ವಿಜಯಪುರ: ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಅಧೀನದಲ್ಲಿ ಬರುವ ಮ್ಯೂಸಿಯಂ ಗಳಲ್ಲಿ ಸ್ಪೋಟಕ ಇರಿಸಲಾಗಿದೆ ಎಂದು ಕಳುಹಿಸಲಾದ ಇ-ಮೇಲ್ ಸಂದೇಶವೊಂದು ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಈ ಇ-ಮೇಲ್ ಸಂದೇಶದ ಮಾಹಿತಿ ಪಡೆದ ವಿಜಯಪುರ ಪೊಲೀಸರು ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿರುವ ಮ್ಯೂಸಿಯಂ ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ತಪಾಸಣೆ ನಡೆಸಿ ಇದೊಂದು ಹುಸಿ ಇ-ಮೇಲ್ ಸಂದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಸುಕಿನ ಜಾವ ಬಂದ ಇ-ಮೇಲ್ ಸಂದೇಶ, ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ ಅಧಿಕಾರಿಗಳು
ಮ್ಯೂಸಿಯಂ ನಲ್ಲಿ ಬಾಂಬ್ ಇಡಲಾಗಿದೆ ಎಂದು ಶುಕ್ರವಾರ ನಸುಕಿನ ಜಾವ 4.40 ನಿಮಿಷಕ್ಕೆ ಇ-ಮೇಲ್ ಸಂದೇಶವೊಂದನ್ನು ಕಳುಹಿಸಲಾಗಿದೆ. ಆದರೆ, ವಿಜಯಪುರ ಗೋಳಗುಮ್ಮಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಶುಕ್ರವಾರ ರಜೆ ಇರುವ ಹಿನ್ನೆಲೆಯಲ್ಲಿ ಮ್ಯೂಸಿಯಂ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ. ಅಲ್ಲದೇ, ಈ ಇ-ಮೇಲ್ ಬಗ್ಗೆಯೂ ಗಮನ ಹರಿಸಿರಲಿಲ್ಲ. ರಾತ್ರಿ 8 ಗಂಟೆಯ ಸುಮಾರಿಗೆ ಈ ಮಾಹಿತಿ ತಿಳಿದ ಮ್ಯೂಸಿಯಂ ಅಧಿಕಾರಿಗಳು ಕೂಡಲೇ ವಿಜಯಪುರ ಎಸ್ಪಿ ರಿಷಿಕೇಶ ಸೋನಾವಣೆ ಅವರಿಗೆ ಮಾಹಿತಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಸಿಂದಗಿಯಲ್ಲಿದ್ದ ಎಸ್ಪಿಯವರು ಕೂಡಲೇ ತಮ್ಮ ಕೆಳಗಿನ ಅಧಿಕಾರಿಗಳಿಗೆ ತನಿಖೆಗೆ ಸೂಚನೆ ನೀಡಿದ್ದಾರೆ. ಎಸ್ಪಿ ಸೂಚನೆಯಂತೆ ಹೆಚ್ಚುವರಿ ಎಸ್ಪಿಯವರಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಸಿಬ್ಬಂದಿ ಹಾಗೂ ಸುಮಾರು 10 ಜನರನ್ನು ಒಳಗೊಂಡ ಬಾಂಬ್ ನಿಷ್ಕ್ರೀಯ ದಳ ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸಿದ್ದಾರೆ.
ರಾತ್ರಿ 11 ಗಂಟೆಯವರೆಗೆ ಈ ಕುರಿತು ಕೂಲಂಕಷವಾಗಿ ತನಿಖೆ ನಡೆಸಿದ ಪೊಲೀಸರು ಗೋಳಗುಮ್ಮಟ ಮ್ಯೂಸಿಯಂ ನಲ್ಲಿ ಯಾವುದೇ ಸ್ಪೋಟಕ ಇಟ್ಟಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ. ಆಗ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.
ಸುಮಾರು 70 ನಾನಾ ಪ್ರಾಚೀನ ಸ್ಮಾರಕಗಳು, ಮ್ಯೂಸಿಯೆಂ ಗಳು, ಪ್ರವಾಸೋದ್ಯಮ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಈ ಸಂದೇಶವನ್ನು ರವಾನಿಸಲಾಗಿದೆ.
morgue999lol ಎಂಬ ಇ-ಮೇಲ್ ಐಡಿಯಿಂದ ಇ- ಮೇಲ್ ಸಂದೇಶವನ್ನು ಕಳುಹಿಸಲಾಗಿದ್ದು, ಈ ಇ-ಮೇಲ್ ನಲ್ಲಿರುವ ಸಂದೇಶ ಈ ರೀತಿ ಇದೆ.
I placed multiple explosives inside of the Museum.
The Explosives are well hidden and they will go off in the morning.
Everyone inside will die.
WE ARE A GROUP OF CALLED ‘Terrorizers111”
GIVE OUR GROUP’S NAME TO THE MEDIA OR WE WOUN’T STOP CAUSING CHAOS.
ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾದ ಇ-ಮೇಲ್ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ನಸುಕಿನ ಜಾವ ಇ-ಮೇಲ್ ಕಳುಹಿಸಿ ಬೆಳಿಗ್ಗೆ ಸ್ಪೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಆದರೆ, ರಾತ್ರಿ ವೇಳೆ ಈ ಇ-ಮೇಲ್ ನೋಡಿದ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಎಂದಿನಂತೆ ವಿಜಯಪುರ ಗೋಳಗುಮ್ಮಟ ಮ್ಯೂಸಿಯಂ ಗೆ ಪ್ರವಾಸಿಗರ ಭೇಟಿ ಮುಂದುವರೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.