ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಶಾಸಕ ಬಿ. ವೈ. ವಿಜಯೇಂದ್ರ ಇದೇ ಮೊದಲ ಬಾರಿಗೆ ಬಸವ ನಾಡು ವಿಜಯಪುರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಮೊದಲಿಗೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರಕ್ಕೆ ಭೇಟಿ ನೀಡಲಿರುವ ಅವರು, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಬಬಲೇಶ್ವರ ಮತ್ತು ಬೀಳಗಿ ತಾಲೂಕು ಘಟಗಳು ಆಯೋಜಿಸಿರುವ ವಿಜಯಪುರ ಮತ್ತು ಬಾಗಲಕೋಟೆ ದಿಲ್ಲೆ ಬಣಜಿಕ ಸಮಾಜದ ಸಂಘಟನಾ ಸಮಾವೇಶ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಬಣಜಿಗ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ವಿಜಯಪುರ ನಗರಕ್ಕೆ ಆಗಮಿಸಲಿರುವ ಬಿ. ವೈ. ವಿಜಯೇಂದ್ರ ಅವರ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ಭರಪೂರ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರ ಮತಕ್ಷೇತ್ರವಾಗಿದ್ದು, ಇತ್ತೀಚೆಗೆ ಯತ್ನಾಳ ಅವರು ಬಿ. ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ನಾನಾ ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ನೂತನ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ವಿಜಯಯೇಂದ್ರ ಅವರ ಸ್ವಾಗತಕ್ಕೆ ಗುಮ್ಮಟ ನಗರಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೈಕ್ ಜಾಥಾ ಮೂಲಕ ಭರ್ಜಿಯಾಗಿ ಸ್ವಾಗತ ಕೋರಲು ನಿರ್ಧರಿಸಿದ್ದಾರೆ. ನಗರಾದ್ಯಂತ ರಸ್ತೆಯಗಳಲ್ಲಿ ಸ್ವಾಗತ ಕಮಾನುಗಳನ್ನು ಹಾಕಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸ್ವಾಗತ ಕೋರಲು ಬೃಹತ್ ಬ್ಯಾನರ್ ಹಾಕಿದ್ದಾರೆ.
ಇಂದು ಮಧ್ಯಾಹ್ನ 1.30 ಕ್ಕೆ ವಿಜಯಪುರ ನಗರಕ್ಕೆ ಆಗಮಿಸಲಿರುವ ಬಿ. ವೈ. ವಿಜಯೇಂದ್ರ ಅವರನ್ನು ವೀರ ಸಾವರ್ಕರ್ ವೃತ್ತದಿಂದ ಬೈಕ್ ಜಾಥಾ ಮೂಲಕ ಕರೆತರಲಿದ್ದಾರೆ. ನಗರದ ಸೆಟಲೈಟ್ ಬಸ್ ನಿಲ್ದಾಣದಿಂದ ಬಿಜೆಪಿ ಕಚೇರಿಯವರೆಗೆ ನಾನಾ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತರಲಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಿದ್ದು, ಬಿಜೆಪಿ ಭೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಲಿದ್ದಾರೆ.
ಸಂಜೆ 5 ಗಂಟೆಗೆ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಬಿ. ವೈ. ವಿಜಯೇಂದ್ರ ರಾತ್ರಿ ಆಲಮಟ್ಟಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.
ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬರುವುದಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ, ಯತ್ನಾಳ ವಿರೋಧಿಗಳು ವಿಜಯಪುರ ನಗರದಲ್ಲಿ ವಿಜಯೇಂದ್ರಗೆ ಸ್ವಾಗತ ಕೋರಲು ಭರ್ಜರಿ ತಯಾರಿ ನಡೆಸಿದ್ದಾರೆ.
ರಾಜ್ಯಾಧ್ಯಕ್ಷರ ಸ್ವಾಗತ ಕೋರುವ ಬ್ಯಾನರ್‌ಗಳಲ್ಲಿ ಯತ್ನಾಳ ಫೋಟೋಗಳನ್ನು ಹಾಕಿಲ್ಲ. ಅಲ್ಲದೇ, ಯತ್ನಾಳ ಬಣದಿಂದಲೂ ಯಾವುದೇ ಸ್ವಾಗತ ಬ್ಯಾನರ್ ಅಥವಾ ಕಮಾನು ಹಾಕದೆ ಬಿ. ವೈ. ವಿಜಯೇಂದ್ರ ಅವರಿಗೆ ಟಾಂಗ್ ನೀಡಲಾಗಿದೆ. ಮತ್ತೋಂದೆಡೆ ಯತ್ನಾಳ ಬಣದ ಕಾರ್ಪೊರೇಟರ್‌ಗಳು ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವುದೂ ಕೂಡ ಖಚಿತವಾಗದಿರುವುದು ಕುತೂಹಲ ಕೆರಳಿಸಿದೆ.