ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭೆ ಬಿ ಎಸ್ ವೈ ಅಂದರೆ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮತ್ತು ಬಿ. ಎಸ್. ಯಡಿಯೂರಪ್ಪ ಅವರ ಕುಟುಂಬದಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಣಿಸಿಕೊಂಡ ಕೊರೊನಾ ಚಿಕಿತ್ಸೆ ವಿಚಾರದಲ್ಲಿ ರೂ. 40 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ವೀರಶೈವ ಮಹಾಸಭೆ ಮಹಾಧಿವೇಶನ ವಿಚಾರ
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭೆ 24ನೇ ಮಹಾಧಿವೇಶನದಲ್ಲಿ ಹಿಂದೂ ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸದೆ, ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಮಹಾಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾ ಕೆಲ ಕುಟುಂಬಗಳ ಆಸ್ತಿಯಾಗಿದೆ. ಬಿ ಎಸ್ ವೈ ಅಂದರೆ ಬಿ ಎಂದರೆ ಭೀಮಣ್ಣಖಂಡ್ರೆ, ಎಸ್ ಎಂದರೆ ಶಾಮನೂರು ಶಿವಶಂಕರಪ್ಪ ಮತ್ತು ವೈ ಎಂದರೆ ಬಿ. ಎಸ್. ಯಡಿಯೂರಪ್ಪ ಪರಿವಾರ. ಅವರೆಲ್ಲ ಬೀಗರು ಎಂದು ಶಾಸಕರು ಟಾಂಗ್ ನೀಡಿದದರು.
ಇವರೆಲ್ಲ ತಮ್ಮ ಜಾತಿ ಕಾಲಂ ನಲ್ಲಿ ಏನು ಬರೆಸಿದ್ದಾರೆ ಎಂಬುದನ್ನು ಹೇಳಲಿ. ಅವರ ಜಾತಿ ಕಾಲಂದಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿಲ್ಲ. ಇವರೆಲ್ಲ ಫಲಾನುಭವಿಗಳು ಇದ್ದಾರೆ. ಪಂಚಮಸಾಲಿ ಸೇರಿದಂತೆ ಇತರ ಜನಾಂಗದವರಿಗೆ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳುತ್ತೀರಿ. ಈ ಕಾರಣದಿಂದ ನಮಗೆ ಹಿಂದುಳಿದ ಯಾವುದೇ ಸೌಲಭ್ಯಗಳು ಸಿಗಲ್ಲ. ಈ ವಿಚಾರದಲ್ಲಿ ಕೂಡಲಸಂಗಮ ಸ್ವಾಮೀಜಿ ಸೇರಿದಂತೆ ಇತರರು ಸೇರಿ ನಿರ್ಧಾರ ಮಾಡುತ್ತೇವೆ. ನಾವು ಜಾತಿ ಕಾಲಂನಲ್ಲಿ ಹಿಂದೂ ಪಂಚಮಸಾಲಿ ಬರಿಸಬೇಕೋ ಹಿಂದೂ ಲಿಂಗಾಯಿತ ಎಂದು ಬರೆಸಬೇಕೆಂಬುದನ್ನ ಶೀಘ್ರವಾಗಿ ಚರ್ಚೆ ಮಾಡುತ್ತೇವೆ. ಉಪಜಾತಿಗಳನ್ನ ಜಾತಿ ಕಾಲಂನಲ್ಲಿ ನಮೂದು ಮಾಡಿದರೆ ಮೀಸಲಾತಿಯಲ್ಲಿ ನಮಗೆ ಸೌಲಭ್ಯ ಸಿಗುತ್ತದೆ. ನಾವು ವೀರಶೈವ ಲಿಂಗಾಯತ ಎಂದು ಬರೆಸುವುದು ಲಾಭ ಪಡೆದುಕೊಳ್ಳುವರು ಅವರು ಎಂದರೆ ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಲಿಂಗಾಯತ ಸಮಾಜದಲ್ಲಿರುವ ಉಪಜಾತಿಯವರು ಯಾರು ವೀರಶೈವ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ಬರೆಸಿಲ್ಲ. ಹೀಗಾಗಿ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ. ವೀರಶೈವ ಲಿಂಗಾಯತ ಮಹಾಸಭಾ ಮಹಾದಿವೇಶನದ ನಿರ್ಣಯ ಕುರಿತು ನಾವು ಚರ್ಚೆ ಮಾಡುತ್ತೇವೆ. ನಾವು ಈ ದೇಶದಲ್ಲಿ ಇರುತ್ತೇವೆ ಎಂದರೆ ಮೊದಲು ನಾವು ಹಿಂದೂಗಳು. ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಿ ದೇಶದಲ್ಲಿ ಮತ್ತೊಂದು ಸಂಘರ್ಷಕ್ಕೆ ನಾವು ಅವಕಾಶ ಕೊಡಲ್ಲ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿದರೆ ನಮಗೆ ಸೌಲಭ್ಯ ಸಿಗುತ್ತದೆಯೋ ಇಲ್ಲವೋ? ಮಹಾ ಅಧಿವೇಶನದ ವೇದಿಕೆಯಲ್ಲಿ ಓಬಿಸಿ ಮೀಸಲಾತಿ ಬೇಡುತ್ತಾರೆ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬಿಸಿ ಮೀಸಲಾತಿ ಯಾಕೆ ನೀಡಲಿಲ್ಲ ಎಂದು ಯತ್ನಾಳ ಪ್ರಶ್ನೆ ಮಾಡಿದರು.
ವಿಜಯೇಂದ್ರ ನಮ್ಮ ಪೂಜ್ಯ ತಂದೆಯವರು ನಾಲ್ಕು ಸಲ ಸಿಎಂ ಆಗಿದ್ದರು ಎಂದು ಹೇಳಿದರು. ಪೂಜ್ಯ ತಂದೆಯವರಾದ ಮಗ ಪೂಜ್ಯನೇ, ತಾವು ಏಕೆ ವೀರಶೈವ ಲಿಂಗಾಯತರನ್ನು ಓಬಿಸಿಗೆ ಸೇರಿಸಲು ಕ್ಯಾಬಿನೆಟ್ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಲಿಲ್ಲ. ಈ ಕುರಿತು ರಾಜ್ಯದ ವೀರಶೈವ ಲಿಂಗಾಯತರಿಗೆ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು. ಸುಮ್ಮನೆ ಡೋಂಗಿ ಮಾಡಿ ನಾಟಕ ಮಾಡಿ ಲಿಂಗಾಯತ ಲೀಡರ್ ಆಗೋಕೆ ಸಮಾವೇಶ ಮಾಡುತ್ತಾರೆ. ವೀರಶೈವ ಲಿಂಗಾಯತರಿಗಾಗಿ ವೀರಶೈವ ಲಿಂಗಾಯತ ಮಹಾಸಭಾದವರು ರಾಜ್ಯದಲ್ಲಿ ಯಾವ ಹೋರಾಟ ಮಾಡಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದರು.
ಎಲ್ಲಾದರೂ ಧರಣಿ ಕುಳಿತಿದ್ದಾರಾ? ಸಿಎಂ ಆದವರನ್ನ ಕರೆಯುವುದು 4000 ಜನರನ್ನ ಸೇರಿಸುವುದು. ಒಂದು ಮನವಿಯನ್ನ ಕೊಡುವುದು ಬಿಟ್ಟರೆ ವೀರಶೈವ ಮಹಾಸಭಾ ಏನು ಲಾಭವಾಗಿದೆ. ಪಂಚಮಸಾಲಿ ಟುವೆ ಮೀಸಲಾತಿ ಹೋರಾಟಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಬೆಂಬಲಿಸಿಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟದಿಂದಲೇ ಎಲ್ಲಾ ಲಿಂಗಾಯತ ಸಮಾಜದವರಿಗೆ 2ಡಿ ಮೀಸಲಾತಿ ಸಿಕ್ಕಿದೆ. ಬೊಮ್ಮಾಯಿಯವರು ನಮ್ಮ ಒತ್ತಡದಿಂದ, ಪ್ರಧಾನಿ ಮಧ್ಯಸ್ಥಿಕೆಯಿಂದ, ಶೋಭಾ ಕರಂದ್ಲಾಜೆ ವಿಶೇಷ ಮುತುವರ್ಜಿ ಅಮೀತ್ ಶಾ ಅವರು ನಮ್ಮನ್ನು ಕರೆಸಿ ಮಾತನಾಡಿಸಿ ಎಲ್ಲ ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡೋದಾಗಿ ನಿರ್ಧಾರ ಆಗಿತ್ತು. ಹಾಗಾಗಿ ನಾವು ಎಲ್ಲರಿಗೂ ಮೀಸಲಾತಿ ನೀಡಿ ಎಂದು ಹೇಳಿದ್ದೇವು. ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ, ಹಾಲುಮತ ಸಮಾಜ ಎಸ್ಟಿ ಕೊಡಬೇಕಾಗುತ್ತದೆ ನಮಗೆ ಮನವರಿಕೆ ಮಾಡಿದರು. ಹೀಗಾಗಿ ನಾನು ಎಲ್ಲಾ ಲಿಂಗಾಯತರಿಗೆ ಕೊಡಿ ಎಂದು ಹೇಳಿದೆವು ಎಂದು ಯತ್ನಾಳ ತಿಳಿಸಿದರು.
ಸಮಸ್ತ ಲಿಂಗಾಯಿತರಿಗೆ 2 ಡಿ ಮೀಸಲಾತಿ ನೀಡಲಾಗಿದೆ. ಅದರ ಜೊತೆ ಮರಾಠರಿಗೆ ಜೈನರಿಗೆ ಕ್ರಿಶ್ಚಿಯನ್ ರಿಗೂ ಮೀಸಲಾತಿ ಕೊಟ್ಟಿದ್ದಾರೆ. ಪಂಚಮಸಾಲಿಯ ಮೀಸಲಾತಿ ಹೋರಾಟದಿಂದಲೇ ಇತರೆ ಎಲ್ಲಾ ಸಮಾಜದ ಜನರಿಗೂ ಮೀಸಲಾತಿ ಸಿಕ್ಕಿದೆ. ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಲಿಂಗಾಯಿತರಿಗೆ ಯಾವುದೇ ಅನುಕೂಲವಾಗಿಲ್ಲ. ವೀರಶೈವ ಲಿಂಗಾಯತ ಮಹಾಸಭಾ ಕಾಂಗ್ರೆಸ್ಸಿನ ಕಂಪನಿಯಾಗಿದೆ. ಅಲ್ಲಿರುವವರು ಖಂಡ್ರೆ ಮತ್ತು ಶಾಮನೂರು ಅವರ ಕುಟುಂಬಕ್ಕೆ ಸೇರಿದ್ದಾರೆ. ಈಗ ನಡುವೆ ಯಡಿಯೂರಪ್ಪ ಕುಟುಂಬ ಬಂದಿದೆ. ಯಡಿಯೂರಪ್ಪ ಸಿಎಂ ಆದ ಬಳಿಕ ಅವರ ಪುತ್ರಿಯನ್ನು ಮಹಿಳಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷೆಯನ್ನಾಗಿ ಮಾಡಿದರು. ಮೂವರು ಲಿಂಗಾಯತ ನಾಯಕರು ಎಂದು ತೋರಿಸಲು ಮಾಡಿದ್ದು. ಅವರೇನು ಲಿಂಗಾಯತರ ಉದ್ಧಾರಕ್ಕೆ ಮಾಡಿಲ್ಲ. ಲಿಂಗಾಯತ ಎಂಬ ಶಬ್ದವು ಅಲ್ಲಿಲ್ಲ. ಅಖಿಲ ಭಾರತ ವೀರಶೈವ ಮಹಾಸಭೆ ಎಂದಿದೆ ಆದರೆ ಲಿಂಗಾಯತ ಇಲ್ಲ. ಬೈಲಾದಲ್ಲಿಯೂ ಲಿಂಗಾಯತ ಎಂಬ ಪದ ಇಲ್ಲ. ಲಿಂಗಾಯತರ ಅನಿವಾರ್ಯತೆ ಇದೆ ಎಂದು ಲಿಂಗಾಯತರು ಎನ್ನುತ್ತಿದ್ದಾರೆ. ಎಲ್ಲಿವರೆಗೆ ಮೀಸಲಾತಿ ಉಪಜಾತಿ ಆಧಾರದಲ್ಲಿ ಸಿಗುತ್ತದೆಯೋ ಅದನ್ನೇ ನಾವು ಕೇಳುತ್ತೇವೆ. ಹಿಂದೂ ಉಪಜಾತಿಗಳ ಹೆಸರುಬರೆಸಿದರೆ ಮೀಸಲಾತಿ ಸಿಗುತ್ತದೆ ಎಂದರೆ ಅದನ್ನೇ ಬರಿಸಲು ಕರೆ ಕೊಡುತ್ತೇವೆ. ಎಲ್ಲಾ ಉಪ ಜಾತಿಗಳು ಹಿಂದೂ ಎಂದು ಹಚ್ಚಿ ತಮ್ಮ ಉಪ ಜಾತಿ ಬರೆಯುತ್ತಿದ್ದಾರೆ. ಹೀಗಾಗಿ ಜನಗಣತಿಯಲ್ಲಿ ಸಹಜವಾಗಿಯೇ ಲಿಂಗಾಯತರು ಆರನೇ ಸ್ಥಾನಕ್ಕೆ ಹೋಗಿದ್ದಾರೆ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಮೊದಲು ಕರ್ನಾಟಕದಲ್ಲಿ ಬೊಮ್ಮಾಯಿಯವರು ಮಾಡಿರೋ 2 ಡಿ ಮೀಸಲಾತಿ ಲಿಂಗಾಯತರಿಗೆ ಕೊಡಿ. ನಂತರ ನಾವು ದೇವೇಗೌಡರು ಒಕ್ಕಲಿಗರನ್ನ ಒಬಿಸಿಯ ಪಟ್ಟಿಗೆ ಸೇರಿಸಿದಂತೆ ಲಿಂಗಾಯತರನ್ನು ಓಬಿಸಿಗೆ ಸೇರಿಸುತ್ತೇವೆ. ಅದನ್ನು ಬಿಟ್ಟು ನಾಟಕ ಮಾಡಬೇಡಿ. ನಿಮಗೆ ಹತ್ತು ಸಾವಿರ ಜನರನ್ನು ಸೇರಿಸಲು ಆಗಿಲ್ಲ. ಹತ್ತು ಲಕ್ಷ ಜನ ಸೇರಿಸೋದಾಗಿ ಹೇಳುತ್ತೀರಿ ಎಂದು ಅವರು ಹೇಳಿದರು.
ಬಿ. ಸಿ. ಪಾಟೀಲ ವಿರುದ್ಧ ವಾಗ್ದಾಳಿ
ಬಸನಗೌಡ ಪಾಟೀಲ ಯತ್ನಾಳ ಮತ್ತು ಬಿ. ಕೆ. ಹರಿಪ್ರಸಾದ ಸೇರಿ ಒಂದು ಹೊಸ ಪಕ್ಷ ಕಟ್ಟಲಿ ಎಂಬ ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿ. ಸಿ. ಪಾಟೀಲ ಕೃಷಿ ಮಂತ್ರಿಯಾಗಿ ಹೇಗಿದ್ದರು? ಎಂದು ಆ ಇಲಾಖೆ ಅಧಿಕಾರಿಗಳನ್ನು ಕೇಳಿ. ಆಧಾರ ಕಾರ್ಡ್ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿ ಬಿ. ಸಿ. ಪಾಟೀಲ ಎಷ್ಟು ಪ್ರಾಮಾಣಿಕರಿದ್ದರು ಎಂದು ಹೇಳುತ್ತಾರೆ. ಬಿ. ಸಿ. ಪಾಟೀಲರಂಥ ಕೃಷಿ ಮಂತ್ರಿಗಳು ಕರ್ನಾಟಕದಲ್ಲಿ ಎಂದೂ ಬಂದಿರಲಿಲ್ಲ ಎಂದು ಹೇಳುತ್ತಾರೆ. ಕೃಷಿ ಹೊಂಡಕ್ಕೆ ಹಾಕಲು ಕಳಪೆ ಮಟ್ಟದ ತಾಡಪಾಲುಗಳನ್ನು ರೈತರಿಗೆ ಕೊಟ್ಟಿದ್ದರು. ಕೃಷಿ ಇಲಾಖೆಯಲ್ಲಿ ನಕಲಿ ಔಷಧಿಗಳನ್ನು ಇಟ್ಟಿದ್ದರು. ಔಷಧಿಗಳಿಂದ ಕೀಟಗಳು ಸಾಯುತ್ತಿರಲಿಲ್ಲ ಬದಲಾಗಿ ದಪ್ಪವಾಗುತ್ತಿದ್ದವು ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ಇವರೇನು ನನಗೆ ನೈತಿಕತೆ ಪಾಠ ಹೇಳುತ್ತಾರೆ. ರೈತರ ಔಷಧಿಗಳ ಖರೀಧಿ ಕೇಂದ್ರಗಳನ್ನ ಸೆಂಟ್ರಲೈಸ್ ಮಾಡಿದರು. ಅವನ್ನೆಲ್ಲಾ ತೆಗೆದರೆ ಬಹಳ ಇವೆ. ಯಡಿಯೂರಪ್ಪ ಹೇಳಿರುತ್ತಾನೆ ಅದಕ್ಕಾಗಿ ಬಿ. ಸಿ. ಪಾಟೀಲ ಮಾತನಾಡುತ್ತಾರೆ. ಬಿಎಸ್ ವೈ ಹಾಗೂ ಬಿ. ಸಿ. ಪಾಟೀಲ ಅಕ್ಕಪಕ್ಕದ ಕ್ಷೇತ್ರದವರು. ಬಿಜೆಪಿಯಲ್ಲಿ ಪ್ರಾಮಾಣಿಕರಾಗಿದ್ದ ಬಣಕಾರ ಕುಟುಂಬದವರನ್ನು ಹಿರೆಕೆರೂರ ಕ್ಷೇತ್ರದಲ್ಲಿ ಯಡಿಯೂರಪ್ಪ ಬಲಿಕೊಟ್ಟರು ಎಂದು ಅವರು ಆರೋಪಿಸಿದರು.
ಬಿಜೆಪಿಯಲ್ಲಿ ಸ್ಥಾನಮಾನ ವಿಚಾರ
ನಿಮಗೆ ಪಕ್ಷದಲ್ಲಿ ಯಾಕೆ ಯಾವ ಸ್ಥಾನವನ್ನು ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಪಕ್ಷದಲ್ಲಿ ನಾನ್ಯಾವತ್ತೂ ಸ್ಥಾನಮಾನಗಳನ್ನ ಕೇಳಿಲ್ಲ ಎಂದು ಪುನರುಚ್ಚಾರಿಸಿದರು. ನಾವು ಅವರಿಗೆ ಎಲ್ಲಿ ಅಪ್ಪಾಜಿ ಎನ್ನಲಿ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಮಾತ್ರ ನಾನು ಅಪ್ಪಾಜಿ ಎಂದಿದ್ದೇನೆ. ಯಡಿಯೂರಪ್ಪ ಗೆ ಅಪ್ಪಾಜಿ ಎನ್ನುವುದು ಕಾಲಿಗೆ ಬೀಳುವುದು ಮಾಡಿಲ್ಲ. ಯಡಿಯೂರಪ್ಪಗೆ ರಾತ್ರಿಯ ವ್ಯವಸ್ಥೆ ಮಾಡಿಲ್ಲ ಹಾಗಾಗಿ ನಾನು ಆಗಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಯತ್ನಾಳ ಬೆಂಬಲಕ್ಕೆ ಯಾರು ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಇಲ್ಲಿ ಜಗತ್ತಿನಲ್ಲಿ ಯಾರೂ ಯಾರ ಜೊತೆಗೂ ಇಲ್ಲ. ಮಹಾಮಾರಿ ಕೊರೋನಾದಲ್ಲಿ ಯಾರ ಜೊತೆ ಯಾರಿದ್ದರು ಎಂದು ಪ್ರಶ್ನೆ ಮಾಡಿದ ಅವರು, ಕೊರೊನಾ ಬಂದಾಗ ಅಪ್ಪ ಮಕ್ಕಳಿಗೆ ಯಾರು ನೋಡಿದ್ದಾರೆ ಯಾರನ್ನಾದರೂ ಮುಟ್ಟಿದ್ದಾರಾ? ನನಗೆ ಯಾರೂ ಬೇಕಾಗಿಲ್ಲ ಎಂದು ಖಡಕ್ಕಾಗಿ ಹೇಳಿದರು. ನನ್ನ ಹಿಂದೆ ಇದ್ದಾರೆ. ಚಾಮರಾಜನಗರ ಕೋಲಾರದಿಂದ ಹಿಡಿದು ಬಸವಕಲ್ಯಾಣದವರಿಗೂ ಕೇಳಿ. ನೀವು ಹೀಗೆ ಇರಬೇಕು ಎಂದು ನನಗೆ ಜನರು ಹೇಳುತ್ತಾರೆ. ನಾನು ಏನು ಆಗುವುದು ಬೇಡ ರಾಜ್ಯಕ್ಕೆ ಖಡಕ್ ಮಾತನಾಡುವವರು ಒಬ್ಬರು ಬೇಕಾಗಿದ್ದಾರೆ. ನಾನು ಇದ್ದೇನೆ. ಏನೂ ಇಲ್ಲದಿದ್ದರೂ ವಿಜಯಪುರ ಅಭಿವೃದ್ಧಿ ಮಾಡಿದ್ದೇನೆ. ಒಳ್ಳೆಯ ಗಾಳಿ ಸಿಗುವ ಪ್ರದೇಶಗಳ ಪೈಕಿ ವಿಜಯಪುರ ಆರನೇ ಸ್ಥಾನ ಪಡೆದಿದೆ. ಇದನ್ನೆಲ್ಲ ನಾನು ಮಾಡಿದ್ದೇನೆ. ನನ್ನ ಕೈಯಲ್ಲಿ ರಾಜ್ಯವನ್ನು ಕೊಟ್ಟರೆ ಮಾದರಿ ಕರ್ನಾಟಕವನ್ನಾಗಿ ಮಾಡುತ್ತೇನೆ. ಹಣ ತಿನ್ನುವ ಚಟ ನನಗಿಲ್ಲ ಬಹಳ ಇಲ್ಲ. ಲೂಟಿ ಮಾಡಬೇಕೆಂಬುದಿಲ್ಲ. ನಾನು ರೈತರ ಮಕ್ಕಳೆಂದು ಇವರೆಲ್ಲ ಭಾಷಣ ಹೊಡೆಯುತ್ತಾರೆ. ಮೊದಲ ಕೃಷಿ ಬಜೆಟ್ ಎನ್ನುತ್ತಾರೆ. ಹಾಗಾದರೆ ದುಬೈನಲ್ಲಿ ಆಸ್ತಿ ಮಾಡಿದ್ದು ಯಾಕೆ? ನೀವು ರೈತನ ಮಕ್ಕಳಾಗಿ. ಅಮೆರಿಕದಲ್ಲಿ ಯಾಕೆ ಮನೆಯನ್ನು ಯಾಕೆ ತೆಗೆದುಕೊಂಡಿದ್ದೀರಿ? ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಯತ್ನಾಳ ಗಂಭೀರ ಆರೋಪ ಮಾಡಿದರು. ನಾನು ಕಲಬುರಗಿಯ ಚಿಂಚೋಳಿಯಲ್ಲಿ ಎಥಿನಾಲ್ ಕಾರ್ಖಾನೆಯನ್ನುರೂ. 750 ಕೋ. ವೆಚ್ಚದಲ್ಲಿ ಮಾಡಿದ್ದೇನೆ ಅವರು ಇದೇ ವೇಳೆ ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ರೂ. 40 ಸಾವಿರ ಕೋ. ಭ್ರಷ್ಟಾಚಾರ ಆರೋಪ
ಯಾರಾರು ಲೂಟಿ ಮಾಡಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುತ್ತೇನೆ. ಇದೇ ಮುಂಬರುವ ಜನೆವರಿ 5 ರಂದು ಡಿಕೆಶಿ ವಿರುದ್ಧದ ವಿಚಾರಣೆ ಹೈಕೋರ್ಟ್ ನಲ್ಲಿದೆ. ನಂತರ ಇವರದ್ದೇ ಅಪ್ಪಾಜಿಯವರದ್ದೇ ಇದೆ. ಯಡಿಯೂರಪ್ಪ ಸಿಎಂ ಇದ್ದಾಗ ಕೊರೊನಾದಲ್ಲಿ ಸಂದರ್ಭದಲ್ಲಿ ರೂ. 45 ಬೆಲೆಯ ಮಾಸ್ಕ್ ಗೆ ಸರಕಾರದಲ್ಲಿ ಎಷ್ಟು ಖರ್ಚು ಹಾಕಿದ್ದೀರಿ ಎಂಬುದು ಗೊತ್ತಿದೆ. ಒಂದು ಮಾಸ್ಕ್ ಗೆ ರೂ. 485 ಎಂದು ಬಿಲ್ ಹಾಕಿದ್ದೀರಿ. ಬೆಂಗಳೂರಲ್ಲಿ ಹತ್ತು ಸಾವಿರ ಬೆಡ್ ಮಾಡಿದ್ದಾಗಿ ಹೇಳಿದ್ದೀರಿ. 10 ಸಾವಿರ ಬೆಡ್ ಗಳನ್ನ ಬಾಡಿಗೆ ಪಡೆದಿದ್ದರು. ಆದರೆ, ಬಾಡಿಗೆ ಹಣದಲ್ಲಿಯೇ ಬೆಡ್ ಗಳನ್ನು ಖರೀದಿ ಮಾಡಿದ್ದರೆ ಎರಡೆರಡು ಬೆಡ್ ಗಳು ಬರುತ್ತಿದ್ದವು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಕೊರೊನಾದ ವೇಳೆ ರೂ. 40 ಸಾವಿರ ಕೋಟಿ ಅವ್ಯವಾರ ಮಾಡಿದ್ದಾರೆ. ಒಂದೊಂದು ಕೊರೋನಾ ರೋಗಿಗಳಿಗೆ ರೂ. 8 ರಿಂದ ರೂ. 10 ಲಕ್ಷ ಬಿಲ್ ಮಾಡಿದ್ದಾರೆ. ನಮ್ಮ ಸರಕಾರವಿದ್ದರೇನು? ಕಳ್ಳರು ಕಳ್ಳರೇ ಅಲ್ಲವಾ? ಈ ವಿಚಾರವನ್ನು ಯಡಿಯೂರಪ್ಪ ಕುರಿತು ವಿಧಾನಸೌಧದಲ್ಲಿ ಹೇಳಿದ್ದೇನೆ. ನನಗೆ ಕೊರೊನಾ ಪಾಸಿಟಿವ್ ಆದಾಗ ಮಣಿಪಾಲ್ ಆಸ್ಪತ್ರೆಯಲ್ಲಿ ರೂ. 5.80 ಲಕ್ಷ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕೆಂದು ವಿಧಾನಸೌಧದಲ್ಲಿ ಮಾತನಾಡಿದ್ದೇನೆ. ಆರೋಗ್ಯ ವಿಚಾರದಲ್ಲಿ ನಾನು ಈವರೆಗೆ ಸರಕಾರದಿಂದ ಯಾವುದೇ ರೀತಿಯಲ್ಲಿ ಹಣ ಪಡೆದಿಲ್ಲ. ಒಬ್ಬ ಶಾಸಕರಿಗೆ ರೂ. 2 ಲಕ್ಷ ಸಂಬಳವಿದೆ. ನಾನು ಕಮಿಟಿ ಮೀಟಿಂಗಿಗೆ ಹೋಗಿ ಬಂದರೆ ರೂ. 65 ಸಾವಿರ ಸಿಗುತ್ತದೆ. ತೆಗೆದುಕೊಂಡರೆ ನಾವು ಮನುಷ್ಯರಾ ಎಂದು ಹೇಳಿದ ಯತ್ನಾಳ, ಇವರು ನನಗೆ ನೊಟೀಸ್ ಕೊಡಲಿ. ಪಕ್ಷದಿಂದ ಹೊರ ಹಾಕಲು ನೋಡಲಿ. ಇವರೆಲ್ಲರ ಬಣ್ಣ ತೆಗೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಸತ್ಯ ಹೇಳಿದರೆ ಎಲ್ಲರಿಗೂ ಭಯ. ಹೀಗಾಗಿ ಭಯದಲ್ಲಿ ಇಡಬೇಕು. ಎಲ್ಲರೂ ಕಳ್ಳರಾದರೆ ರಾಜ್ಯ ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ಈ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ. ಕಲ್ಲಿದ್ದಲು ಹಗರಣ 2ಜಿ ಹಗರಣ ಆಗಿವೆ. ಮೋದಿ ಅವರ ಕಾಲದಲ್ಲಿ ಒಂದಾದರೂ ಹಗರಣ ನೋಡಿದ್ದೀರಾ? ಮೋದಿ ಅವರ ಬಗ್ಗೆ ಕೇವಲ ಟೀಕೆ ಮಾಡುತ್ತಾರೆ. ಆದರೆ ಮೋದಿಯವರು ಭ್ರಷ್ಟಾಚಾರದಲ್ಲಿ ಇದ್ದಾರೆ ಎಂಬ ಹೇಳುವ ತಾಕತ್ತು ದೇಶದಲ್ಲಿ ಯಾರಿಗಾದರೂ ಇದೆಯಾ? ಮೋದಿಯವರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಇಂಥ ಯಡಿಯೂರಪ್ಪಗಾಗಿ ನಾವು ಕೆಲಸ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧವೂ ವಾಗ್ದಾಳಿ
ಯತ್ನಾಳರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಂಥವರ ಬಗ್ಗೆ ಪ್ರಶ್ನೆ ಕೇಳುತ್ತೀರಿ? ಅವರೆಲ್ಲ ರಾಜ್ಯ ಉಪಾಧ್ಯಕ್ಷ ಹೇಗೆ ಆಗುತ್ತಾರೆ? ಅಲ್ಲಿ ಐತಿ(ಮಾಲ್) ಬಂಡವಾಳ ಮತ್ತು ಇತರೆ ಎಂದು ಪರೋಕ್ಷವಾಗಿ ಕುಟುಕಿದರು. ಇನ್ನು ಬಹಳ ವಿಷಯಗಳಿವೆ ನನ್ನ ಉಚ್ಚಾಟನೆ ಮಾಡಿದ ಬಳಿಕ ಹೇಳುತ್ತೇನೆ ಎಂದು ಅವರು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದಗೆ ವಿಧಾನ ಸಭೆ ಪ್ರತಿಪಕ್ದ ಉಪಾಧ್ಯಕ್ಷ ಸ್ಥಾನ ವಿಚಾರ
ಶಾಸಕ ಅರವಿಂದ ಬೆಲ್ಲದ ಅವರಿಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಸ್ಥಾನ ನೀಡಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಮೂಲಕ ಪಂಚಮಸಾಲಿ ಮೀಸಲಾತಿ ಹೋರಾಟ ಒಡೆಯೋ ಹುನ್ನಾರ ನಡೆಯುತ್ತಿದೆ. ಆದರೆ, ಅರವಿಂದ ಬೆಲ್ಲದ ಮೇಲೆ ನಮ್ಮ ಸಮಾಜ ನಿಂತಿಲ್ಲ. ಅರವಿಂದ ಬೆಲ್ಲದ ಅವರದ್ದು ಸಿಎಂ ನಿಂದ ಹಿಡಿದು ಉಪನಾಯಕನವರೆಗೂ ಹೋಗಿದೆ. ಬೆಲ್ಲದ ಅವರಿಗೆ ಉಪನಾಯಕ ಅಲ್ಲ ವಿಪ್ ಕೊಟ್ಟಿದ್ದರೂ ತೆಗೆದುಕೊಳ್ಳುತ್ತಿದ್ದರು. ಸಿಎಂ ಆಗುವಂಥವರಿಗೆ ಯಾವುದೇ ಕೊಟ್ಟರೂ ತೆಗೆದುಕೊಳ್ಳುತ್ತೀರೆಂದರೆ ಮುಗೀತಲ್ಲ. ಇದರಿಂದ ಪಂಚಮಸಾಲಿ ಮೀಸಲಾತಿ ಹೋರಾಟ ಒಡೆಯಲ್ಲ. ಇವರ ಯಾರ ಮೇಲೂ ಜನರ ವಿಶ್ವಾಸವಿಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟ ಯತ್ನಾಳ ಮೇಲೆ ಕಾಶಪ್ಪನವರ ಮೇಲೆ ಕುಲಕರ್ಣಿ ಮೇಲೆ ಬೆಲ್ಲದ ಮೇಲೆ ನಿಂತಿಲ್ಲ. ಇಡೀ ಪಂಚಮಸಾಲಿ ಸಮಾಜ ಜಾಗೃತವಾಗಿದೆ ಎಂದು ಹೇಳಿದರು.
ನಾವೇನೇ ಮೋಸ ಮಾಡಿದರೂ ಜನರಿಗೆ ಗೊತ್ತಾಗುತ್ತದೆ. ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಮರಾಠಿಗರು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಯಾವುದೇ ಲೀಡರ್ ಗಳು ಇಲ್ಲ. ಅವರ ಹೋರಾಟದ ವೇದಿಕೆಯಲ್ಲಿ ಯಾವುದೇ ಶಾಸಕ ಸಚಿವ ಸಿಎಂ ರನ್ನ ಕರೆಯಲ್ಲ. ಅದೇ ರೀತಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಯಾವುದೇ ಲೀಡರ್ ಗಳನ್ನು ಕರೆಯಬಾರದು ಎಂದು ಕರೆ ಕೊಟ್ಟಿದ್ದೇನೆ. ವೇದಿಕೆಯಲ್ಲಿ ಜನರನ್ನೇ ಕೂಡಿಸಿ. ಯಾವುದೇ ಶಾಸಕ ಸಚಿವರನ್ನ ಕೂಡಿಸಬಾರದು ಎಂದು ಹೇಳಿದ್ದೇನೆ. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಹೇಗೆ ಮನೆ ಹೊಕ್ಕು ಹೊಡೆದಿದ್ದಾರೆ, ಅದೇ ರೀತಿ ಇಲ್ಲಿಯೂ ಆಗುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ಎಚ್ಚರಿಕೆ ನೀಡಿದರು.