ವಿಜಯಪುರ: ನಾನಾಗಲಿ ಅಥವಾ ಪಕ್ಷದ ಮುಖಂಡರಾಗಲಿ ಕೇಂದ್ರಕ್ಕೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾವು ಪ್ರಯತ್ನ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಆದರೆ, ಮುಂದೆ ಸಂದರ್ಭ ಹೇಗೆ ಸೃಷ್ಠಿಯಾಗುತ್ತೆ ಅದರ ಮೇಲೆ ಕೇಂದ್ರ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏನೆ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ, ವಯಸ್ಸಿನಲ್ಲಿ ಚಿಕ್ಕವನಾದರೂ ಪಕ್ಷದ ಅಧ್ಯಕ್ಷನಾಗಿ ಹಿತದೃಷ್ಠಿಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕರ್ತವ್ಯ ನನ್ನದಾಗಿದೆ. ಅದನ್ನು ಯಶಸ್ವಿಯಾಗಿ ಮಾಡುವ ಅಚಲ ವಿಶ್ವಾನ ನನ್ನಲ್ಲಿದೆ ಎಂದು ಹೇಳಿದರು.
ಈಗ ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಎಲ್ಲ ಹಳೆ ವಿಚಾರಗಳನ್ನು ಬದಿಗಿಟ್ಟು ಎಲ್ಲರ ವಿಶ್ವಾಸ ತೆಗೆದುಕೊಂಡು ನಾನು ಮುನ್ನಡೆಯುತ್ತೇನೆ. ನಾನು ಇಟ್ಟ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಲೋಕಸಭೆ ಚುನಾವಣೆ ಗೆಲ್ಲಬೇಕು. ಮೋದಿ ಅವರನ್ನು ಮತ್ತೆ ಪ್ರಧಾನಿ ಯನ್ನಾಗಿ ಮಾಡಬೇಕು. ನಾನಾನಗಲಿ, ಯಾರಾಗಲಿ ಕೇಂದ್ರಕ್ಕೆ ಹೋಗಿ ಚಾಡಿ ಹೇಳುವ ಕೆಲಸ ಮಾಡಿಲ್ಲ. ಆರೋಪಕ್ಕೆ ಗಂಭೀರತೆ ಇದ್ದರೆ ಉತ್ತರ ಕೊಡಬಹುದು. ಬಿ. ಎಸ್. ಯಡಿಯೂರಪ್ಪ ಅವರ ಮೇಲೆ ಯಾವುದೇ ಅನುಕಂಪ ತೋರಿಸುವ ಅಗತ್ಯವಿಲ್ಲ. ಆರೋಪ ಮಾಡಿದವರು ದಾಖಲೆ ಇದ್ದರೆ ಸರಕಾರಕ್ಕೆ ಕೊಡಲಿ. ಅಲ್ಲಿ ಮುಂದಿನ ನಿರ್ಧಾರ ಮಾಡುತ್ತಾರೆ ಎಂದು ಅವರು ಟಾಂಗ್ ನೀಡಿದರು.
ಶಾಸಕ ಯತ್ನಾಳ ಆರೋಪ ವಿಚಾರ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ ಆರೋಪಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಪಗಳಲ್ಲಿ ಸತ್ಯಾಂಶವಿದ್ದರೆ ಪ್ರತಿಕ್ರಿಯೆ ಬರುತ್ತದೆ. ಹುಡುಗಾಟಿಕೆಗೆ ಹೇಳಿಕೆ ನೀಡಿದರೆ ಪ್ರತಿಕ್ರಿಯೆ ಇರಲ್ಲ. ನಾನು ರಾಜ್ಯಾಧ್ಯಕ್ಷನಾಗಿ ಮೊದಲ ಭಾರಿಗೆ ಭೇಟಿ ಕೊಟ್ಟಿದ್ದೇನೆ. ನನ್ನನ್ನು ಯಡಿಯೂರಪ್ಪನವರು ಅಧ್ಯಕ್ಷನನ್ನಾಗಿ ಮಾಡಿಲ್ಲ. ಪ್ರಧಾನಿ ನರೇಂದ್ರ ಮೊದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಮೇಲೆ ಎಲ್ಲರೂ ಸಹಕಾರ, ಆಶೀರ್ವಾದ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷನಾದ ಬಳಿಕ ವಿಜಯಪುರಕ್ಕೆ ಮೊದಲ ಭೇಟಿ ಕೊಟ್ಟಿದ್ದೇನೆ. ನಾಯಕರು, ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ ಸ್ವಾಗತ ಕೋರಿದ್ದಾರೆ. ಕಾಂಗ್ರೆಸ್ ಸರಕಾರ ಬಂದು ಏಳು ತಿಂಗಳು ಕಳೆದಿದೆ. ಕಾಂಗ್ರೆಸ್ ನೀಡಿದ ಭರವಸೆಗಳು ಜನರಲ್ಲಿ ವಿಶ್ವಾಸ ಮೂಡಿಸಿತ್ತು. ಹೀಗಾಗಿ ಕಾಂಗ್ರೆಸ್ಸಿಗೆ ಬಹುಮತ ಸಿಕ್ಕಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಮತದಾರರೇ ಇಂದು ಕಾಂಗ್ರೆಸ್ಸಿಗೆ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಆರೇಳು ತಿಂಗಳಲ್ಲಿಯೇ ಜನಪ್ರೀಯತೆ ಕಳೆದುಕೊಂಡಿದೆ. ರಾಜ್ಯದಲ್ಲಿ ಬರಗಾಲ ಇದೆ, ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ, ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು, ಆರ್ಥಿಕ ಶಕ್ತಿ ನೀಡಬೇಕು ಎಂದು ನಾವು ಸದನದಲ್ಲಿ ಒತ್ತಾಯಿಸಿದ್ದೇವೆ. ಕಾಂಗ್ರೆಸ್ ಸರಕಾರ ಕಣ್ಣಿದ್ದೂ ಕುರುಡನಂತೆ, ಕಿವಿ ಇದ್ದೂ ಕಿವುಡನಂತೆ ವರ್ತಿಸುತ್ತಿದೆ. ಪ್ರಧಾನಿಗಳ ಭೇಟಿಗೆ ಹೋಗಿ ಐಶಾರಾಮಿ ವಿಮಾನದಲ್ಲಿ ಬಂದಿದ್ದಾರೆ. ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡಿ, ಬರಗಾಲದ ಸಭೆ ಮಾಡುತ್ತಿಲ್ಲ. ಕಂದಾಯ ಸಚಿವರು ಎಸಿ ರೂಂ ನಲ್ಲಿ ಕುಳಿತು ಸಭೆ ಮಾಡ್ತಿದಾರೆ. ರೈತರಿಗೆ ಪರಿಹಾರ ಕೊಡುವ ಯೋಗ್ಯತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರದಿಂದ ಅಲ್ಪಸಂಖ್ಯಾತರ ತುಷ್ಠಿಕರಣ ಆರೋಪ
ಈ ಸಮಯದಲ್ಲಿ ರೂ. 10 ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ಕೊಡ್ತೆವೆ ಎಂದು ಸಿಎಂ ಹೇಳುತ್ತಾರೆ. ಈಗಾಗಲೇ ಆದೇಶ ಮಾಡಿದ್ದಾರೆ. ರಾಜ್ಯ ಸರಕಾರದ ಆಧ್ಯತೆ ರೈತರಲ್ಲ. ಅಲ್ಪಸಂಖ್ಯಾತರು ಅವರ ಆಧ್ಯತೆಯಾಗಿದ್ದಾರೆ. ಅಲ್ಪಸಂಖ್ಯಾತರ ತುಷ್ಠಿಕರಣ ನೀತಿ ಲೋಕಸಭೆ ಚುನಾವಣೆಯಲ್ಲಿ ಎದುರಿಸಬೇಕಾಗುತ್ತೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ನೋಡಿ. ಶಾಲಾ ಮಕ್ಕಳಿಗೆ ಒಂದು ಕೊಠಡಿ ಕೊಡಲು ಇವರಿಗೆ ಆಗ್ತಿಲ್ಲ. ಈ ಮೂಲಕ ಸಿಎಂ ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. 14 ಬಜೆಟ್ ಮಂಡನೆ ಮಾಡಿದ ಸಿಎಂ ವಿಲಿವಿಲಿ ಒದ್ದಾಡುತ್ತಿದ್ದಾರೆ. ಚುನಾವಣೆ ವೇಳೆ ಕೊಟ್ಟ ಗ್ಯಾರೆಂಟಿಗಳನ್ನು ನಿಭಾಯಿಸಲು ಇವರಿಗೆ ಆಗುತ್ತಿಲ್ಲ. ಈ ಸರಕಾರ ಬಂದ ಮೇಲೆ ಶಾಸಕರಿಗೆ ಒಂದು ರೂಪಾಯಿ ಕೂಡ ಅನುದಾನ ಕೊಟ್ಟಿಲ್ಲ. ನಿಮ್ಮ ಬೂಟಾಟಿಕೆ ರಾಜಕಾರಣ, ಅಲ್ಪಸಖ್ಯಾತರ ತುಷ್ಠಿಕರಣ ಬದಿಗಿಟ್ಟು ಕ್ಷೇತ್ರಗಳ ಅಭಿವೃದ್ಧಿಗೆ ಶಾಸಕರಿಗೆ ಹಣ ಕೊಡಬೇಕು ಎಂದು ಬಿ. ವೈ. ವಿಜಯೇಂದ್ರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಮುರುಗೇಶ ನಿರಾಣಿ, ಸಂಗಣ್ಣ ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಬಿಜೆಪಿ ಮುಖಂಡ ಸುರೇಶ ಬಿರಾದಾರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.ಬೈಟ್. ಬಿ. ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.