ವಿಜಯಪುರ: ಒಡಿಶಾದ ಕಾಂಗ್ರೆಸ್ ಸಂಸದ ಧೀರಜ ಸಾಹು ಅವರ ಮನೆಯಲ್ಲಿ ರೂ. 300 ಕೋ. ಗೂ ಹೆಚ್ಚು ನಗದು ಹಣ ಪತ್ತೆಯಾಗಿದ್ದು, ಕೂಡಲೇ ಭ್ರಷ್ಟ ಸಂಸದರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಸಿದ್ದೇಶ್ಶ್ವರ ದೇವಾಸ್ಥಾನದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಧೀರಜ ಸಾಹು ಅವರ ಮನೆಯಲ್ಲಿ ಕೋಟ್ಯಂತರ ನಗದು ಪತ್ತೆಯಾಗಿದೆ. ಇದರಿಂದಾಗಿ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ, ಲೂಟಿಕೋರ, ಲಂಚಕೋರ ಎಂಬುವುದು ಸಾಬೀತಾಗಿದೆ. ಬೆಂಗಳೂರಿನಲ್ಲಿ ಗುತ್ತಿಗೆದಾರರ ಬಳಿ ರೂ. 40 ಕೋ. ರೂ. 80 ಕೋ. ಹಣ ಸಿಕ್ಕಿತ್ತು. ಈಗ ಕಾಂಗ್ರೆಸ್ ಸಂಸದನ ಮನೆಯಲ್ಲಿ ರೂ. 300 ಕೋ. ನಗದು ಸಿಕ್ಕಿದೆ. ಇದರಿಂದ ಕಾಂಗ್ರೆಸಲ್ಸಿನ ಸಾಚಾತನ ಬಟಾಬಯಲಾಗಿದೆ. ಸಂಸದ ಧೀರಜ ಸಾಹು ರಾಜೀನಾಮೆ ನೀಡಬೇಕು. ತಕ್ಷಣ ಅವರನ್ನು ಐಟಿ ಅಧಿಕಾರಿಗಳು ಬಂಧಿಸಿ ಕ್ರಮ ಕೈಗೊಳ್ಳಬೇಕು. ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಕಾಸುಗೌಡ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಮಲ್ಲನಗೌಡ ಪಾಟೀಲ, ಪ್ರೇಮಾನಂದ ಬಿರಾದಾರ, ಶಿಲ್ಪ ಕುದರಗೊಂಡ, ವಿಠ್ಠಲ ಹೊಸಪೇಟ, ಚಿದಾನಂದ ಛಲವಾದಿ, ಕೃಷ್ಣಾ ಗುನ್ನಾಳಕರ, ಪಾಪುಸಿಂಗ ರಜಪೂತ, ರಾಹುಲ ಜಾಧಾವ, ಬಾಬು ರಾಜೇಂದ್ರ ನಾಯಕ, ರಾಜು ಮಗಿಮಠ, ಮಹೇಶ ಒಡೆಯರ ಮುಂತಾದವರು ಉಪಸ್ಥಿತರಿದ್ದರು.