ವಿಜಯಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಪರೇಡ್ ಗ್ರೌಂಡನಲ್ಲಿ ಏರ್ಪಡಿಸಿದ ಸ್ವಾನ ಪ್ರದರ್ಶನಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಚಾಲನೆ ನೀಡಿದರು.
ಈ ಪ್ರದರ್ಶನದಲ್ಲಿ ಸುಮಾರು 24 ತಳಿಯ ಶ್ವಾನಗಳು ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ 250 ಶ್ವಾನಗಳ ಮಾಲೀಕರು ಪ್ರದರ್ಶನಕ್ಕೆ ನೋಂದಣಿ ಮಾಡಿಕೊಂಡು ಪಾಲ್ಗೊಂಡರು. ಗ್ರೇಟ್ ಫೇನ್, ಬೀಗಲ್, ಬಾಕ್ಸರ್, ಪೂಡಲ್, ಬೆಲ್ಜಿಯಂ ಮಾಸ್ಟಿಪ್, ಪಸ್ಮಿ ಪಂಜಾಬಿ, ಮಿನಿಯೇಚರ್ ಪಮೇರಿಯನ್, ಸ್ವಿಡ್ಜು, ಕಾಕರ್ ಸ್ಫೇನಿಯಲ್, ಮುದೋಳ ಹೌಂಡ, ಲ್ಯಾಬ್ರಡಾರ್, ಡಾಬರ್ ಮನ್, ಕೇನ್ ಕಾರ್ಸೋ, ಸೈಬೇರಿಯನ್ ಹಸ್ಕಿ,ಗೋಲ್ಡನ್ ರಿಟ್ರೆöÊವರ್ ಗ್ರೇ ಹೌಂಡ್ ಸೇರಿದಂತೆ ನಾನಾ ತಳಿಯ ಮುದ್ದು ಸ್ವಾನಗಳು ಎಲ್ಲರ ಗಮನ ಸೆಳೆದವು.
ಅಪರೂಪದ ಶ್ವಾನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ನಾನಾ ತಳಿಯ ಶ್ವಾನಗಳು ಅಬಾಲವೃದ್ಧರಾದಿಯಾಗಿ ನೆರೆದ ಜನರಿಗೆ ಮನರಂಜನೆ ನೀಡಿದವು. ಶ್ವಾನಗಳ ಮಾಲೀಕರು ಅವುಗಳ ವಿಶೇಷ ಹೆಸರಿನಿಂದ ಕರೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಇಲಾಖೆಯಿಂದ ಸ್ಥಾಪಿತ ಕೌಂಟರಿನಲ್ಲಿ ಪ್ರದರ್ಶನಕ್ಕೆ ಕರೆ ತಂದ ಶ್ವಾನಗಳ ನೋಂದಣಿ ಕಾರ್ಯ ನಡೆದು, ಆರೋಗ್ಯ ತಪಾಸಣೆ ನಡೆಸಿ, ರೋಗ ನಿರೋಧಕ ಲಸಿಕೆ ನೀಡಲಾಯಿತು.
ನಾಗಠಾಣ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ನಮ್ಮ ಪರಂಪರೆಯಲ್ಲಿ ಶ್ವಾನಕ್ಕೆ ತನ್ನದೇಯಾದ ಮಹತ್ವವಿದೆ. ರೈತರ ಒಡನಾಡಿ, ನಂಬಿಗಸ್ಥ ಪ್ರಾಣಿ ಜೀವದ ಹಂಗು ತೊರೆದು ಮಾನವನ ಜೀವನ ರಕ್ಷಣೆ ಮಾಡುತ್ತದೆ. ಈ ಪ್ರದರ್ಶನದಿಂದ ಶ್ವಾನ ಪ್ರಿಯರಿಗೆ ಪ್ರೇರಣೆ ದೊರೆಯಲಿದೆ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಈ ಪ್ರದರ್ಶನ ಏರ್ಪಾಡಿಸುತ್ತಾ ಬರಲಾಗುತ್ತಿದೆ. ನಾನಾ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಪ್ರಾಣಿ ಪ್ರೀತಿ, ಪ್ರಾಣಿ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು. ಪ್ರತಿಯೊಂದು ಪ್ರಾಣಿಗಳಿಗೆ ಗೌರವ ಕೊಡುವ ಸಂಸ್ಕೃತಿ ಭಾಗವಾಗಿದೆ. ಎಲ್ಲಾ ಪಶು ಪಕ್ಷಿಗಳಿಗೆ ನಿಸರ್ಗದಲ್ಲಿ ಅವುಗಳ ಪಾಲಿದೆ. ಮುಧೋಳ ಶ್ವಾನ ಬಹಳ ಪ್ರಸಿದ್ದಿ ಹೊಂದಿದ್ದು, ಮುಧೋಳದ ಶ್ವಾನಗಳು ಭಾರತೀಯ ಸೇನೆಯಲ್ಲಿರುವುದು ನಮಗೆ ಗೌರವ. ಪಶು ಪಕ್ಷಿಗಳಿಗೆ ಆಹಾರ ನೀಡಿ, ಅವುಗಳ ರಕ್ಷಣೆ ಮಾಡಬೇಕು.ಇಲ್ಲಿ ಭಾಗವಹಿಸುವ ಶ್ವಾನಗಳಿಗೆ ಪಾರಿತೋಷಕ ಹಾಗೂ ಬಹುಮಾನ ನೀಡಲಾಗುತ್ತಿದೆ. ಶ್ವಾನ ಪ್ರದರ್ಶನ ಯಶಸ್ವಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಘೋಣಸಗಿ, ಜಿಲ್ಲಾದ್ಯಂತ ಶ್ವಾನಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಎಲ್ಲರೂ ಜಾನುವಾರುಗಳಿಗೆ ಅಗತ್ಯ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ. ಎಸ್. ಕನಮಡಿ, ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ನಾಗರಾಜ್ ಹಾಗೂ ಡಾ. ಡಿ. ಆರ್. ಮಂಜುನಾಥ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.