ವಿಜಯಪುರ: ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶನಿವಾರ ರಾತ್ರಿ ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.
ದಿನವಿಡೀ ನಿಗದಿತ ಕಾರ್ಯಕ್ರಮ ಬಳಿಕ ರಾತ್ರಿ ವಾರ್ಡ್ ನಂಬರ್ 12 ರ ಬಿಜೆಪಿ ಸದಸ್ಯೆ ರಶ್ಮಿ ಕೋರಿ ಅವರ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಸಭೆ ನಡೆಸಿದರು. ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ ಪ್ರತ್ಯೇಕ ಸಭೆ ನಡೆಸುವಂತೆ ಸದಸ್ಯರು ಪ್ರಸ್ತಾಪ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರನ್ನು ಭೇಟಿ ಮಾಡಿದ ಬಿ. ವೈ. ವಿಜಯೇಂದ್ರ ಸುಮಾರು 15 ರಿಂದ 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು ತಾವು, ಯಡಿಯೂರಪ್ಪ ಮತ್ತು ಯತ್ನಾಳ ನಡುವೆ ಇರುವ ಭಿನ್ನಾಭಿಪ್ರಾಯ ಬಗೆಹರಿಸುಕೊಳ್ಳುವಂತೆ ಮನವಿ ಮಾಡಿದರು. ಇಬ್ಬರ ಕಿತ್ತಾಟದಲ್ಲಿ ನಮಗೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕಾರ್ಪೊರೇಟರ್ ಗಳು ಮನವಿ ಮಾಡಿದರು. ಆಗ ಪ್ರತಿಕ್ರಿಯೆ ನೀಡಿದ ಬಿ. ವೈ. ವಿಜಯೇಂದ್ರ ಈ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದು.
ಕಾರ್ಪೊರೇಟರ್ ಗಳಾದ ಪ್ರೇಮಾನಂದ ಬಿರಾದಾರ ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಯತ್ನಾಳ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಂದರೆ 17 ಜನ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಇನ್ನೂ ಮೂರು ಕಡೆ ಬಿಜೆಪಿ ಸದಸ್ಯರು ಆಯ್ಕೆಯಾಗಬಹುದಿತ್ತು. ಆದರೆ, ಬಿಜೆಪಿಯವರೇ ಕೆಲವು ಮುಖಂಡರು ಅವರ ಸೋಲಿಗೆ ಕಾರಣರಾದರು. ಇನ್ನು ಮುಂದಾದರೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಮೇಯರ್ ಮತ್ತು ಉಪಮೇಯರ್ ರನ್ನು ಆಯ್ಕೆ ಮಾಡಲು ಕ್ರಮ ಕೈಗೊಳ್ಳಿ. ಕೇವಲ ಇಬ್ಬರು ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಹೇಳಿದರು.
ಸಭೆ ಮಧ್ಯೆ ಎಚ್. ಡಿ. ಕುಮಾರಸ್ವಾಮಿಗೆ ಕರೆ ಮಾಡಿದ ಬಿ. ವೈ. ವಿಜಯೇಂದ್ರ
ಮತ್ತೋರ್ವ ಸದಸ್ಯ ರಾಹುಲ ಜಾಧವ ಮತ್ತೀತರರು ಮಾತನಾಡಿ, ಮುಂಬರುವ ಜನೇವರಿ 9 ರಂದು 35 ಸದಸ್ಯರನ್ನು ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲರೂ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ, ಜೆಡಿಎಸ್ ನಿಂದ ಆಯ್ಕೆಯಾಗಿರುವ ಓರ್ವ ಸದಸ್ಯರ ಬೆಂಬಲ ಪಡೆಯುವಂತೆ ಆಗ್ರಹಿಸಿದರು. ಆಗ, ಕಾರ್ಪೊರೈಟರ್ ಗಳ ಒತ್ತಾಯದ ಹಿನ್ನೆಲೆಯಲ್ಲಿ ಕೂಡಲೇ ಸ್ಪಂದಿಸಿದ ಬಿ. ವೈ. ವಿಜಯೇಂದ್ರ ಅವರು ಓರ್ವ ಜೆಡಿಎಸ್ ಸದಸ್ಯನ ಬೆಂಬಲ ನೀಡಬೇಕೆಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿದರು. ಅಲ್ಲದೇ, ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸರುವಂತೆ ಜೆಡಿಎಸ್ ಸದಸ್ಯನಿಗೆ ಸೂಚಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಗಳಾದ ಪ್ರೇಮಾನಂದ ಬಿರಾದಾರ, ರಾಹುಲ ಜಾಧವ ಮುಂತಾದವರು ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿದರು.
ಈ ಸಭೆಯಲ್ಲಿ ಕಾರ್ಪೋರೇಟರ್ ಗಳಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ ಸೇರಿದಂತೆ ಎಲ್ಲ ಕಾರ್ಪೊರೇಟರ್ ಗಳು ಉಪಸ್ಥಿತರಿದ್ದರು.
ಸಭೆಯ ಬಳಿಕ ತಡರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಲಮಟ್ಟಿಗೆ ತೆರಳಿದರು.