ವಿಜಯಪುರ: ಬಿಜೆಪಿ ಸರಕಾರದ ಅವಧಿಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ರೂ. 40 ಸಾವಿರ ಕೋ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಿಚಾರಣೆ ನಡೆಸಿ ಮತ್ತಷ್ಟು ಸತ್ಯಾಂಶ ಹೊರಬರಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರ ಹೇಳಿಕೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಯತ್ನಾಳ ಅವರನ್ನು ವಿಚಾರಣೆ ನಡೆಸಿದರೆ ಮತ್ತಷ್ಟು ಸತ್ಯಾಂಶ ಹೊರಬರಲಿದೆ. ಹೀಗಾಗಿ ಸರಕಾರ ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ತಮ್ಮನ್ನು ಪಕ್ಷದಿಂದ ನೋಟಿಸ್ ಕೊಡುವುದಾಗಲಿ, ಹೊರ ಹಾಕುವುದಾಗಲಿ ಮಾಡಿದರೆ ಬಣ್ಣ ಬಯಲು ಮಾಡುವೆ ಎಂದು ಯತ್ನಾಳ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಧಮ್ ಇದ್ದರೆ ಬಿಜೆಪಿಯವರು ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾವೂ ಇದರಲ್ಲಿ ಪಾಲುದಾರರು ಎಂದು ತಿಳಿಯಬೇಕಾಗುತ್ತದೆ. ಶಾಸಕ ಯತ್ನಾಳ ಬಿಜೆಪಿ ಸರಕಾರದಲ್ಲಿ ಭಾಗವಾಗಿದ್ದರು. ಆಗ ಏಕೆ ಇವರು ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಲಿಲ್ಲ? ಅದರಲ್ಲಿ ನಿಮ್ಮ ಪಾಲಿತ್ತಾ ಅಥವಾ ಭ್ರಷ್ಟಾಚಾರದ ಹಣ ಹಂಚಿಕೆಯಲ್ಲಿ ನಿಮ್ಮನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡುತ್ತಿದ್ದೀರಾ? ಈ ಭ್ರಷ್ಟಾಚಾರದಲ್ಲಿ ಕೇಂದ್ರ ಸರಕಾರದ ಪಾಲು ಎಷ್ಟಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಯತ್ನಾಳರ ಬಗ್ಗೆ ಜನರಲ್ಲಿ ಗೌರವವಿದೆ. ಆ ಗೌರವ ಇನ್ನೂ ಹೆಚ್ಚಾಗಬೇಕು. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಮೊದಲು ಇವರ ಆಸ್ತಿ ಎಷ್ಟಿತ್ತು? ಈಗ ಎಷ್ಟು ಆಸ್ತಿ ಇದೆ? ಎಂಬುದನ್ನು ಘೋಷಿಸಬೇಕು. ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ರೂ. 2000 ಕೋ. ಎಲ್ಲಿಂದ ಬಂತು? ಇದರಲ್ಲಿ ಸಿದ್ಧಸಿರಿ ಸಹಕಾರಿ ಸೌಹಾರ್ಧದ ಹಣ ಎಷ್ಟಿದೆ? ಎಂಬುದನ್ನು ಬಹಿರಂಗಪಡಿಸಿ ತಾವು ಕಳಂಕ ರಹಿತರು ಎಂಬುದನ್ನು ಸಾಬೀತು ಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರೈತರು ಬರಗಾಲವನ್ನೇ ಬಯಸುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ ಅವರ ವಿರುದ್ದ ಹರಿಹಾಯ್ದಿರುವ ಶಾಸಕ ಯತ್ನಾಳ ಅವರು ದೇಶದ ರಾಜಧಾನಿಯಲ್ಲಿಯೇ ಎರಡು ವರ್ಷ ರೈತರು ಹೋರಾಟ ಮಾಡಿದಾಗ, ಅವರಲ್ಲಿ ಕೆಲವು ರೈತರು ಸಾವಿಗೀಡಾದಾಗ ಏಕೆ ಕಾಳಜಿ ತೋರಲಿಲ್ಲ. ರೈತ ವಿರೋಧಿ ನೀತಿ ಜಾರಿ ಮಾಡಿದಾಗ ಯಾಕೆ ಕಾಳಜಿ ತೋರಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಸ್ತ್ರೀ ವಿರೋಧಿ ಧೋರಣೆ ಸರಿಯಲ್ಲ. ಹಿಂದೂ ಧರ್ಮ ಎಂದಿಗೂ ಸ್ತ್ರೀಯರನ್ನು ದ್ವೇಷಿಸಿ ಎಂದು ಹೇಳಿಲ್ಲ. ಹೀಗಾಗಿ ಹಿಂದೂಪರ ಸಂಘಟನೆಗಳು ಸಹ ಅವರ ಹೇಳಿಕೆಯನ್ನು ಖಂಡಿಸಬೇಕು. ಕೇವಲ ಕೋಮು ಧ್ವೇಷ ಹರಡುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ನಡೆಯುತ್ತಲೇ ಇರುತ್ತದೆ ಎಂದು ಎಸ್. ಎಂ. ಪಾಟೀಲ ಗಣಿಹಾರ ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಫಯಾಜ ಕಲಾದಗಿ, ನಾಗರಾಜ ಲಂಬು ಮುಂತಾದವರು ಉಪಸ್ಥಿತರಿದ್ದರು.