ಎಸ್.ಡಿ.ಪಿ.ಐ ವತಿಯಿಂದ ಬೆಳಗಾವಿ ಚಲೋ, ಅಂಬೇಡ್ಕರ್ ಜಾಥಾ- ಗುಮ್ಮಟನಗರಿಯಲ್ಲಿ ಬೃಹತ್ ಜಾಥಾ, ಸಾರ್ವಜನಿಕ ಸಭೆ

ವಿಜಯಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ವತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ- ಅಂಬೇಡ್ಕರ್ ಜಾಥಾ ಡಿಸೆಂಬರ್ 6 ರಂದು ಬೆಂಗಳೂರಿನ ವಿಧಾನ ಸೌಧದಿಂದ ಪ್ರಾರಂಭವಾಗಿದ್ದು ಡಿಸೆಂಬರ್ 11 ರಂದು ಬೆಳಗಾವಿಯ ಸುವರ್ಣ ಸೌಧದವರೆಗೆ ನಡೆದು ಸಮಾರೋಪವಾಗಲಿದೆ.  ಇದರ ಭಾಗವಾಗಿ ನಗರದಲ್ಲಿ ರಾಜ್ಯ ನಾಯಕರ ಜೊತೆ ಸೇರಿ ನೂರಾರು ಕಾರ್ಯಕರ್ತರು ಜಾಥಾ ಮತ್ತು ಸಾರ್ವಜನಿಕರ ಸಭೆ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಜಾಥಾದ ಸಂಚಾಲಕ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರಪ್ರಸಾದ, ಚುನಾವಣೆಗೂ ಮುಂಚೆ ಸಿದ್ದರಾಮಯ್ಯರವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲೇ 2ಬಿ ಮೀಸಲಾತಿಯನ್ನು ಜಾರಿ ಮಾಡುತ್ತೇವೆ.  ಕಾಂತರಾಜ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.  ಆದರೆ, ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಜಾಥಾ ನಡೆಸಿದರು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ, ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರ ಹಾಗೂ ಆಸ್ತಿ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ.  ಎಲ್ಲರಿಗೂ ಸಮಾನ ಹಕ್ಕು, ಅಧಿಕಾರ ಮತ್ತು ಅವಕಾಶಗಳು ಸಿಗಬೇಕೆನ್ನುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಎಲ್ಲ ಪಕ್ಷಗಳೂ ಹೇಳಿಕೊಳ್ಳುತ್ತವೆ.  ಆದರೆ, ಆಯಾ ಪಕ್ಷಗಳು ಅಧಿಕಾರಕ್ಕೆ ಬಂದಾಗ ಶೋಷಿತ, ಅವಕಾಶವಂಚಿತ ಸಮುದಾಯಗಳಿಗೆ ದ್ರೋಹವೆಸಗುದನ್ನು ಮುಂದುವರೆಸುತ್ತವೆ.  ಕೂಡಲೇ ಒಳ ಮೀಸಲಾತಿ ಕುರಿತು ಸರಕಾರ ತೀರ್ಮಾನ ಕೈಗೊಳ್ಳಬೇಕು ಮತ್ತು ಸದಾಶಿವ ಆಯೋಗದ ವರದಿಯನ್ನು ಒಕ್ಕೂಟ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕೋಶಾಧಿಕಾರಿ ಇಸ್ಹಾಕ್ ಹುಸೇನ್(ಖಾಲಿದ್), ರಾಜ್ಯ ಸಮಿತಿ ಸದಸ್ಯ ಅಹ್ಮದಖಾನ ಮೈಸೂರು, ರಿಯಾಜ ಕಡಂಬು, ಯಮನಪ್ಪ ಗುಣದಾಳ, ರಮಜಾನ ಕಡಿವಾಳ, ವಿಜಯಪುರ ಜಿಲ್ಲಾಧ್ಯಕ್ಷ ಅಥಾವುಲ್ಲಾ ದ್ರಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ್ ಅಹ್ಮದ್ ಮನಿಯಾರ, ನಗರ ವಿಧಾನಸಭೆ ಅಧ್ಯಕ್ಷ ಉಮರಖಾನ ಪಠಾಣ, ಕಾರ್ಯದರ್ಶಿ ಜಮೀಲ ಮುಲ್ಲಾ, ಜಿಲ್ಲಾ ನಾಯಕರು, ವಿಧಾನಸಭೆ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌