ವಿಜಯಪುರ: ಬಹುನಿರೀಕ್ಷಿತ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಕಾರ್ಪೋರೇಟರ್ ಗಳಾಗಿ ಆಯ್ಕೆಯಾಗಿ ಒಂದು ವರ್ಷ ಎರಡು ತಿಂಗಳ ನಂತರ ಮೇಯರ್ ಮತ್ತು ಉಪಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ.
ಈ ಹಿಂದೆ ಮೂರ್ನಾಲ್ಕು ಬಾರಿ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಆದರೆ, ನಾನಾ ಕಾರ್ಪೋರೇಟರ್ ಗಳು ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ನಿಗದಿಯಾಗಿರುವ ಮೀಸಲಾತಿ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಚುನಾವಣೆ ತಕರಾರು ಅರ್ಜಿಯನ್ನು ವಿಲೇವಾರಿ ಮಾಡಿ ಚುನಾವಣೆ ನಡೆಸಲು ಸೂಚನೆ ನೀಡಿತ್ತು.
ಅದರಂತೆ ಈಗ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಚುನಾವಣೆ ನಡೆಸಲು ದಿನಾಂಕ ಮತ್ತು ಸಮಯ ನಿಗದಿ ಮಾಡಿದ್ದಾರೆ. ಮೇಯರ್ ಸ್ಥಾನ ಸಾಮಾನ್ಯ ಮತ್ತು ಉಪಮೇಯರ್ ಸ್ಥಾನ ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದೆ.
ಮುಂದಿನ ವರ್ಷ ಅಂದರೆ 2024ರ ಜನೇವರಿ 9 ರಂದು ಮಂಗಳವಾರ ಚುನಾವಣೆ ನಡೆಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಆಧಿಸೂಚನೆ ಹೊರಡಿಸಿದ್ದಾರೆ. ಈಗ ಚುನಾವಣೆ ನಡೆದು ಒಂದು ವರ್ಷ 2 ತಿಂಗಳ ಬಳಿಕ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಯಾವ ಪಕ್ಷ ಯಾವ ರೀತಿಯಲ್ಲಿ ಅಧಿಕಾರಕ್ಕೆೇರಲಿದೆ ಎಂಬುದು ಕುತೂಹಲ ಕೆರಳಿಸಿದೆ.