ವಿಜಯಪುರ: ಪ್ರತಿಯೊಬ್ಬರೂ ತಮ್ಮಲ್ಲಿರುವ ಅಂತ:ಶಕ್ತಿಯನ್ನು ಜಾಗ್ರತಗೊಳಿಸಿ, ಜ್ಞಾನ ಸಂಪಾದಿಸಿ ಸಾರ್ಥಕ ಬದುಕು ಸಾಗಿಸಬೇಕು ಎಂದು ಕವಿ, ವಿಚಾರವಾದಿ ಡಾ. ಅಲ್ಲಮಾ ಇಕ್ಬಾಲ್ ಅವರ ಸಾಹಿತ್ಯದ ಸಾರವಾಗಿದೆ ಎಂದು ರಾಜ್ಯ ಸಹಕಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್. ಎಸ್. ಬೀಳಗಿಪೀರ ಹೇಳಿದ್ದಾರೆ.
ನಗರದ ಸಿಕ್ಯಾಬ್ ಸಂಸ್ಥೆಯ ಎ. ಆರ್. ಎಸ್ ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಬಸವೇಶ್ವರ, ವಿವೇಕಾನಂದ, ಇಕ್ಬಾಲ್ ಹಾಗೂ ಅಂಬೇಡ್ಕರ ಪೀಠಗಳು ಹಾಗೂ ಕಾಲೇಜಿನ ಉರ್ದು ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಂಡು ಜೀವನದಲ್ಲಿ ಸಾಧನೆಯ ಶಿಖರ ತಲುಪಬೇಕು. ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಅಲ್ಲಮಾ ಇಕ್ಬಾಲ ಅವರು ಪ್ರಾಚೀನ ಹಾಗೂ ಅಧುನಿಕ ಜೀವನಗಳೆರಡನ್ನು ಸಮೀಕರಿಸಿದ್ದಾರೆ. ಸಮಾಜದ ಸಮಸ್ಯೆಗಳಿಗೆ ಧಾರ್ಮಿಕ ಸಾಹಿತ್ಯದಲ್ಲಿ ಪ್ರಶ್ನೋತ್ತರಗಳ ಮೂಲಕ ಜನ ಸಮಾನ್ಯರಿಗೆ ತಿಳಿಯುವಂತೆ ವಿವರಿಸಿದ್ದಾರೆ ಎಂದು ಹೇಳಿದರು.
ಸೈಯದ ಹೈದರಪಾಶಾ ಖಾದ್ರಿ ಸಜ್ಜಾದೆ ನಿಲಂಗಾ ಮಾತನಾಡಿ ಡಾ. ಅಲ್ಲಮಾ ಇಕ್ಬಾಲರ ಕಾವ್ಯ, ಸಾಹಿತ್ಯದಲ್ಲಿ ವಾಸ್ತವಿಕತೆ ಹಾಗೂ ನೈತಿಕತೆ ಎರಡೂ ಸಂಗತಿಗಳು ಉತ್ತಮ ರೀತಿಯಲ್ಲಿ ವಿವರಿಸಲ್ಪಟ್ಟಿವೆ. ಇಕ್ಬಾಲ ಅವರು ಪಾಶ್ಚಿಮಾತ್ಯ ಶಿಕ್ಷಣದಿಂದ ಪ್ರಭಾವಿತರಾದರೂ ಇಸ್ಲಾಮ್ ಧರ್ಮದ ಮಾರ್ಗದರ್ಶನವನ್ನು ಜಗತ್ತಿಗೆ ತಿಳಿಯುವಂತೆ ವಿವರಿಸಿದ್ದಾರೆ ಎಂದು ಕವಿತೆಗಳ ಮೂಲಕ ವಿಶ್ಲೇಷಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫಿ ಭಂಡಾರಿ ಮಾತನಾಡಿ ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಇಂದಿನ ಅಗತ್ಯವಾಗಿದೆ. ಇದನ್ನು ಕವಿ ಇಕ್ಬಾಲರು ಶತಮಾನದ ಹಿಂದೆಯೇ ಪ್ರತಿಪಾದಿಸಿದ್ದಾರೆ. ಮಹಿಳಾ ಶಿಕ್ಷಣ ಇಂದು ಅವಶ್ಯವಾಗಿದ್ದು ಅದಕ್ಕಾಗಿ ಶ್ರಮಿಸುತ್ತಿರುವ ಸಿಕ್ಯಾಬ್ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಸಿಕ್ಯಾಬ್ ಸಂಸ್ಥೆಯ ಕರ‍್ಯದರ್ಶಿ ಎ. ಎಸ್. ಪಾಟೀಲ ಮಾತನಾಡಿ, ಇಕ್ಬಾಲ್ ಅವರ ಬೋಧನೆಗಳು ಎಲ್ಲ ಜಾತಿ,ಧರ್ಮ, ವರ್ಗ, ವರ್ಣದ ಜನರಿಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.
ಸಿಕ್ಯಾಬ್ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಎ. ಪುಣೇಕರ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ಶಾಂತಿ, ಸಹಬಾಳ್ವೆ ಇಂದು ಅವಶ್ಯವಾಗಿವೆ. ಶಿಕ್ಷಣವು ನಮ್ಮಲ್ಲಿ ಈ ಎಲ್ಲ ಪ್ರಜ್ಞೆಗಳನ್ನು ಮೂಡಿಸಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪರ್ತಕರ್ತ ರಫಿ ಭಂಡಾರಿ ಅವರನ್ನು ಸಿಕ್ಯಾಬ್ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು ಮತ್ತು ಅವರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯಲೆಂದು ಹಾರೈಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿಕ್ಯಾಬ್ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್ ನಜೀಬ್ ಭಕ್ಷಿ ಉಪಸ್ಥಿತರಿದ್ದರು.
ಸಿಕ್ಯಾಬ್ ಸಂಸ್ಥೆಯ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಾದ ಆಸ್ಮಾ ನಾಗರದಿನ್ನಿ, ಅಬ್ದುಲ್ ಕರೀಮ ಅಸದುಲ್ಲಾ ಬಗಲಿ, ಅದಿಬಾ ಜಾಗೀರದಾರ ಮುಂತಾದವರು ಡಾ. ಅಲ್ಲಮಾ ಇಕ್ಬಾಲ್ ಅವರ ಕುರಿತು ಭಾಷಣ ಮತ್ತು ಕಾವ್ಯಗಳನ್ನು ಹೇಳಿದರು.
ಡಾ. ಮಹಮ್ಮದ ಸಮೀಯುದ್ದೀನ್, ಡಾ. ಎಸ್. ಎಚ್. ಮಲಘಾಣ, ಡಾ. ಗಿರೀಶ ಲೆಂಡಿ, ಪ್ರೊ. ಹಸನ್ ಖಾದ್ರಿ, ಉಪಪ್ರಾಚಾರ್ಯ ಪ್ರೊ. ಜೋಹರಾ ತಬಸುಮ್ ಖಾಜಿ, ಡಾ. ಎಸ್. ಐ. ನದಾಫ್, ಪ್ರೊ. ಅಮರೀನ್ ಸಭಾ ಮುಲ್ಲಾ, ಪ್ರೊ. ಆರ್ಶಿಯಾ ಖತೀಬ್ ಹಾಗೂ ಪ್ರೊ. ಪೂಜಾ ದೇಸಾಯಿ, ಉರ್ದು ಮಾಧ್ಯಮದ ಪ್ರಾಥಮಿಕ ಪ್ರೌಢಶಾಲೆಯ ವಿದ್ಯಾರ್ಥಿಗಳು, ಉರ್ದು ವಿಭಾಗದ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಯೇಷಾ ಮಣಿಯಾರ ಪವಿತ್ರ ಖುರಾನ, ರಾಧಿಕಾ ಮತ್ತು ಸೌಮ್ಯಲತಾ ಭಗವದ್ಗೀತೆಯನ್ನು ಪಠಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜ ಟಿ. ಕೊಟ್ನಿಸ್ ಸ್ವಾಗತಿಸಿದರು. ಪ್ರೊ. ಎಚ್. ಕೆ. ಯಡಹಳ್ಳಿ ಪರಿಚಯಿಸಿದರು. ಉರ್ದು ವಿಭಾಗದ ಮುಖ್ಯಸ್ಥ ಡಾ. ಹಾಜಿರಾ ಪರವೀನ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ ಮೇತ್ರಿ ವಂದಿಸಿದರು.