ವಿಜಯಪುರ: ನಾನು ಬಸವಾದಿ ಶರಣರ ಅನುಯಾಯಿ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ನೀತಿ ಆದರ್ಶಗಳನ್ನು ನಾನು ಮತ್ತು ನಮ್ಮ ಸರಕಾರ ಪಾಲನೆ ಮಾಡಲಿದೆ ಎಂದು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಹೇಳಿದ್ದಾರೆ.
ವಿಜಯಪುರ ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಬಸವಾದಿ ಶರಣರ ಅನುಯಾಯಿ. ಅವರು ಜಾತಿ ಮತ್ತು ಧರ್ಮ ರಹಿತವಾದ ಸಮಾಜ ನಿರ್ಮಾಣ ಗುರಿ ಹೊಂದಿದ್ದರು. ಶ್ರೀ ಸಿದ್ದೇಶ್ವರ ಸ್ವಾಮೀಜಿ ಕೂಡ ವರ್ಗ ರಹಿತ, ಜಾತಿ ರಹಿತ ಸಮಾಜದ ಕನಸು ಕಂಡಿದ್ದರು. ಸ್ವಾಮೀಜಿಗಳ ನೀತಿ ಮತ್ತು ಆದರ್ಶಗಳನ್ನು ನಾನು ಮತ್ತು ನಮ್ಮ ಸರಕಾರ ಪಾಲನೆ ನಾಡಲಿದೆ ಎಂದು ಅವರು ಭರವಸೆ ನೀಡಿದರು.
ಮನುಷ್ಯ ಹೇಗಿರಬೇಕು. ಹೇಗೆ ಬಾಳಬೇಕು ಎಂಬುದನ್ನು ಶ್ರೀಗಳು ಪ್ರವಚನಗಳ ಮೂಲಕ ಎಲ್ಲರಿಗೂ ಹೇಳಿದರು. ಸಿದ್ದೇಶ್ವರ ಸ್ವಾಮೀಜಿ ಮನುಷ್ಯತ್ವದ ಜ್ಞಾನ ಸಂಪಾದನೆ ಮಾಡಿದರು. ಅಲ್ಲದೇ, ಅದನ್ನು ಜ್ಞಾನದಾಸೋಹದ ಮೂಲಕ ಜನರಿಗೆ ಹಂಚಿದರು. ಎಲ್ಲರೂ ಮನುಷ್ಯರಾಗಿ ಬಾಳಬೇಕು ಎಂದು ಶ್ರೀಗಳ ಭಾವನೆಯಾಗಿತ್ತು. ಅವರನ್ನು ವರ್ಣಿಸಲು ಕನ್ನಡದಲ್ಲಿ ಪದಗಳು ಸಾಕಾಗುವುದಿಲ್ಲ. ಅವರಲ್ಲಿ ಆಡಂಬರ ಇರಲಿಲ್ಲ. ಸ್ವಾಮೀಜಿ ಎನ್ನುವ ಅಹಂ ಇರಲಿಲ್ಲ. ಅವರು ಸ್ವಂತಕ್ಕೆ ಏನನ್ನೂ ಬಯಸಲಿಲ್ಲ. ಸಮಾಜಕ್ಕೋಸ್ಕರ ಬದುಕಿದರು. ಇದನ್ನೇ ಬಸವಾದಿ ಶರಣರು ಹೇಳಿದ್ದರು. ಇವೇ ಅಂಶಗಳು ನಮ್ಮ ಸಂವಿಧಾನದಲ್ಲಿವೆ. ಯಾರೂ ಕೂಡ ಇಂಥದ್ದೆ ಧರ್ಮದಲ್ಲಿ ಹುಟ್ಟಬೇಕೆಂದು ಹುಟ್ಟಲು ಸಾಧ್ಯವಿಲ್ಲ. ಹುಟ್ಟುತ್ತ ಎಲ್ಲರೂ ಒಳ್ಳೆಯವರಾಗಿ ಹುಟ್ಟುತ್ತೇವೆ. ನಂತರ ಸಮಾಜದ ಕಟ್ಟುಪಾಡಿನಲ್ಲಿ ಬೆಳೆಯುತ್ತೇವೆ. ಮನುಷ್ಯ ಸಮಾಜ ನಿರ್ಮಾಣಕ್ಕೆ ಮನಸ್ಸು ಮಾಡಿದವರು ದಾರ್ಶನಿಕರು. ಅಂಥ ದಾರ್ಶನಿಕರು ಶ್ರೀಗಳಾಗಿದ್ದರು. ಶ್ರೀಗಳು ಬಹಳ ಸ್ಪಷ್ಟವಾಗಿ ಧರ್ಮದ ಬಗ್ಗೆ ಆಧ್ಯಾತ್ಮದ ಬಗ್ಗೆ ಪ್ರಕೃತಿಯ ಬಗ್ಗೆ ಪ್ರೀತಿಯ ಬಗ್ಗೆ ವಚನದ ಬಗ್ಗೆ ಶ್ರೀಗಳು ಹೇಳಿದರು. ನಾವೆಲ್ಲ ಶ್ರೀಗಳಿಗೆ ಗೌರವ ತರುವ ಕೆಲಸ ಮಾಡಬೇಕು. ಶ್ರೀಗಳ ಬದುಕು ನಮಗೆ ಆದರ್ಶವಾಗಬೇಕು. ಆದರ್ಶಗಳು ನಮ್ಮ ಜೀವನದಲ್ಲಿ ನಡೆದಾಗ ಅದುವೇ ಶ್ರೀಗಳಿಗೆ ಸಲ್ಲಿಸುವ ಗೌರವ ಎಂದು ಸಿಎಂ ಹೇಳಿದರು.
ಶ್ರೀಗಳ ಹೆಸರಿನಲ್ಲಿ ಅರಣ್ಯ ನಿರ್ಮಾಣಕ್ಕೆ ಕ್ರಮ
ಇದೇ ವೇಳೆ ಸಚಿವ ಎಂ. ಬಿ. ಪಾಟೀಲ ಅವರು ಕನೇರಿ ಮತ್ತು ಸುತ್ತೂರು ಶ್ರೀಗಳ ಬೇಡಿಕೆಯಂತೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ನೆನಪಿನಲ್ಲಿ ಸುಮಾರು 1000 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸಬೇಕು ಎಂದು ಸಲ್ಲಿಸಿದ ಬೇಡಿಕೆ ಕುರಿತು ಪ್ರತಿಕ್ರಿಯೆ ನೀಡಿ ಸಿಎಂ,
ಶ್ರೀಗಳ ಹೆಸರಲ್ಲಿ ಅರಣ್ಯ ನಿರ್ಮಾಣ ಮಾಡುವ ಮಾತನ್ನು ಎಂಬಿ ಪಾಟೀಲ್ ಹೇಳಿದ್ದಾರೆ. ಈ ನಾನು ಈ ಭಾಗದ ಸಚಿವರು ಶಾಸಕರ ಆಶಯದಂತೆ ಪ್ರಯತ್ನ ಮಾಡುತ್ತೇವೆ. ಗುರು ನಮನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಾನು ಶ್ರೀಗಳಿಗೆ ನಮನ ಸಲ್ಲಿಸುತ್ತೇನೆ ಎಂದು ಎಸ್. ಸಿದ್ಧರಾಮಯ್ಯ ಹೇಳಿದರು.
ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ನಮನ ಅರ್ಪಿಸಲು ಬೆಂಗಳೂರಿನಿಂದ ಬಂದಿದ್ದೇನೆ. ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಪ್ರೀತಿ, ಗೌರವ ಇದೆ. ಅವರ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ನಾನು ಒಮ್ಮೆ ಶರಣ ಸಾಹಿತ್ಯ ಸಮ್ಮೇಳನಕ್ಕೆ ವಿಜಯಪುರಕ್ಕೆ ಬಂದಿದ್ದೆ ಎಂದು ಸ್ಮರಿಸಿದ ಎಸ್. ಸಿದ್ಧರಾಮಯ್ಯ, ಸಿದ್ಧೇಶ್ವರ ಶ್ರೀಗಳು ಇಂಗ್ಲಿಷ್ ನಲ್ಲಿ ಬರೆದ ಫಿಲಾಸಫಿಯ ಕುರಿತು ಮಾತನಾಡಿದರು. ಶ್ರೀಗಳು ಇಂಗ್ಲಿಷನ್ ನಲ್ಲಿ ಬರೆದ ಫಿಲಾಸಫಿಯನ್ನು ಇಂಗ್ಲಿಷ್ ನಲ್ಲಿಯೇ ಓದಿದರು. ಶ್ರೀಗಳ ಅಂತಿಮ ಅಭಿವಂದನಾ ಪತ್ರ ಬರೆದಿದ್ದನ್ನು ನೆನೆದ ಅವರು, ಶ್ರೀಗಳು ಮನುಷ್ಯ ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ಪ್ರವಚನದ ಮೂಲಕ ಸಾರಿದ್ದಾರೆ. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು ಎಂಬುದು ಶ್ರೀಗಳ ಉದ್ದೇಶವಾಗಿತ್ತು. ತಾಯಿ ಮಕ್ಕಳನ್ನು ಪ್ರೀತಿಸುವಂತೆ ಎಲ್ಲರನ್ನೂ ಪ್ರೀತಿಸಬೇಕು ಎಂಬುದು ಶ್ರೀಗಳ ತತ್ವವಾಗಿತ್ತು. ನಾನು ನೋಡಿದ ಸ್ವಾಮೀಜಿಗಳಲ್ಲಿ ಸಿದ್ದೇಶ್ವರ ಸ್ವಾಮೀಜಿಗಳು ಶ್ರೇಷ್ಠರಾಗಿದ್ದಾರೆ. ಶ್ರೀಗಳ ಅಗಲಿಕೆಗೂ ಮುನ್ನ 2023ರ ಜನೆವರಿ 1ರಂದು ನಾನು ವಿಜಯಪುರಕ್ಕೆ ಬಂದಿದ್ದೆ. ಅದು ನಾನು ಪಡೆದ ಅವರ ಕೊನೆಯ ದರ್ಶನಾಗಿತ್ತು. ಅದಾದ ಬಳಿಕ ಇದೀಗ ಗುರು ನಮನ ಸಲ್ಲಿಸಲು ಬಂದಿದ್ದೇನೆ ಎಂದು ಎಸ್. ಸಿದ್ಧರಾಮಯ್ಯ ಹೇಳಿದರು.
ಇದೇ ವೇಳೆ ಶ್ರೀ ಸಿದ್ಗೇಶ್ವರ ಸ್ವಾಮಿಜಿ ರಚಿಸಿರುವ ಕೃತಿಗಳನ್ನು ಅನ್ಯಭಾಷೆಗಳಿಗೆ ಅನುವಾದ ಮಾಡಿದ ಪುಸ್ತಕಗಳನ್ನು ಸಿಎಂ, ನಾನಾ ಸ್ವಾಮೀಜಿ ಮತ್ತು ಗಣ್ಯರು ಬಿಡುಗಡೆ ಮಾಡಿದರು.
ಇದಕ್ಕೂ ಮುಂಚೆ ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಸಿಎಂ ಸ್. ಸಿದ್ಧರಾಮಯ್ಯ, ಜನಸಾಮಾನ್ಯರಂತೆ ಕುಳಿತುಕೊಂಡರು. ಶ್ರೀಗಳ ಭಾವಚಿತ್ರದ ಪಕ್ಕದಲ್ಲಿ ಹಾಕಲಾಗಿರುವ ಪ್ಲಾಸ್ಟಿಕ್ ಚೇರ್ ಮೇಲೆ ಸಿಎಂ ಮತ್ತು ಸಚಿವರು ಆಸೀನರಾದರು. ಸಿಎಂ ಗಾಗಿ ಯಾವುದೇ ವಿಶೇಷ ಭದ್ರತೆ ಮತ್ತು ಬ್ಯಾರಿಕೇಡ್ ಹಾಗೂ ಡಿ ಝೋನ್ ಕೂಡ ಇರದಿರುವುದು ಶ್ರೀ ಸಿದ್ಧೇಶ್ರವರ ಸ್ವಾಮೀಜಿಗಳ ಸರಳ ಜೀವನದ ಆದರ್ಶಗಳ ಪಾಲನೆಗೆ ಸಾಕ್ಷಿಯಾಗಿತ್ತು.
ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ಕನೇರಿ ಮಠದ ಶ್ರೀಗಳು, ಸಿರಿಗೆರೆ ಶ್ರೀಗಳು, ಬಾಲ್ಕಿ ಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ ಸೇರಿದಂತೆ ನಾನಾ ಸ್ವಾಮೀಗಳು, ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ, ಎಚ್. ಕೆ. ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ. ಎಸ್. ನಾಡಗೌಡ, ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮನಗೂಳಿ, ವಿನಯ ಕುಲಕರ್ಣಿ, ವಾಟರಮ್ಯಾನ್ ಖ್ಯಾತಿಯ ರಾಜೇಂದ್ರಸಿಂಗ್ ಮುಂತಾದವರು ಉಪಸ್ಥಿತರಿದ್ದರು.