ವಿಜಯಪುರ: 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಗಜ್ಯೋತಿ ಬಸವೇಶ್ವರರು ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಾನತೆಗೆ ನಾಂದಿ ಹಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ. ಎಚ್. ಪಾಟೀಲ ಮೆಮೋರಿಯಲ್, ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬಬಲೇಶ್ವರ ತಾಲೂಕು ಮತ್ತು ಬೀಳಗಿ ತಾಲೂಕು ಘಟಕಗಳು ಆಯೋಜಿಸಿದ್ದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಣಜಿಗ ಸಮಾಜದ ಸಂಘಟನಾ ಸಮಾವೇಶ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಬಣಜಿಗ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರ ಎಲ್ಲ ಜಾತಿ ವ್ಯವಸ್ಥೆ, ಸಮಾನತೆಗಾಗಿ ಎಲ್ಲರನ್ನೂ ಒಗ್ಗೂಡಿಸಿ ಆಡಳಿತ ಯಾವ ರೀತಿ ನಡೆಸಬೇಕೆಂದು ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪದ ಮೂಲಕ ಮಾಡಿ ತೋರಿಸಿದ್ದಾರೆ. ನನಗೆ ದೊರೆತ ಅಧಿಕಾರಾಧಿಯಲ್ಲಿ ಸಮಾಜ ಮತ್ತು ನಾಡಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿಯಿದೆ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ, ನಮ್ಮ ಹಿರಿಯರು ಒಳ್ಳೆಯ ಆಡಳಿತ ನಡೆಸುವ ಮೂಲಕ ನಮಗೆ ಮಾರ್ಗದರ್ಶನ ಹಾಕಿಕೊಟ್ಟಿದ್ದಾರೆ. ನಮಗೆ ನೀಡುವ ಯಾವುದೇ ಕಾರ್ಯಗಳನ್ನು ನೀಡಿದರೂ ಅದನ್ನು ನಿಭಾಯಿಸುವ ಶಕ್ತಿ ನಮ್ಮ ಸಮಾಜಕ್ಕಿದೆ. ನಮ್ಮ ತಂದೆಯ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಹೇಳಿದರು.
ರಾಮದುರ್ಗ ಶಾಸಕ ಮತ್ತು ವಿಧಾನ ಸಭೆ ಮುಖ್ಯ ಸುಚೇತಕ ಅಶೋಕ ಪಟ್ಟಣ ಮಾತನಾಡಿ, ಹಣವಂತರಾಗುವುದಕ್ಕಿಂತ ಗುಣವಂತರಾಗಿ ಬದುಕಬೇಕು. ದುಡಿದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಮಾಜ ಕಾರ್ಯಗಳಿಗೆ ಬಳಕೆ ಮಾಡಿ ಶರಣರಂತೆ ಆನಂದದಿಂದ ಬದುಕು ಸಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಎಂ. ಕೆ. ಪಟ್ಟಣಶೆಟ್ಟಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಉಮೇಶ ಮಲ್ಲನ್ನವರ, ಬಿಜೆಪಿ ಧುರೀಣ ಆನಂದ ಇಂಗಳಗಾವಿ, ಕಾಖಂಡಕಿಯ ಹಿರಿಯರಾದ ಈಶ್ವರಪ್ಪ ಕೋರಿ, ಶಿಕ್ಷಣ ಪ್ರೇಮಿ ಬಸವರಾಜ ಖೋತ, ಶಿವಾನಂದ ಉದಪುಡಿ, ಅಂದಪ್ಪ ಜವಳಿ, ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ, ವೀರಣ್ಣ ಮಳಗಿ, ಅಶೋಕ ವಾರದ ಉಪಸ್ಥಿತರಿದ್ದರು.
ಉದ್ಯಮಿಗಳಾದ ರಾಜು ಬಿಜ್ಜರಗಿ, ಗುರುರಾಜ ಉದಪುಡಿ, ಸುರೇಶ ಬಾಗೇವಾಡಿ, ಶರತ ರೂಡಗಿ, ನಾಗಪ್ಪ, ಗುರುಬಸಪ್ಪ ಬಿದರಿ, ರವಿ ಕುಚನೂರ ಅವರಿಗೆ ಬಣಜಿಗ ಸಮಾಜದ ಬಣಜಿಗ ರತ್ನ ಪ್ರಶಸ್ತಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ನಾನಾ ಸಂಘ- ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು, ಪ್ರಶಸ್ತಿ ಪುರಸ್ಕೃತರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಣಜಿಗ ಸಮಾಜ ಬಾಂಧವರು, ಸಮಾಜದ ನಾನಾ ತಾಲೂಕು ಘಟಕಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜದ ಬಬಲೇಶ್ವರ ತಾಲೂಕು ಅಧ್ಯಕ್ಷ ಅಶೋಕ ಶಿವಪ್ಪ ತಿಮಶೆಟ್ಟಿ ಸ್ವಾಗತಿಸಿದರು. ಬಸವರಾಜ ಮಂಟೂರ ನಿರೂಪಿಸಿದರು.