ವಿಜಯಪುರ: ಇಂಡಿ ನೂತನ ಜಿಲ್ಲೆಯಾಗಲು ಕಾಲ ಇನ್ನೂ ಪಕ್ವವಾಗಿಲ್ಲ. ಹೀಗಾಗಿ ಡಿಸೆಂಬರ್ 29 ರಂದು ಈ ಕುರಿತು ಕರೆಯಲಾದ ಸಭೆಯನ್ನು ರದ್ದು ಪಡಿಸಬೇಕು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ನೂತನ ಜಿಲ್ಲೆ ಮಾಡುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಸಿಂದಗಿ ತಹಸೀಲ್ದಾರರು ಡಿಸೆಂಬರ್ 29 ರಂದು ಸಭೆ ಕರೆದಿದ್ದಾರೆ. ಇದು ಸರಿಯಲ್ಲ. ಸರಕಾರ ವಿಜಯಪುರ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾಪ ಹೊಂದಿದೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮೂರು ಬಾರಿ ಇಂಡಿ ಶಾಸಕರಾದರೂ ಸಚಿವ ಸ್ಥಾನ ಮತ್ತು ಅಧಿಕಾರ ಸಿಗಲಿಲ್ಲ. ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುದಾನ ಸಿಗುತ್ತಿಲ್ಲ. ಅಭಿವೃದ್ಧಿಗೂ ಹಣ ಬಿಡುಗಡೆಯಾಗುತ್ತಿಲ್ಲ ಎಂಬ ರಾಜಕೀಯ ಹತಾಶೆಯಿಂದ ಇಂಥ ಗೊಂದಲ ಸೃಷ್ಟಿಸಿ ನೂತನ ಜಿಲ್ಲೆ ರಚನೆಯ ಭಾವನಾತ್ಮಕ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ವಿರುದ್ಧ ಕಿಡಿ ಕಾರಿದರು.
ಇಂಡಿ ಹೊಸ ಜಿಲ್ಲೆಯಾಗಲು ನನ್ನ ವಿರೋಧವಿಲ್ಲ. ಆದರೆ, ಈಗ ಕಾಲ ಪಕ್ವವಾಗಿಲ್ಲ. ಸರಕಾರ ಮೊದಲು ವಿಜಯಪುರ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾಪ ಹೊಂದಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಹೌದು ಎಂದಾದರೆ 13 ತಾಲೂಕಗಳಿರುವ ವಿಜಯಪುರ ಜಿಲ್ಲೆಯನ್ನು ಎಷ್ಟು ಭಾಗವಾಗಿ ವಿಭಜಿಸುತ್ತೀರಿ? ಮುದ್ಧೇಬಿಹಾಳ, ಬಸವನ ಬಾಗೇವಾಡಿ ತಾಲೂಕುಗಳ ಜನರ ಅಭಿಪ್ರಾಯವೇನು? ಇದಕ್ಕಿರುವ ಮಾನದಂಡಗಳು ಯಾವವು? ಎಂಬುದನ್ನು ಜಿಲ್ಲೆಯ ಜನತೆಯ ಮುಂದಿಡಬೇಕು ಎಂದು ಅವರು ಒತ್ತಾಯಿಸಿದರು.
ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ರೂ. 100 ಅನುದಾನ ಕೂಡ ಸಿಗುತ್ತಿಲ್ಲ. ಇದರಿಂದ ರಾಜಕೀಯವಾಗಿ ಹತಾಶರಾದ ಕಾಂಗ್ರೆಸ್ ಶಾಸಕರು ಜನರ ಗಮನ ಬೇರೆಡೆ ಸೆಳೆಯಲು ವಿಜಯಪುರ ಜಿಲ್ಲೆಯ ವಿಭಜನೆ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯನ್ನು ವಿಭಜಿಸದೇ ಕ್ಷೇತ್ರ ಮತ್ತು ಜಿಲ್ಲೆಯನ್ನು ಅಭಿವೃದ್ಧಿ ಮಾಡಬಹುದು ಎಂದು ಅರುಣ ಶಹಾಪುರ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಮುಖಂಡ ರಾಕೇಶ ಉಪಸ್ಥಿತರಿದ್ದರು.