ವಿಜಯಪುರ: ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂ ಮಾಡುವಂತೆ ಕಳೆದ 29 ದಿನಗಳಿಂದ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಸರಕಾರ ಶೀಘ್ರ ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.
ನಗರದಲ್ಲಿ ಜಿಲ್ಲಾಧಿಕಾರಿ ಆವರಣದ ಬಳಿ ಕಳೆದ 29 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಉಪನ್ಯಾಸಕರನ್ನು ಭೇಟಿ ಮಾಡಿ ಅವರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ 20 ವರ್ಷದಿಂದ ಸಾವಿರ ರೂಪಾಯಿ ಸಂಬಳಕ್ಕೆ ಸೇವೆ ಪ್ರಾರಂಭಿಸಿರುವ ಎಲ್ಲಾ ಅತಿಥಿ ಉಪನ್ಯಾಸಕರ ನೋವಿನ ಕಥೆ ಕೇಳಿದರೆ ದುಃಖವಾಗುತ್ತದೆ. ಕಳೆದ ಎರಡು ದಶಕಗಳಿಂದ ಆಡಳಿತದಲ್ಲಿರುವ ಸರಕಾರಗಳು ಮತ್ತು ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎನ್ನುವುದು ಅವರ ನೋವಾಗಿದೆ. ಈಗಾಗಲೇ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಸಚಿವ ಡಾ. ಎಂ. ಬಿ. ಪಾಟೀಲರು ಸುವರ್ಣ ಸೌಧದ ಮುಂದೆ ಧರಣಿ ನಿರತರನ್ನು ಭೇಟಿಯಾಗಿ ಅವರ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಸಿಎಂ ಶಿಕ್ಷಣ ಪ್ರೇಮಿಗಳು, ಜೊತೆಗೆ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಆಡಳಿತಗಾರರಾಗಿದ್ದಾರೆ. ಖಂಡಿತವಾಗಿಯೂ ನಿಮ್ಮ ಬೇಡಿಕೆಗೆ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಪರಿಹಾರ ದೊರೆಯುತ್ತದೆ ಎನ್ನುವ ಆತ್ಮವಿಶ್ವಾಸ ನನಗಿದೆ ಎಂದು ಅವರು ಹೇಳಿದರು.
ಮಕ್ಕಳ ಕಲಿಕೆಯ ಹಿತ ದೃಷ್ಟಿಯಿಂದ ತಾವು ಆದಷ್ಟು ಬೇಗನೆ ತರಗತಿಗಳಿಗೆ ಮರಳುವಂತಾಗಲಿ ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಧರಣಿ ನಿರತ ಅಧ್ಯಾಪಕರಿಗೆ ಅವರು ವಿನಂತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ಅವರು ಸರಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರಾಗಿದ್ದು ಖಂಡಿತವಾಗಿಯೂ ಅವರು ನಿಮಗೆ ನ್ಯಾಯ ದೊರಕಿಸಿ ಕೊಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಬ್ಬಿ ಮತ್ತು ಆನಂದ ಕುಲಕರ್ಣಿ ಸೇರಿದಂತೆ ನೂರಾರು ಧರಣಿ ನಿರತ ಉಪನ್ಯಾಸಕರು ಉಪಸ್ಥಿತರಿದ್ದರು.