ವಿಜಯಪುರ: ಡಿಸೆಂಬರ್ 9 ರಿಂದ ಭಾರತಾದ್ಯಂತ ಭಗೀರಥ ಭಾರತ ಜನ ಕಲ್ಯಾಣ ಯಾತ್ರೆ ಪ್ರಾರಂಭಗೊAಡಿದ್ದು, ಯಾತ್ರೆಯು ಡಿ. 14 ರಂದು ಬೆ. 10 ಗಂಟೆಗೆ ವಿಜಯಪುರ ನಗರಕ್ಕೆ ಆಗಮಿಸಲಿದೆ. ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಭಗೀರಥ ವೃತ್ತದಿಂದ ಶಿಕಾರಖಾನೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಪ್ಪಾರ ಸೇವಾ ಸಂಘದ ಅಧ್ಯಕ್ಷ ಜಕ್ಕಪ್ಪ ಯಡವೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ನೇತೃತ್ವದಲ್ಲಿ ಭಗೀರಥ ಪೀಠದ ಜಗದ್ಗುರು ಡಾ. ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಪ್ರಧಾನ ಕಾರ್ಯದರ್ಶಿ ಯು. ವೆಂಕೋಬ ಅವರ ನೇತೃತ್ವದಲ್ಲಿ ಈ ಯಾತ್ರೆಯು ಸಾಗಲಿದೆ ಎಂದು ತಿಳಿಸಿದರು.
ಈ ಯಾತ್ರೆಯಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಮಾಜಿ ಹಾಲಿ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ರಾಜ್ಯ ಮುಖಂಡರು, ಸಮಾಜದ ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳು ಸಮಾಜದ ಹಾಲಿ ನಿವೃತ್ತ ನೌಕರರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ದೇಶದ ನಾನಾ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಉಪ್ಪಾರ ಸಮಾಜವನ್ನು ಸಂಘಟಿಸಿ, ಭಗೀರಥ ಸಮಾಜ ಎಂದು ದೇಶ ದಾದ್ಯಂತ ಕರೆಯಬೇಕು. ದೇಶಾದ್ಯಂತ ಭಗೀರಥ ಜಯಂತಿಯನ್ನು ಕೇಂದ್ರ ಸರಕಾರದಿಂದ ಆಚರಿಸಬೇಕು. ಕೇಂದ್ರ ಸರಕಾರ ಭಗೀರಥ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದಕ್ಕೆ ವಾರ್ಷಿಕವಾಗಿ ರೂ. 2000 ಕೋ. ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಹರಿದ್ವಾರದಲ್ಲಿ ಉಪ್ಪಾರ ಸಮಾಜಕ್ಕೆ ಸ್ಥಳ ಮೀಸಲಿಟ್ಟು, ಗಂಗಾ ನದಿ ಭೂಲೋಕಕ್ಕೆ ತಂದ ಭಗೀರಥರ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ರಾಜ್ಯ ಸರಕಾರ ಉಪ್ಪಾರ ಮತ್ತು ಅದರ ಉಪಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹರೀಶ್ ಮಹತೋ ಚವ್ಹಾಣ ಮತ್ತು ದೇಶದ ನಾನಾ ರಾಜ್ಯಗಳ ಹನ್ನೊಂದು ಜನರ ತಂಡದೊಂದಿಗೆ ದೇಶಾದ್ಯಂತ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಕಾರ್ಯದರ್ಶಿ ಸಿದ್ದು ಗೇರಡೆ, ಸೋಮಶೇಖರ ಬಂಡಿ, ಮುತ್ತಪ್ಪ ಕೆ. ಶಿವಣ್ಣನವರ, ಅನೀಲ ಅವಳ, ಜಿ. ಎಲ್. ಕಸ್ತೂರಿ, ಲಕ್ಷ್ಮಣ ಉಪ್ಪಾರ, ಯಲ್ಲಪ್ಪ ಬಂಡಿ, ಗೋವಿಂದ ಕಸ್ತೂರಿ, ರಾಜು ಕಸ್ತೂರಿ, ನೌಕರ ಸಂಘದ ಅಧ್ಯಕ್ಷ ಪುಂಡಲೀಕ ಉಪ್ಪಾರ, ಶ್ರೀನಿವಾಸ ಅಂಬಲಿ, ಭೀಮಣ್ಣ ಉಪ್ಪಾರ, ಸಾಬು ಕಾತ್ರಾಳ, ಸಂಗು ಪಡಸಲಗಿ, ಆನಂದ ಗಣೂರ, ಸಿದ್ರಾಯ ಗುಗ್ಗರಿ, ಮಹಾಲಿಂಗ ಉಪ್ಪಾರ, ಸಾಬು ಗಂಗನಳ್ಳಿ, ಉಮಾ ಸುರೇಶ ಶಹಾಪೂರ ಮುಂತಾದವರು ಉಪಸ್ಥಿತರಿದ್ದರು.