ವಿಜಯಪುರ: ಜಿಲ್ಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಗಣಿತ ವಿಷಯದ ಕುರಿತಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನಡೆದ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್. ಎಚ್. ನಾಗೂರ ತಿಳಿಸಿದ್ದಾರೆ.
ನಗರದ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳು, ವಿಷಯದ ಗೊಂದಲಗಳಿಗೆ ವಿಷಯ ತಜ್ಞ ಶಿಕ್ಷಕರಿಂದ ಪ್ರಶ್ನೆ ಕೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊAಡರು. ಜಿಲ್ಲೆಯ 273 ವಿದ್ಯಾರ್ಥಿಗಳಿಂದ 429 ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಯಿತು.
ಫೋನ್ ಇನ್ ಕಾರ್ಯಕ್ರಮದಲ್ಲಿ ನಾನಾ ವಿದ್ಯಾರ್ಥಿಗಳಿಂದ ಕೇಳಲಾದ ಬಹುಪದೋಕ್ತಿ ಎಂದರೇನು? ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ? ವೃತ್ತಗಳು ಬಗ್ಗೆ ತಿಳಿಸಿರಿ. ಅನ್ವಯಿಕ ಪ್ರಶ್ನೆಗಳನ್ನು ಹೇಗೆ ಬಿಡಿಸುವುದು? ಯಾವ ಯಾವ ಅಧ್ಯಾಯದಲ್ಲಿ ಎಷ್ಟು ಅಂಕಗಳ ಪ್ರಶ್ನೆ ಬರುವವು? ಶ್ರೀಧರನ ಸೂತ್ರ, ಸಂಖ್ಯಾಶಾಸ್ತ್ರ ಹೇಗೆ ಬಿಡಿಸುವುದು? ಶ್ರೇಢಿ ಯಲ್ಲಿ ಅನ್ವಯಿಕ ಪ್ರಶ್ನೆಗಳನ್ನು ಕೇಳುವರೇ? ಟಿನೇ ಪದೇ ಎಂದರೇನು?ಎರಡು ಪದಗಳು ಹೋಲಿಕೆ ಮಾಡುವುದು ಹೇಗೆ? ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ? ಮನೆಯಲ್ಲಿ ಕಲಿಕಾ ಸಮಯ ಹೇಗೆ ಹೊಂದಾಣಿಕೆ ಮಾಡಿಕೊಂಡು ಕಲಿಯಬೇಕು? ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಭಯ ಆಗುತ್ತಿದೆ ಏನು ಮಾಡಬೇಕು? ಪರೀಕ್ಷೆಗೆ ಬರಲಿರುವ ಪ್ರಮುಖ ಪ್ರಮೇಯಗಳು ಯಾವುವು? ಮನೆಯಲ್ಲಿ ಲೆಕ್ಕ ಮಾಡಲು ಕುಳಿತಿರುವೆ ಬರುತ್ತವೆ. ಪರೀಕ್ಷೆಯಲ್ಲಿ ಅದೇ ಪ್ರಶ್ನೆಗೆ ಉತ್ತರ ಬರುವುದಿಲ್ಲ ಯಾಕೆ? ಹೀಗೆ ಹಲವು ಪ್ರಶ್ನೆಗಳು ಕೇಳಿ ಬಂದವು.
ಗಣಿತ ವಿಷಯದ ಸಂಪನ್ಮೂಲ ಶಿಕ್ಷಕರಾಗಿ ಕೆ. ಎಸ್. ಚನ್ನವೀರ, ಎಂ. ಎ. ಬಿರಾದಾರ, ಪಿ. ಎಸ್. ಮರಗಟ್ಟಿ. ಎಸ್.ವಿ. ಬುರ್ಲಿ, ರವೀಂದ್ರ ಬೆನ್ನೂರ, ಪ್ರಕಾಶ ಬಿರಾದಾರ, ಎಸ್. ಬಿ. ನಾಗರಾಳ, ಅಶೋಕ ಗುಂಡಳ್ಳಿ, ಎಂ. ಜಿ. ಕುಲಕರ್ಣಿ, ಅಜಿತ ಜೋಷಿ, ಬಿ. ಎಸ್. ಬೆಳ್ಳುಂಡಗಿ, ಲತಾ ಜೋಷಿ 13 ಜನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ಗ್ರಾಮೀಣ ಬಿಇಓ ಪ್ರಮೋದಿನಿ ಬಳೂಲಮಟ್ಟಿ ಮತ್ತು ಗಣಿತ ವಿಷಯ ಪರಿವೀಕ್ಷ ಸಿ. ಎಚ್. ಬಿರಾದಾರ, ಎಸ್. ಎಸ್. ತಳ್ಳೊಳ್ಳಿ, ಸಿ. ಎಚ್. ಬಿರಾದಾರ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕಿ ಶೈಲಾ ಹಳೆಮನಿ, ಉರ್ದು ಶಿಕ್ಷಣ ಸಂಯೋಜಕ ಝಡ್. ಎ. ಸತಾರೇಕರ ಸೇರಿದಂತೆ ನಾನಾ ಶಿಕ್ಷಕರು ಉಪಸ್ಥಿತರಿದ್ದರು.