ವಿಜಯಪುರ ಜಿಲ್ಲಾಡಳಿತದಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ

ವಿಜಯಪುರ: ಜ್ಞಾನಪೀಠ ಪುರಸ್ಕೃತ ಕನ್ನಡದ ಮೊದಲ ಸಾಹಿತಿ, ಕನ್ನಡ ನಾಡು-ನುಡಿಗೆ ತಮ್ಮ ಜೀವನವ ಮುಡಿಪಾಗಿಟ್ಟು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರ ಕವಿ, ವಿಶ್ವ ಮಾನವರಾಗಿ ರಾಷ್ಟ್ರದಲ್ಲಿ ತಮ್ಮ ಸಾಹಿತ್ಯ ಸಂಚಲನದಿAದ ಮೆರಗು ನೀಡಿ ರಾಷ್ಟ್ರ ಕವಿ ಎನಿಸಿಕೊಂಡವರು ಕುವೆಂಪು ಅವರು ಮಾತ್ರ ಎಂದು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕುವೆಂಪು ಅವರು 20ನೇ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ಶ್ರೀ ರಾಮಾಯಣ ದರ್ಶನಂ ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದು, ಇಂದಿಗೂ ಅವರ ಸಾಹಿತ್ಯ ಕೃತಿಗಳು ಪ್ರಸ್ತುತದಲ್ಲಿವೆ. ಅವರ ಎರಡು ಬೃಹತ್ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು, ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ ಎಂದು ಅವರು ಹೇಳಿದರು.

ಇಂದು ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಆಯೋಜಿಸಲಾಗಿದ್ದು, ಪ್ರತಿವರ್ಷ ಅವರಿಗೆ ಗೌರವ ನಮನ ಸಲ್ಲಿಸುವುದಷ್ಟೇ ಅಲ್ಲದೇ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಅವರ ವಿಚಾರಧಾರೆಗಳನ್ನು ಮೆಲುಕು ಹಾಕಬೇಕು ಅಂದಾಗ ಮಾತ್ರ ಅವರಿಗೆ ಸ್ಮರಿಸಿದ ಸ್ಮರಣೆ ಸಾರ್ಥಕವಾಗುವುದು. ಪ್ರತಿಯೊಬ್ಬರು ವಿಶ್ವ ಮಾನವ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಆಚರಿಸಲಾಯಿತು

ಪೂಜಾ ಕೆ. ಎಸ್. ಮಾತನಾಡಿ, ಕುವೆಂಪು ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧಿಯಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಬರಹಗಾರರು. ವರಕವಿ ಬೇಂದ್ರೆಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡು, ವಿಶ್ವಮಾನವ ಸಂದೇಶ ನೀಡಿದವರು ಎಂದು ತಿಳಿಸಿದರು.

ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿಗಳಾದ ರಾಜಶೇಖರ ದೈವಾಡಿ ಅವರು ಮಾತನಾಡಿ, ದೇಶ ಕಂಡ ಅಪ್ರತಿಮ ಕನ್ನಡ ಸಾಹಿತ್ಯ ಜೀವಿ, ಕನ್ನಡ ಅಭಿಮಾನಿ ಅಷ್ಟೇ ಅಲ್ಲದೇ ಅವರೊಬ್ಬ ವಿಶ್ವ ಮಾನವರು ಎಂಬುದನ್ನು ಇಂದು ನಾವು ಸ್ಮರಿಸಬೇಕು. ರಾಷ್ಟ್ರ ಕವಿ ಕುವೆಂಪು ಅವರು ಸಮಾಜದಲ್ಲಿ ಜಾತಿ, ಮತ, ಧರ್ಮ ಎಲ್ಲದೆಲ್ಲೇ ಮೀರಿ ಮುಂದೆ ಹೋಗಬೇಕು ಎನ್ನುವುದು ಅವರ ಮುಖ್ಯ ಉದ್ದೇಶ.ಎಲ್ಲರೂ ವಿಶ್ವಮಾನವರಾದರೆ ಸಾಕು ಎಂಬುದು ಅವರ ಅತೀ ಮುಖ್ಯ ಚಿಂತನೆಯಾಗಿತ್ತು. ಆ ನಿಟ್ಟಿನಲ್ಲಿ ಅವರು ನಡೆದು ಬಂದ ದಾರಿ, ವಿಚಾರಧಾರೆ, ಸಾಹಿತ್ಯದ ಮೌಲ್ಯಗಳನ್ನು ಅರಿತು ಅವರ ಮೌಲ್ಯಾಧಾರಿತ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಗತ್ತಿನಲ್ಲಿ ಮಾನವ ಜನ್ಮ ಪಡೆದ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಜೀವನ ಸಾಗಿಸಿ, ಶ್ರೇಷ್ಠ ವ್ಯಕ್ತಿಗಳ ಜೀವನಾದರ್ಶಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚುನಾವಣಾ ತಹಸೀಲ್ದಾರ ಪ್ರೇಮಸಿಂಗ್ ಪವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ವಿದ್ಯಾವತಿ ಅಂಕಲಗಿ, ಅಡಿವೆಪ್ಪ ಸಾಲಗಲ, ಗಿರೀಶ ಕುಲಕರ್ಣಿ, ಭೀಮರಾಯ ಜಿಗಜಿಣಗಿ, ಸೇರಿದಂತೆ ಜಿಲ್ಲಾ ಮಟ್ಟದ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಕ್ಷಂದಾ ತಿಳಗೊಳ ಕುವೆಂಪು ಅವರ ಸುಮಧುರವಾದ ಗೀತೆಗಳನ್ನು ಪ್ರಸ್ತುತಪಡಿಸಿದರು. ಎಚ್. ಮಮದಾಪುರ ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು.

Leave a Reply

ಹೊಸ ಪೋಸ್ಟ್‌