ವಿಜಯಪುರ: ಸಿಎಂ ಎಸ್. ಸಿದ್ಧರಾಮಯ್ಯ ಅವರು ಜಮೀರ್ ಅಹ್ಮದ್ ಜೊತೆಗೂಡಿ ಹಾದಿ ಬಿಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ವಿಜಯಪುರ ನಗರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಕಳಸದ ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಗಳ ಜೊತೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಐಷಾರಾಮಿ ವಿಮಾನದಲ್ಲಿ ಪ್ರಯಾಣ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಹಾಗೂ ಜಮೀರ್ ಅಹ್ಮದ್ ಖಾನ್ ಪ್ರಯಾಣ ಮಾಡಿದ ವಿಮಾನ ಫೈವ್ ಸ್ಟಾರ್ ಮಾದರಿಯಲ್ಲಿದೆ. ಸಿದ್ದರಾಮಯ್ಯ ಅವರು ಸಮಾಜವಾದ ಬಡವರ ಪರವಾಗಿ ಏನೇನೋ ಕಥೆ ಹೊಡೆಯುತ್ತಿದ್ದರು. ಜಮೀರ್ ಅಹ್ಮದ್ ಜೊತೆಗೂಡಿ ಹಾದಿ ಬಿಟ್ಟಿದ್ದಾರೆ. ಜಮೀರ್ ಅಹ್ಮದ್ ಜೊತೆಗೆ ಯಾರು ಕೊಡುತ್ತಾರೆ ಅವರು ಹಾದಿ ಬಿಡುತ್ತಾರೆ. ಹಿಂದೆ ಕುಮಾರಸ್ವಾಮಿ ಜಮೀರ್ ಜೊತೆ ಕೂಡಿ ಹಾದಿ ಬಿಟ್ಟಿದ್ದರು. ಈಗ ಕುಮಾರಸ್ವಾಮಿ ಹಾದಿಯೊಳಗೆ ಬಂದಿದ್ದಾರೆ. ಈಗ ಜಮೀರ್ ಜೊತೆಗೂಡಿ ಸಿದ್ದರಾಮಯ್ಯ ಹಾದಿ ಬಿಟ್ಟು ಮೆಕ್ಕಾ ಮದೀನಾಕ್ಕೆ ಹೊರಟಿದ್ದಾರೆ. ಸಿದ್ಧರಾಮಯ್ಯ ಅವರನ್ಮೂ ಜಮೀರ್ ಅಹ್ಮದ್ ಮುಗಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿ ಭೇಟಿ ವಿಚಾರ, ವಿಜಯೇಂದ್ರ ವಿರುದ್ಧ ವಾಗ್ದಾಳಿ
ತಾವು ದೆಹಲಿ ಭೇಟಿ ನೀಡಿದ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಮಾಧ್ಯಮಗಳ ವಿರುದ್ಧ ಯತ್ನಾಳ ಹರಿಹಾಯ್ದ ಶಾಸಕರು, ನಾನು ಯಾರ ಭೇಟಿಗೂ ಹೋಗಿಲ್ಲ. ನಾನು ಯಾರ ಅಪೈಂಟ್ಮೆಂಟ್ ಕೇಳಿಲ್ಲ. ನನಗೆ ಯಾರ ಅಪೈಂಟ್ಮೆಂಟ್ ಅವಶ್ಯಕತೆ ಇಲ್ಲ. ನಾನು ನನ್ನ ವಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಕಾರ್ಖಾನೆ ಕೆಲಸಕ್ಕೆ ಹೋಗಿದ್ದೆ. ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ ಮತ್ತು ಇತರೆ ಕೆಲವು ಜನ ಸಂಸದರನ್ನು ಭೇಟಿಯಾಗಿದ್ದೇನೆ. ನಾನು ಅತ್ಯಂತ ಅಪಮಾನಕಾರಿಯಾಗಿ, ದೈನ್ಯನಾಗಿ ಬಂದಿಲ್ಲ ಎೞದು ಹೇಳಿದ ಅವರು, ಇದೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.
ವಿಜಯೇಂದ್ರನನ್ನು ಬೇಕಾದಷ್ಟು ಹೊಗಳಿ. ವಿಜಯೇಂದ್ರ ಇರುವುದರಿಂದ 35 ಲೋಕಸಭೆ ಸೀಟ್ ಗಳು ಬರುತ್ತವೆ ಎಂದು ಹೊಗಳಿ. ನನ್ನದೇನು ಗಂಟು ಹೋಗುತ್ತದೆ. ಇರುವ 28 ಕ್ಷೇತ್ರಗಳಿದ್ದರೂ 35 ಕ್ಷೇತ್ರಗಳು ಇವೆ ಎಂದು ಹಾಕಿರಿ. ಪ್ರಧಾನಿ ನರೇಂದ್ರ ಮೋದಿಯವರ ಮೇಲೆಯೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಯಾ ಯಪ್ಪಂದು ಏನು ಇಲ್ಲ. ಇವರ ಮುಖ ನೋಡಿ ಯಾರು ಮತ ಹಾಕಲ್ಲ. ನನ್ನ ಹೋರಾಟ ವಂಶವಾರು ಭ್ರಷ್ಟಾಚಾರ ಹಾಗೂ ಅಡ್ಜೆಸ್ಟಮೆಂಟ್ ಈ ಮೂರರ ವಿರುದ್ಧ ಇದೆ. ಇವುಗಳ ಕುರಿತು ನನ್ನ ಹೋರಾಟ ನಿರಂತರವಾಗಿರುತ್ತದೆ. ನನಗೆ ಯಾರೋ ಬೈದಿಲ್ಲ ಎಚ್ಚರಿಕೆಯನ್ನು ನೀಡಿಲ್ಲ. ಗಂಭೀರವಾದ ಎಚ್ಚರಿಕೆಯನ್ನು ಯಾವನೂ ಕೊಟ್ಟಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ವಿಚಾರ
ತಮ್ಮ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಥವುಗಳ ಬಗ್ಗೆ ಒಮ್ಮೆ ಹೇಳಿದ್ದೇನೆ ಪ್ರತಿ ಬಾರಿ ಅಂಥವರ ಹೆಸರನ್ನು ತೆಗೆಯಬೇಡಿ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ ಬೀದಿನಾಯಿ ನರಿ ಎಂದು ಅವರು ವಾಗ್ದಾಳಿ ನಡೆಸಿದರು.
ಇಂಥವುಗಳಿಗೆ ನಾನು ಉತ್ತರಿಸಲ್ಲ. ಹಾದಿ ಬೀದಿಯಲ್ಲಿರುವವರ ಹೇಳಿಕೆ ಕುರಿತು ಉತ್ತರಿಸುವಷ್ಟು ಲೋ ಲೆವಲ್ ರಾಜಕಾರಣಿಯಲ್ಲ. ಒಂದಷ್ಟು ಸ್ಟೇಟಸ್ ಇದ್ದವರ ಬಗ್ಗೆ ಕೇಳಿ. ಯಾವನೋ ಒಬ್ಬ ಹುಚ್ಚ ಎನ್ನುತ್ತಾನೆ. ಮತ್ತೋರ್ವ ಉತ್ತರ ಕುಮಾರ ಎನ್ನುತ್ತಾನೆ. ಮತ್ತೆ ಆತನೇ ಯತ್ನಾಳ್ ನಮ್ಮ ಪಕ್ಷದ ಆಸ್ತಿ ಎನ್ನುತ್ತಾನೆ. ನಾನು ಯಾರಿಗೂ ಐ ಡೋಂಟ್ ಕೇರ್ ಎಂದು ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ ಮತ್ತು ಮಥುರಾ ದೇವಸ್ಥಾನಗಳೂ ಕೂಡ ನಮ್ಮ ಪಾಲಾಗುತ್ತವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ದೇಶದ ಹಿಂದೂಗಳ ಮನಸ್ಸಿನಲ್ಲಿ ಸಂಕಲ್ಪವಿತ್ತು. ಕಾಶಿ ಮತ್ತು ಮಥುರಾ ದೇವಸ್ಥಾನಗಳು ಮುಂದಿನ ದಿನಗಳಲ್ಲಿ ಮುಕ್ತವಾಗಬೇಕು, ಕಾಶ್ಮೀರದ 370 ನೇ ವಿಧಿ ರದ್ದಾಗಬೇಕು ಎಂಬುದು ವಾಜಪೇಯಿ, ಆಡ್ವಾಣಿಯವರ ಕನಸಾಗಿತ್ತು. ಅದಕ್ಕಾಗಿ ಅವರು ದೇಶದಲ್ಲಿ ರಥಯಾತ್ರೆ ಮಾಡಿದರು. ರಾಮ ಮಂದಿರ ನಿರ್ಮಾಣದ ಹಿಂದೆ ಪಿ ಎಚ್ ಪಿ ಯ ಅಶೋಕ್ ಸಿಂಘಾಲ್ ಅವರ ತಪಸ್ಸಿತ್ತು. ಇವರೆಲ್ಲರ ಕನಸನ್ನ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರದ 370ನೇ ವಿಧಿಯನ್ನ ತೆಗೆದು ಹಾಕುವ ಮೂಲಕ ಮನಸ್ಸು ಮಾಡಿದ್ದಾರೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಕಂಡಿದ್ದ ಎಲ್ಲ ಕನಸುಗಳು ಈಗ ಈಡೇರಿವೆ ಎಂದು ಅವರು ಹೇಳಿದರು.
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿಗೆ ಆಹ್ವಾನ ವಿಚಾರ
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸೋನಿಯಾಗಾಂಧಿ ಬರುತ್ತಾರಾ ಎಂಬ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಆಗಮಿಸಬೇಕೆಂದು ಸೋನಿಯಾ ಗಾಂಧಿಯವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿವೆ. ಹಿಂದೂಗಳ ಬಗ್ಗೆ ಕಳಕಳಿ ಇದ್ದರೆ, ದೇಶದ ಬಗ್ಗೆ ಕಳಕಳಿ ಇದ್ದರೆ, ಹಿಂದೂಗಳ ವೋಟ್ ಬೇಕಾದರೆ ಬರುತ್ತಾರೆ. ಸೋನಿಯಾ ರಾಮ ಮಂದಿರಕ್ಕೆ ಬರುವುದು ಓಟಿಗಾಗಿ. ಸಾಬರ ಓಟ್ ಬೇಕಿದ್ದರೆ ಮಕ್ಕಾ ಮದೀನಾಕೆ ಹೋಗಲಿ. 25 ಜನ ಕಾಂಗ್ರೆಸ್ಸಿನ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಯೋಧ್ಯಾ ರಾಮ ಮಂದಿರ ಕೇಸ್ ನಲ್ಲಿ ವಾದ ಮಾಡಿದ್ದರು. ಕಪೀಲ್ ಸಿಬ್ಬಲ್ ಹಿಡಿದು ಕಾಂಗ್ರೆಸ್ ನ 27 ವಕೀಲರು ವಾದ ಮಾಡಿದ್ದಾರೆ. ರಾಮ ಕಲ್ಪನೆ ಎಂದು ಕಪೀಲ್ ಸಿಬ್ಬಲ್ ವಾದ ಮಾಡಿದ್ದರು. ರಾಮ ಇದ್ದ ಎನ್ನಲು ದಾಖಲೆಗಳು ಇಲ್ಲ ಎಂದು ವಾದ ಮಾಡಿದ್ದರು. ಹಿಂದೂ ಸಂಸ್ಕೃತಿ, ಭಾರತೀಯ ಸಂಸ್ಕ್ರತಿಯಲ್ಲಿ ವೈರಿಗಳಿಗೂ ಸ್ವಾಗತ ಮಾಡುವುದು ಕರೆಯೋದು ನಮ್ಮ ಧರ್ಮ. ನಮ್ಮವರು ಹೋಗಿ ಕರೆದಿದ್ದಾರೆ. ಬರುವುದು ಅಥವಾ ಬಿಡುವುದು ಅವರಿಗೆ ಬಿಟ್ಟದ್ದು ಎಂದು ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದರು.