ಶ್ರೀ ಸಿದ್ಧೇಶ್ವರ ಅಪ್ಪನವರಂಥ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ- ಸಂಸದ ರಮೇಶ ಜಿಗಜಿಣಗಿ ಭಾವುಕ ನುಡಿ

ವಿಜಯಪುರ: ಶ್ರೀ ಸಿದ್ದೇಶ್ವರ ಅಪನವರಂಥ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಗುರುನಮನ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಸಮಾಜದ ಅತ್ಯಂತ ಸಣ್ಣ ವ್ಯಕ್ತಿ.  ಆದರೆ, ಶ್ರೀಗಳು ನನ್ನನ್ನು ಅತ್ಯಂತ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.  ತಮ್ಮ ಪಕ್ಕದಲ್ಲಿಯೇ ಕೂಡಿಸಿಕೊಂಡು ಊಟ ಮಾಡುತ್ತಿದ್ದರು.  ಅವರಂಥ ಸಂತರನ್ನು ನನ್ನ ಇಡೀ ಜೀವನದಲ್ಲಿಯೇ ಕಂಡಿಲ್ಲ.  ವ್ಯಕ್ತಿತ್ವದಿಂದಲೇ ಅವರು ಜಗತ್ಪ್ರಸಿದ್ಧಿಯನ್ನು ಗಳಿಸಿದ್ದರು.  ಸ್ವಂತಕ್ಕೆ ಏನನ್ನು ಭಯಸದೆ ಸದಾ ಸಮಾಜಕ್ಕೆ ಜ್ಞಾನದಾಸೋಹ ನೀಡಿದರು.  ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.

ವಿಜಯಪುರ ಸಂಸದ ರಮೇಶ ಜಿಗಜಿಣಗಿ

ಮೈಸೂರಿನ ಖ್ಯಾತ ಸಾಹಿತಿ ಕೆ. ಸಿ. ಶಿವಪ್ಪ ಮಾತನಾಡಿ, ಸುತ್ತೂರುಮಠದಿಂದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ದೇಶ-ವಿದೇಶ ಸುತ್ತಿ ಪ್ರವಚನ ಮಾಡಿದರು.  ಅದರಿಂದ ಕನ್ನಡಿಗರು ಅಷ್ಟೇ ಅಲ್ಲದೇ, ವಿದೇಶಗಳಲ್ಲಿರುವವರೂ ಸಹ ಶ್ರೀಗಳನ್ನು ಕಾಣುವಂತಾಯಿತು.  ಅವರ ನುಡಿಗಳನ್ನು ಕೇಳುವ ಭಾಗ್ಯ ಅವರಿಗೆಲ್ಲ ಸಿಕ್ಕಿತು ಎಂದು ಹೇಳಿದರು.

ಸಮಯ ಪಾಲನೆ, ಶಿಸ್ತು, ಪರಿಸರ ರಕ್ಷಣೆ ಬಗ್ಗೆ ಇರುವ ಕಾಳಜಿ, ಹಸಿರನ್ನು ಬೆಳೆಸಲು ಅವರ ಚಿಂತನೆಗಳನ್ನು ಎಲ್ಲರೂ ಅಪ್ಪನವರನ್ನು ನೋಡಿ ಕಲಿಯಬೇಕು.  ಒಬ್ಬ ಸಂತನಾಗಿ ಯಾರೂ ಮಾಡದಂಥ ಅಮೋಘ ಕೆಲಸವನ್ನು ಶ್ರೀ ಸಿದ್ಧೇಶ್ವರ ಶ್ರೀಗಳು ಮಾಡಿದ್ದಾರೆ.  ಇಡೀ ಜಗತ್ತಿಗೆ ಜ್ಞಾನದಾಸೋಹ ಮಾಡಿದ್ದಾರೆ.  ನಾವು ಹಾದಿ ತಪ್ಪುತ್ತಿದ್ದಾಗ ನಮ್ಮನ್ನು ಎಚ್ಚರಿಸಿದ್ದಾರೆ.  ಅವರನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸೇಡಂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಒಬ್ಬ ಸಂತನಾಗಿ ಹೇಗಿರಬೇಕು ಮತ್ತು ಮಲ್ಲಿಕಾರ್ಜುನ ಸ್ವಾಮೀಜಿಯವರಿಗೆ ಚ್ಯುತಿ ಬಾರದಂತೆ ಒಬ್ಬ ಒಳ್ಳೆಯ ಶಿಷ್ಯನಾಗಿ ಒಬ್ಬ ಒಳ್ಳೆಯ ಶಿಷ್ಯನಾಗಿ ಬದುಕಿದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಇಂದು ನಮ್ಮೆಲ್ಲರಿಗೂ ಮಹಾನ್ ಗುರುವಾಗಿದ್ದಾರೆ.  ಶ್ರೀಗಳ ಬದುಕು ನಮ್ಮೆಲ್ಲರಿಗೂ ಒಂದು ಆದರ್ಶ.  ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ಸಾಗಿ ಅವರ ತತ್ವಗಳನ್ನು ಪಾಲಿಸುವ ಮೂಲಕ ಅವರಿಗೆ ನಿಜವಾದ ನುಡಿನಮನ ಸಲ್ಲಿಸೋಣ ಎಂದು ಹೇಳಿದರು.

ಸೂತ್ತೂರು ಮಠದ ಉತ್ತರಾಧಿಕಾರಿ ಜಯರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೇಷ್ಠರಲ್ಲಿ ಅತ್ಯಂತ ಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.  ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕಾಲದಲ್ಲಿ ನಾವು ಇದ್ದೇವು ಎನ್ನುವುದೇ ನಮ್ಮ ಭಾಗ್ಯ ಮತ್ತು ಹೆಮ್ಮೆ.  ಶ್ರೀ ಸಿದ್ಧೇಶ್ವರ ಅಪ್ಪನವರು ತಿಂಗಳುಗಟ್ಟಲೇ ಪ್ರವಚನಗಳನ್ನು ಮಾಡಿ ಜನರಿಗೆ ಮನ ಮುಟ್ಟುವಂತೆ ತಮ್ಮ ಮಾತುಗಳನ್ನು ಹೇಳುತ್ತಿದ್ದರು.  ಅವರ ಮಾತುಗಳನ್ನು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎಂಬ ಭಯಕೆ ಉಂಟಾಗುತ್ತಿತ್ತು.  ತಮ್ಮ ಬದುಕಿನುದ್ದಕ್ಕೂ ಅತ್ಯಂತ ಸರಳವಾಗಿ ಬದುಕಿದರು.  ನುಡಿದಂತೆ ನಡೆವರು.  ಅದಕ್ಕಾಗಿಯೇ ಇಂದು ನಮಗೆಲ್ಲ ಅವರು ದೇವರಾಗಿದ್ದಾರೆ ಎಂದು ಹೇಳಿದರು.

 

ತಮ್ಮ ಜೀವನದುದ್ದಕ್ಕೂ ಕೊಟ್ಯಂತರ ಜನರಿಗೆ ಜ್ಞಾನದಾಸೋಹವನ್ನು ಮಾಡುವ ಮೂಲಕ ಸದ್ಭಕ್ತರನ್ನು ಸನ್ಮಾರ್ಗದತ್ತ ಕರೆದುಕೊಂಡು ಹೋಗಿದ್ದಾರೆ.  ಯಾರಿಂದಲೂ ಏನನ್ನೂ ಭಯಸದೆ ಸದಾ ಇತರರಿಗೆ ಕೊಡುತ್ತಾ ಜೀವನ ಕಳೆದ ಅರೂಪದ ಪೂಜ್ಯರಾಗಿದ್ದಾರೆ ಎಂದು ಹೇಳಿದರು.

ಶಿವಗಂಗೆಯ ಮಹಾಲಕ್ಷ್ಮಿ ಪೀಠದ ಜಗದ್ಗುರು ಶ್ರೀ ಜ್ಞಾನಾನಂದ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಖಾದಿ ತೊಡಲಿಲ್ಲ.  ಕೀರಿಟ ತೊಡಲಿಲ್ಲ.  ಪೀಠ ವಹಿಸಿಕೊಳ್ಳಲಿಲ್ಲ.  ಆದರೆ ಬಿಳಿ ಬಟ್ಟೆಯನ್ನು ತೊಟ್ಟು ಇಡೀ ಜಗತ್ತಿಗೆ ಪ್ರಕಾಶ ಬೀರಿದರು.  ಅವರನ್ನು ದರ್ಶನ ಪಡೆಯಲು ಲಕ್ಷಾಂತರ ಜನ ಕಾಯುತ್ತಿದ್ದರು.  ಇಂದು ಅವರನ್ನು ದೇವರೆಂದು ಪೂಜಿಸುತ್ತಿದ್ದಾರೆ.  ಅವರು ನಮ್ಮೊಂದಿಗೆ ಇಂದು ಇರದಿದ್ದರೂ ಅವರ ಸಂದೇಶಗಳು, ಆದರ್ಶಗಳು ಇಂದಿಗೂ ಜೀವಂತವಾಗಿವೆ.  ಅವರೊಂದಿಗೆ ಬಹಳ ಹತ್ತಿರದಿಂದ ಸಮಯ ಕಳದಿದ್ದೇನೆ.  ಅದು ನನ್ನ ಭಾಗ್ಯ.  ಅವರು ನಮ್ಮೆಲ್ಲರ ಬದುಕನ್ನು ಬಂಗಾರವಾಗಿಸಿದ್ದಾರೆ.  ಬಸವಣ್ಣನವರು ಹೇಳಿದಂತೆ ಮೃದು ವಚನವನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿದ್ದಾರೆ.  ಅವರ ಬಗ್ಗೆ ಹೇಳಿದರೂ ಸಮಯ ಸಾಕಾಗುವುದಿಲ್ಲ ಎಂದು ಹೇಳಿದರು.

ಗೋಡಗೇರಿಯ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀಗಳು ಸದಾ ಲವಲವಿಕೆಯಿಂದ ಇರುತ್ತಿದ್ದರು.  ಅವರ ಜೀವನವನ್ನು ನಾನು ಸಂಪೂರ್ಣವಾಗಿ ನೋಡಿದ ನನಗೆ 5000 ವರ್ಷಗಳ ಹಿಂದಿನ ಉಪನಿಷತ್ತನ್ನು ಪೂಜ್ಯರು ನಮ್ಮೆಲ್ಲರ ಮುಂದೆ ಇಂದು ಸಾಕ್ಷಿಕರಿಸಿದ್ದಾರೆ.  ಪುಸ್ತಕಗಳನ್ನು ಓದುವಲ್ಲಿ ಅಪಾರ ಆಶಕ್ತಿ ಪೂಜ್ಯರಿಗಿತ್ತು.  ಅವರು ಬರೀ ಒಬ್ಬ ವ್ಯಕ್ತಿ ಆಗಿರಲಿಲ್ಲ.  ಸಾಕ್ಷಾತ ಸರಸ್ವತಿ ರೂಪದಲ್ಲಿ ನಮ್ಮೆಲ್ಲರಿಗೂ ಬೋಧಿಸುತ್ತಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಲಗೂರ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಜಯಪುರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಟ್ಟ ಕೀರ್ತಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಸಲ್ಲುತ್ತದೆ.  ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬೆಳೆದು ಬಂದ ಪರಿಯನ್ನು ಅತ್ಯಂತ ಸಮೀಪದಿಂದ ನಾನು ಗಮನಿಸಿದ್ದೇನೆ.  ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಜೊತೆಗಿದ್ದಾಗೆಲ್ಲ ಹಲವಾರು ವಿಷಯಗಳನ್ನು ಸ್ವತಃ ಕಲಿತುಕೊಂಡಿದ್ದೇನೆ.  ಒಬ್ಬ ಸ್ವಾಮೀಜಿಯವರು ಹೇಗೆ ಬದುಕಬೇಕು, ಹೇಗೆ ಇರಬೇಕು ಹೀಗೆ ನಾನಾ ವಿಷಯಗಳನ್ನು ಅವರು ನಮ್ಮೆಲ್ಲರಿಗೂ ಕಲಿಸಿದ್ದಾರೆ.  ನಮ್ಮ ಬದುಕಿನಲ್ಲಿ ಜ್ಞಾನ ಬಹಳ ಮುಖ್ಯ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.  ರಾಷ್ಟ್ರ ರಾಷ್ಟ್ರಗಳನ್ನು ತಿರುಗಾಡಿ ಜ್ಞಾನದಾಸೋಹವನ್ನು ಮಾಡಿದ್ದಾರೆ.  ಎಲ್ಲಿವರೆಗೂ ಸೂರ್ಯ ಚಂದ್ರರಿರುತ್ತಾರೊ ಅಲ್ಲಿಯವರೆಗೂ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರಿರುತ್ತದೆ ಎಂದು ಹೇಳಿದರು.

 

ಕೊಲ್ಹಾಲಪುರ ಕನೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಮಠದ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಬೆಳೆದ ನಮಗೆ ದಿನನಿತ್ಯ ಹಲವಾರು ವಿಷಯಗಳನ್ನು ಕಲಿತಿದ್ದೇವೆ.  ಅವರು ಎಷ್ಟರಮಟ್ಟಿಗೆ ಸರಳ ವ್ಯಕ್ತಿ ಎಂದರೆ ತಮ್ಮ ಬಟ್ಟೆ ಹರಿದರೆ ಅದನ್ನು ಸ್ವತಃ ತಮ್ಮ ಕೈಯಿಂದ ಹೊಲಿದು ಮತ್ತೆ ತೊಡುತ್ತಿದ್ದರು.  ಒಂದು ದಿನ ಅಪ್ಪಾಜಿ ಬಟ್ಟೆ ಹರಿದಿದೆ ಬೇರೆ ಹೊಲಿಸೋಣ ಎಂದು ಕೇಳಿದಾಗ ಬಟ್ಟೆ ಇರೋದು ದೇಹ ಮುಚ್ಚೋಕೆ, ರಕ್ಷಣೆ ಮಾಡೋಕೆ ಅದನ್ನು ಮತ್ತೊಬ್ಬರಿಗೆ ತೋರಿಸಲಿಕ್ಕೆ ಅಲ್ಲ ಎನ್ನುತ್ತಿದ್ದರು.  ಇಷ್ಟೊಂದು ಸರಳ ರೀತಿಯಲ್ಲಿ ಬದುಕಿದ ಅಪ್ಪನವರು. ಅದಕ್ಕೆ ಅವರ ಬದುಕು ನಮ್ಮೆಲ್ಲರಿಗೂ ಆದರ್ಶ. ಅವರೂ ಎಂದಿಗೂ ಸಹ ಯಾರ ಮೇಲೆಯೂ ಕೋಪ ಮಾಡಿಕೊಂಡವರಲ್ಲ.  ಎಲ್ಲರೊಂದಿಗಿಯೂ ನಗುವಿನಿಂದ ಮಾತನಾಡಿಸುತ್ತಾ ತಾವಿರುವ ಸುತ್ತ-ಮುತ್ತಲಿನ ವಾತಾವರಣವನ್ನು ಶಾಂತವನ್ನಾಗಿಸುತ್ತಿದ್ದ ಶಕ್ತಿ ಶ್ರೀಗಳಿಗಿತ್ತು ಎಂದು ಹೇಳಿದರು.

ಅಪ್ಪನವರು ಭೌತಿಕ ಜಗತ್ತನಿಂದ ದೂರವಾಗಿ ಒಂದು ವರ್ಷ ಕಳೆದರೂ ಸಹ ಇಂದಿಗೂ ಅವರ ಮಾತುಗಳು ಅವರ ನಡೆ-ನುಡಿ ನಮ್ಮ ಮನದಲ್ಲಿ ಹಚ್ಚ ಹಸರಾಗಿಯೇ ಉಳಿದಿವೆ. ಅವರು ನಮ್ಮ ಕೊನೆಯ ಉಸಿರು ಇರುವವರೆಗೂ ಸಹ ನಮ್ಮ ಮನದಲ್ಲಿ ಇರುತ್ತಾರೆ ಎಂದು ಹೇಳಿದರು.

ಸೂತ್ತುರು ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರನ್ನು ಮಲ್ಲಿಕಾರ್ಜನ ಸ್ವಾಮೀಜಿಯವರು ನಮ್ಮೆಲ್ಲರಿಗೂ ನೀಡಿದ್ದಕ್ಕೆ ಮೊದಲು ನಾವು ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರಿಗೆ ಧನ್ಯವಾದ ಹೇಳಬೇಕು.  ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಯಾರ ಮನಸ್ಸಿಗೂ ನೂವಾಗದಂತೆ ಬದುಕಿ ಸದಾಕಾಲ ಮತ್ತೊಬ್ಬರಿಗೆ ಒಳಿತನ್ನೆ ಬಯಸುವಂತಹ ವ್ಯಕ್ತಿತ್ವ ಅವರದ್ದು.  ಬದುಕನ್ನು ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, ಇಲ್ಲಿ ಮಾತನಾಡಿದ ಎಲ್ಲ ಶ್ರೀಗಳ ಮಾತುಗಳನ್ನು ಕೇಳಿ ನನಗೆ ಶ್ರೀ ಸಿದ್ಧೇಶ್ವರ ಅಪ್ಪನವರ ನುಡಿಗಳನ್ನು ಆಲಿಸದಂತಾಯಿತು.  ಅವರಿಗಾಗಿ ಆಯೋಜಿಸಿರುವ ಈ ಗುರುನಮನ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಬೇಕು.  ಅವರು ಇವತ್ತು ನಮ್ಮೊಂದಿಗೆ ಭೌತಿಕವಾಗಿ ಇಲ್ಲದೇ ಇರಬಹುದು.  ಆದರೆ, ಅವರು ನಮ್ಮೊಂದಿಗೆ ಸದಾ ಇದ್ದಾರೆ ಅವರ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಾನಾ ಮಠಗಳಿಂದ ಆಗಮಿಸಿದ್ದ ಸ್ವಾಮೀಜಿಗಳು, ಶಾಸಕ ವಿಠ್ಠಲ ಧೋಂಡಿಬಾ ಕಟಕದೋಂಡ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮುಂತಾದವರು ಉಸಸ್ಥಿತದ್ದರು.

Leave a Reply

ಹೊಸ ಪೋಸ್ಟ್‌