ವಿಜಯಪುರ: ರಾತ್ರಿಯಿಡಿ ಕರ್ತವ್ಯ ನಿರ್ವಹಿಸುವ ಜೊತೆಗೆ ನಸುಕಿನ ಜಾವ ನಡೆದ ವೃಕ್ಷೊಥಾನ್ ಹೆರಿಟೇಜ್ ರನ್-2023ರ 21 ಕಿ. ಮೀ. ಓಟದಲ್ಲಿ ಪಾಲ್ಗೋಂಡ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಪೇದೆಯೊಬ್ಬರು ಕ್ರೀಡಾಭಿಮಾನ ಮೆರೆದಿದ್ದಾರೆ.
ಹಳಗುಣಕಿ ಗ್ರಾಮದ ಮತ್ತು ವಿಜಯಪುರ ಮೀಸಲು ಪಡೆ ಪೊಲೀಸ್ ಪೇದೆಯಾಗಿರುವ ಭೀಮಾಶಂಕರ ಮಾಡಗ್ಯಾಳ(38) ಡಿಸೆಂಬರ್ 23ರಂದ ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ, ಮರುದಿನ ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ 21 ಕಿ. ಮೀ. ಮ್ಯಾರಾಥಾನ್ ಓಟದಲ್ಲಿ ಪಾಲ್ಗೋಂಡಿದ್ದಾರೆ. ಅಷ್ಟೇ ಅಲ್ಲ, ಈ ಓಟವನ್ನು 2 ಗಂಟೆ 30 ನಿಮಿಷ 39 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಅತ್ತಮ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಾಕ್ಷಿಯಾಗಿದ್ದಾರೆ ಮತ್ತು ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಸೇವೆಯ ಜೊತೆಗೆ ಓಡುವ ಹವ್ಯಾಸ ಹೊಂದಿರುವ ಭೀಮಾಶಂಕರ ಮಾಡಗ್ಯಾಳ ಅವರನ್ನು ಇಂದು ಮಂಗಳವಾರ ನಗರದಲ್ಲಿ ವೃಕ್ಷೊಥಾನ್ ಹೆರಿಟೇಜ್ ರನ್- 2023 ಕೋರ್ ಕಮಿಟಿ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ ಅವರು, ಭೀಮಾಶಂಕರ ಮಾಡಗ್ಯಾಳ ಅವರ ಕ್ರೀಡಾಪ್ರೀತಿ ಇತತರಿಗೆ ಸ್ಪೂರ್ತಿಯಾಗಿದೆ. ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿ ಬೆಳಿಗ್ಗೆ ಓಟದಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ ಮಾತಲ್ಲ. ಇವರ ಮುಂದಿನ ಕನಸುಗಳು ನನಸಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ವೃಕ್ಷೊಥಾನ್ ಹೆರಿಟೇಜ್ ರನ್-2023 ಕೋರ್ ಕಮಿಟಿ ಸದಸ್ಯರಾದ, ನಂದೀಶ ಹುಂಡೆಕಾರ, ಆಕಾಶ ಚೌಕಿಮಠ, ಸಚಿನ ಪಾಟೀಲ, ಶಂಭು ಕರ್ಪೂರಮಠ, ಅಮಿತ ಬಿರಾದಾರ, ಅಪ್ಪು ಭೈರಗೊಂಡ, ಮುರುಗೇಶ ಪಟ್ಟಣಶೆಟ್ಟಿ, ಸೋಮಶೇಖರ ಸ್ವಾಮಿ, ಮಹೇಶ ವಿ. ಶಟಗಾರ, ಡಾ. ರಾಜು ಯಲಗೊಂಡ, ನಾವೇದ ನಾಗಠಾಣ, ಸಂಕೇತ ಬಗಲಿ, ಜಗದೀಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಇಂಥ ಓಟಗಳಲ್ಲಿ ಪಾಲ್ಗೊಳ್ಳಬೇಕಾದರೆ ಓಟಗಾರರಿಗೆ ಹಿಂದಿನ ದಿನ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ಆದರೆ, ರಾತ್ರಿಯಿಡೀ ಡ್ಯೂಟಿ ಮಾಡಿ ನಸುಕಿನ ಜಾವ 21 ಕಿ. ಮೀ. ಓಟದಲ್ಲಿ ಪಾಲ್ಗೊಂಡಿರುವ ಭೀಮಾಶಂಕರ ಮಾಡಗ್ಯಾಳ ಪ್ರಬಲ ಇಚ್ಛಾಶಕ್ತಿ ಇತರರಿಗೂ ಸ್ಪೂರ್ತಿಯಾಗಿದೆ ಎನ್ನುತ್ತಾರೆ ಅವರ ಸ್ನೇಹಿತ ಸಚೀನ ಪಾಟೀಲ. ಆದರೆ, ಇದಾವುದನ್ನೂ ಲೆಕ್ಕಿಸದೇ ಭೀಮಾಶಂಕರ ಮಾಡಗ್ಯಾಳ 21 ಕಿ. ಮೀ. ಓಟ ಪೂರ್ಣಗೊಳಿಸಿರುವುದು, ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.