ವಿಜಯಪುರ: ಮಾನವ ಹಕ್ಕುಗಳ ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಪರಿಪಾಲಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿದ ಅವರು ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲನೆ ಮಾಡಬೇಕು.ಮಾನವ ಹಕ್ಕುಗಳ ಪಾಲನೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಾನವ ಹಕ್ಕುಗಳು ಸ್ವಾಭಾವಿಕವಾಗಿ ಪ್ರದತ್ತವಾದ ಹಕ್ಕುಗಳಾಗಿವೆ. ರಕ್ಷಣೆಗೆ ಆಯೋಗ ಇವೆ. ರಾಜ್ಯದಲ್ಲಿಯೂ ಸಹ ರಾಜ್ಯ ಮಾನವ ಹಕ್ಕುಗಳ ಆಯೋಗವು ಕಾರ್ಯ ನಿರ್ವಹಿಸುತ್ತಿದೆ.ಮಾನವ್ ಹಕ್ಕುಗಳ ಕುರಿತು ಜಾಗೃತಿ ಹೊಂದಬೇಕು. ನಮ್ಮ ಕರ್ತವ್ಯಗಳನ್ನು ಸಹ ನಿಷ್ಠೆಯಿಂದ ನಿರ್ವಹಿಸಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬAತೆ ಪ್ರತಿಯೊಬ್ಬ ವ್ಯಕ್ತಿ ಘನತೆ ಹೊಂದಿರುತ್ತಾನೆ. ಘನತೆಗೆ ಕುಂದು ಬಾರದಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಹಕ್ಕುಗಳ ಉಲ್ಲಂಘನೆ ತಡೆಯುವುದು, ರಕ್ಷಣೆ ನೀಡುವುದು ಉಲ್ಲಂಘನೆಗೊಳಗಾದವರಿಗೆ ನೆರವು ಒದಗಿಸುವುದು ಮಾನವ ಹಕ್ಕುಗಳ ಆಯೋಗದ ಉದ್ಧೇಶವಾಗಿದೆ. ಜೀವನದ ಸ್ವಾತಂತ್ರ‍್ಯ, ಸಮಾನತೆ ಮತ್ತು ವ್ಯಕ್ತಿ ಘನತೆ ಎತ್ತಿಹಿಡಿಯುವ ಹಕ್ಕುಗಳೇ ಮಾನವ ಹಕ್ಕುಗಳು. ಎಲ್ಲರೂ ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು. ಪ್ರತಿಯೊಬ್ಬರೂ ಹಕ್ಕುಗಳನ್ನು ಮತ್ತು ಸ್ವಾತಂತ್ರ‍್ಯವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರೂ ಸಹ ನೈಸರ್ಗಿಕವಾಗಿ ಬಂದAತಹ ಹಕ್ಕುಗಳನ್ನು ಸಹ ಪಡೆದಿರುತ್ತಾರೆ. ಪ್ರತಿಯೊಬ್ಬರಿಗೂ ಘನತೆಯಿಂದ ಜೀವಿಸುವ ಹಕ್ಕು ಇದೆ. ನಮ್ಮ ಸಂವಿಧಾನವು ಸಹ ಎಲ್ಲ ವ್ಯಕ್ತಿಗಳ ಮಾನವ ಹಕ್ಕುಗಳನ್ನು ಗೌರವಿಸಬೇಕೆಂದು ಹೇಳುತ್ತದೆ. ಆದ್ದರಿಂದ ಪ್ರತಿಯೊಬ್ಬರ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕು. ವಿದ್ಯಾರ್ಥಿಗಳು ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸಂರಕ್ಷಣೆಗೆ ಕಟಿಬದ್ಧರಾಗಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆರ್. ಸಿ. ಹಿರೇಮಠ ಮಾತನಾಡಿ, ನೈಸರ್ಗಿಕವಾಗಿಯೇ ಹಲವು ಹಕ್ಕುಗಳು ಪ್ರದತ್ತವಾಗಿವೆ. ಅವುಗಳ ನಿರ್ಬಂಧ ಸಲ್ಲದು. ಮೂಲಭೂತ ಹಕ್ಕುಗಳನ್ನು ಈ ಜಗತ್ತು ಕಂಡಂತಹ ಶ್ರೇಷ್ಠ ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ರಚನೆಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಹಾಗೂ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಅಡಕಗೊಳಿಸಿದ್ದಾರೆ. ಇವೆಲ್ಲ ಮಾನವ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳು. ಜಗತ್ತಿನಾದ್ಯಂತ ಮಾನವ ಹಕ್ಕುಗಳ ಉಳಿಯುವಿಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಎರಡು ವಿಶ್ವ ಮಹಾಯುದ್ಧಗಳಿಂದ ಉಂಟಾದ ಹಾನಿಯಿಂದ ಈ ರೀತಿ ಮುಂದೆಂದೂ ಮರುಕಳಿಸದಂತೆ 1948ರ ಡಿ.10 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಾರಿಗೆ ತರುವುದರ ಮೂಲಕ ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಅಂದಿನಿಂದ ಇಂದಿನವರೆಗೆ 75 ವರ್ಷಗಳಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಹಜವಾಗಿ, ಸ್ವಾಭಾವಿಕವಾಗಿ ಎಲ್ಲರಿಗೂ ಸಿಗುವ ಮಾನವ ಹಕ್ಕುಗಳು ಇವುಗಳ ಉಲ್ಲಂಘನೆಯಾದಾಗ ಹೋರಾಟಗಳು ನಡೆದಿವೆ ನಿಸರ್ಗದತ್ತವಾಗಿ ಪಡೆದಂತಹ ಹಕ್ಕುಗಳು ಮಾನವ ಹಕ್ಕುಗಳು ಇವು ಉಲ್ಲಂಘನೆ ಆಗದಂತೆ ಅವುಗಳ ಸಂರಕ್ಷಿಸಿಬೇಕು. 1993ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚನೆಯಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ವಿಜಯಪುರ ತಹಸೀಲ್ದಾರ ಕವಿತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪುರ, ವಾರ್ತಾಧಿಕಾರಿ ಅಮರೇಶ ದೊಡಮನಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಡಾ. ಸುರೇಶ ಚವ್ಹಾಣ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಸಂಪತ ಗುಣಾರಿ, ಜಿಲ್ಲಾಧಿಕಾರಿ ಕಚೇರಿಯ ಡಿ. ವೈ. ಕಟ್ಟಿಮನಿ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಬೊಧಕ, ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.