ವಿಜಯಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಮಾದಿಗರಿಗೆ ಮಿಸಲಾತಿ ಕೊಡಿಸುವ ಮತ್ತು ಸಾಮಾಜಿಕ ನ್ಯಾಯ ಕೊಡಿಸುವ ಹೋರಾಟದಲ್ಲಿ ನಾನು ನಿಮ್ಮ ಜೊತೆಗಿದ್ದೇನೆ ಎಂದು ನಮ್ಮನ್ನು ಅಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಮುಖ್ಯಮಂತ್ರಿ ನೀವು ನಮ್ಮವರು ಎಂದು ಮಾದಿಗರನ್ನು ಎಂದಿಗೂ ಅಪ್ಪಿಕೊಂಡು ಮಾತನಾಡಿಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ನಗರದ ಅಥಣಿ ರಸ್ತೆಯ ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ಸಾಯಿ ಗಾರ್ಡನ್‌ನಲ್ಲಿ ನಡೆದ ರಾಜ್ಯದ ಎಲ್ಲಡೆ ಮಾದಿಗ ಮುನ್ನಡೆ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಾದಿಗರ 30 ವರ್ಷದ ಹೋರಾಟಕ್ಕೆ ಜಯ ಸನಿಹದಲ್ಲಿ ಬಂದಿದೆ. ಕೇವಲ ಮಾದಿಗರಷ್ಟೇ ಅಲ್ಲ. 101 ಜನಾಂಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಿದ್ದರಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮಿಸಲಾತಿಯಿಂದ ಭಜಂತ್ರಿ, ವಡ್ಡರ, ಲಂಬಾಣಿಗಳನ್ನು ತೆಗೆದು ಹಾಕುತ್ತಾರೆ ಎಂದು ಬಿಜೆಪಿ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದರು. ಅದರಲ್ಲೂ ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದರು. ನಾನು ಹೋದ ಕಡೆಗಳಲ್ಲಿ, ಸುದ್ದಿಗೋಷ್ಠಿಯಲ್ಲಿ ದಾಂಧಲೆ ಮಾಡಿಸಿದರು ಎಂದು ಕಾಂಗ್ರೆಸ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ನಮಗೆ ಸಾಮಾಜಿಕ ನ್ಯಾಯ ಕೊಡಿಸಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಹೋಗದಿದ್ದರೆ ನಾವು ಮನುಷ್ಯರೇ ಅಲ್ಲ. ಕಾಂಗ್ರೆಸ್‌ನವರ ಮೋಸವನ್ನು ಜನರ ಮುಂದೆ ಪ್ರತಿ ಹಳ್ಳಿಹಳ್ಳಿಗಳಲ್ಲಿಯೂ ತಿಳಿಸುವ ಕೆಲಸವನ್ನು ನಿವೆಲ್ಲರೂ ಮಾಡಬೇಕು ಎಂದು ಕರೆ ಕಾರಜೋಳ ನೀಡಿದರು.
ಕಾಂಗ್ರೆಸ್ಸಿನಿಂದ ಇನ್ನೂ 100 ವರ್ಷ ಕಳೆದರೂ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ನಮಗೆ ಸಾಮಾಜಿಕ ನ್ಯಾಯ ದೊರೆಯುವುದು ನರೇಂದ್ರ ಮೋದಿ ಅವರಿಂದ ಮಾತ್ರ. ಹಾಗಾಗಿ ನೀವೆಲ್ಲ ಮೋದಿ ಅವರನ್ನೇ ಬೆಂಬಲಿಸಿ ಮತ್ತೋಮ್ಮೆ ಅವರನ್ನು ಪ್ರಧಾನಿ ಮಾಡಿ ಎಂದು ಅವರು ಹೇಳಿದರು.
ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಲಸ ಮಾಡುತ್ತದೆ. ನಮ್ಮಲ್ಲಿ ಮರೆವು ಜಾಸ್ತಿ ಹಾಗಾಗಿಯೇ ನಾವು ಇಷ್ಟು ಹಂದೆ ಉಳಿದಿದ್ದೇವೆ. ನಾವು ಸುಮ್ಮನೆ ಕೂಡಬಾರದು. ಕಾಂಗ್ರೆಸ್‌ನ ಮೋಸವನ್ನು ಜನರ ಮುಂದೆ ಹೇಳಬೇಕು. ಬಿಜೆಪಿ ಯಾವ ಜನಾಂಗಕ್ಕೂ ಅನ್ಯಾಯ ಮಾಡುವುದಿಲ್ಲ ಎನ್ನುವುದನ್ನು ನಾವು ಮನವರಿಕೆ ಮಾಡಿ ಕೊಡಬೇಕು ಎಂದು ಗೋವಿಂದ ಕಾರಜೋಳ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ದುರ್ಯೋದನ ಐಹೊಳೆ, ಮಾದಿಗ ದಂಡೊರ ಅಧ್ಯಕ್ಷ ಟಿ. ನರಸಪ್ಪ, ವಿಠ್ಠಲ ನಡುವಿನಕೇರಿ, ಶರಣು ಬ್ಯಾಳಿ, ಬಾಗಪ್ಪ ಗೂಗಿಹಾಳ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ಹಣಮಂತ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.