಕರ, ರೋಗಿಗಳ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್ ಗಳು ಆಸ್ಪತ್ರೆಯ ವರೆಗೆ ಬರುವ ವ್ಯವಸ್ಥೆ ಮಾಡಲು ಸಂಬಂಧಪಟ್ಟವರೊಡನೆ ಸಂಪರ್ಕಿಸಿ ವ್ಯವಸ್ಥೆ ಕಲ್ಪಿಸಲು ಸ್ಥಳದಲ್ಲಿದ್ದ ಡಾ.ರಾಮನಗೌಡ.ಎಸ್.
ಪಾಟೀಲ, ಜಿಲ್ಲಾ ಆಯುಷ್ ಅಧಿಕಾರಿಗಳು ಇವರಿಗೆ ಸೂಚಿಸಿದರು.
ಈ ಆಸ್ಪತ್ರೆಗೆ ಪ್ರತಿ ದಿನ ಸರಾಸರಿ 100ಕ್ಕೂ ಹೆಚ್ಚಿಗೆ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ವಿರೇಚನ, ಕಟಿಬಸ್ತಿ, ಶಿರೋಧಾರ ಮಸಾಜ್ ಥೆರಪಿ ಮತ್ತು ಸ್ಟೀಮ್ ಥೆರಪಿ ಸೇರಿ ವಿವಿಧ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರಿಗೆ ಆಯುರ್ವೇದ ಪದ್ಧತಿಯ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ರಾಮನಗೌಡ.ಎಸ್.
ಪಾಟೀಲ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೈಧ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.