ಹೈಕಮಾಂಡಿಗೆ ಎಲ್ಲ ವಿವರಿಸಿದ್ದೇನೆ- ನನ್ನನ್ನು ಯಡಿಯೂರಪ್ಪ ಬಿಜೆಪಿಗೆ ಕರೆತಂದಿಲ್ಲ- ರಾಮಲಿಂಗಾರೆಡ್ಡಿ ನಿರ್ಧಾರ ಸ್ವಾಗತಾರ್ಹ- ಯತ್ನಾಳ

ವಿಜಯಪುರ: ರಾಜ್ಯದ ವಿದ್ಯಮಾನಗಳ ಕುರಿತು ಹೈಕಮಾಂಡಿಗೆ ಎಲ್ಲ ವಿವರಿಸಿದ್ದೇನೆ.  ಯಡಿಯೂರಪ್ಪ ನನ್ನನ್ನು ಬಿಜೆಪಿಗೆ ಕರೆತಂದಿಲ್ಲ.  ಸಚಿವ ರಾಮಲಿಂಗಾರೆಡ್ಡಿ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ತಾವು ಮಾಡಿರುವ ಆರೋಪಗಳ ಕುರಿತು ಹೈಕಮಾಂಡಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

ದೆಹಲಿಯ ಭೇಟಿ ಫಲಪ್ರದವಾಗಿದೆ.  ದೆಹಲಿಗೆ ಬರಲು ರಾಷ್ಟ್ರೀಯ ಅಧ್ಯಕ್ಷರಿಂದ ನನಗೆ ಕರೆ ಬಂದ ಕಾರಣ ಹೋಗಿದ್ದೆ.  ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಪ್ರಧಾನಾ ಕಾರ್ಯದರ್ಶಿಗಳಾದ ಅರುಣಸಿಂಗ್ ಮತ್ತು ರಾಧಾ‌ಮೋಹನ ಅಗರವಾಲ ಅವರನ್ನು ಭೇಟಿ ಮಾಡಲು ಹೇಳಿದ್ದರು.  ಅವರಿಬ್ಬರ ಬಳಿ ಮಾತನಾಡಿದ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದೆ.  ಅಮಿತ ಶಾ ಅವರ ನಿವಾಸದಲ್ಲಿ ಜೆ. ಪಿ. ನಡ್ಡಾ ಸಮ್ಮುಖದಲ್ಲಿ 25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು.  ಎಲ್ಲಾ ವಿಚಾರಗಳನ್ನ ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ.  ಎಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಕೇಂದ್ರದ ನಾಯಕರು ಭರವಸೆ ನೀಡಿದ್ದಾರೆ.  ಏನಾದರೂ ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಎಂದು ಜೆ. ಪಿ. ನಡ್ಡಾ ಹೇಳಿದ್ದಾರೆ ಎಂದು ಯತ್ನಾಳ ತಿಳಿಸಿದರು.

ಈ ವೇಳೆ ನಿಮ್ಮನ್ನು ಭೇಟಿ ಮಾಡಲು ಅವಕಾಶ ಸಿಗಲ್ಲ.  ಯಡಿಯೂರಪ್ಪ ವಿಜಯೇಂದ್ರಗೆ ಮಾತ್ರ ಸಿಗುತ್ತದೆ ಎಂದು ನಡ್ಡಾ ಅವರಿಗೆ ನಾನು ತಿಳಿಸಿದೆ.  ಆಗ ಅವರು ಎರಡು ದಿನ ಮುಂಚಿತವಾಗಿ ಮಾಹಿತಿ ನೀಡಿ ನಾನು ಭೇಟಿಯಾಗಲು ಸಮಯ ನೀಡುತ್ತೇನೆ ಎಂದು ಹೇಳಿದ್ದಾರೆ.  ಏನೇ ಇದ್ದರೂ ನಮಗೆ ತಿಳಿಸಬೇಕು.  ಯಾರ ಮುಲಾಜು ಇಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.  ನನಗೆ ಯಾವುದೇ ನೋಟಿಸ್ ಆಗಲಿ, ಎಚ್ಚರಿಕೆಯನ್ನಾಗಲಿ ನೀಡಿಲ್ಲ.  ನನ್ನ ಜೊತೆ ಇಬ್ಬರೂ ನಾಯಕರು ಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದು ಶಾಸಕರು ತಿಳಿಸಿದರು.

ನನ್ನನ್ನು ಯಡಿಯೂರಪ್ಪ ಬಿಜೆಪಿಗೆ ಕರೆದುಕೊಂಡು ಬಂದಿಲ್ಲ

ಯತ್ನಾಳ್ ಅವರನ್ನು ಯಡಿಯೂರಪ್ಪ ಬಿಜೆಪಿಗೆ ಕರೆದುಕೊಂಡು ಬಂದಿದ್ದಾರೆ ಎಂಬುದರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಬಗ್ಗೆ ಸ್ಪಷ್ಟಪಡಿಸುತ್ತೇನೆ.  ನನ್ನನ್ನು ಅಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರು ಬಿಜೆಪಿಗೆ ಕರೆದುಕೊಂಡು ಬಂದಿದ್ದಾರೆ.  ಸದಾನಂದ ಗೌಡರಿಂದಾಲಿ ಅಥವಾ ಯಡಿಯೂರಪ್ಪ ಅವರಿಂದಾಗಲಿ ನಾನು ಬಿಜೆಪಿ ಗೆ ಬಂದಿಲ್ಲ.  ನಾನು ಬಿಜೆಪಿ ಸೇರಲು ಯಡಿಯೂರಪ್ಪ ಅಡ್ಡಿಪಡಿಸಿದ್ದರು ಎಂದು ಅವರು ಆರೋಪಿಸಿದರು.

ಕೊರೊನಾ ನಿರ್ವಹಣೆಲ್ಲಿ ರೂ. 40000 ಕೋ. ಭ್ರಷ್ಟಾಚಾರ ಆರೋಪ ಪ್ರಸ್ತಾಪ ವಿಚಾರ

ಕೊರೊನಾ ನಿರ್ವಹಣೆಯಲ್ಲಿ ರೂ. 40000 ಕೋ. ಭ್ರಷ್ಟಾಚಾರ ನಡೆದಿರುವ ಕುರಿತು ತಾವು ಮಾಡಿರುವ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ.  ಇದಷ್ಟೇ ಅಲ್ಲ, ಬಹಳ ವಿಚಾರ ಪ್ರಸ್ತಾಪ ಮಾಡಿದ್ದೇನೆ.  ಇಲ್ಲಿ ಎಲ್ಲವನ್ನೂ ಹೇಳಲು ಆಗಲ್ಲ.  ಇಲ್ಲಿ ಏನೆಲ್ಲ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ ಆ ಎಲ್ಲ ಮಾಹಿತಿಯನ್ನು ನಾನು ಕೊಡುತ್ತೇನೆ.

ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ವಿಚಾರ

ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ.  ಅದೆಲ್ಲವನ್ನು ಹೈಕಮಾಂಡ್ ನಿರ್ಣಯ ಮಾಡುತ್ತದೆ.  ಬದಲಾವಣೆ ಯಾರು ಮಾಡುತ್ತಾರೆ ಗೊತ್ತಿಲ್ಲ.  ಕೇಂದ್ರ ವರಿಷ್ಠ ಮಂಡಳಿಗೆ ಏನು ಮಾಹಿತಿ ಇರುತ್ತದೆಯೋ ಅದರ ಆಧಾರದ ಮೇಲೆ ಬದಲಾವಣೆ ಮಾಡುತ್ತಾರೆ.  ನಾನು ಬದಲಾವಣೆ ಆಗಲಿ ಎಂದು ಹೇಳಿದರೂ ಆಗಲ್ಲ.  ಬದಲಾವಣೆ ಮಾಡಬೇಡಿ ಎಂದರೂ ಆಗಲ್ಲ.  ಯಾರು ಬದಲಾವಣೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ.  ಬದಲಾವಣೆ ಮಾಡುತ್ತಾರೆಂಬ ಮಾಹಿತಿ ಇದೆ.  ಬದಲಾವಣೆ‌ ಮಾಡಬೇಕು.  ಸತ್ಯ ಈಗ ಮೇಲಿನವರಿಗೆ ಗೊತ್ತಾಗುತ್ತಿದೆ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ವಿರುದ್ಧ ಹರಿಹಾಯ್ದ ಅವರು, ನನಗೆ ಎಚ್ಚರಿಕೆ ನೀಡಲು ದೆಹಲಿಗೆ ಕರೆಸಿದ್ದಾರೆ ಎಂದು ಕೆಲವು ಮಾಧ್ಯಮದವರಿಗೆ ನಿರೀಕ್ಷೆ ಇತ್ತು.  ಅದೆಲ್ಲ ಸುಳ್ಳು.  ನನಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿಜಯಪುರ ನಗರದಲ್ಲಿ ಧರ್ಮ ದಂಗಲ್ ವಿಚಾರ

ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯ ಕೋಮಿನವರಿಗೆ ವ್ಯಾಪಾರ ವಹಿವಾಟಿಹೆ ಅವಕಾಶ ನೀಡಬಾರದು ಎಂದು ಹಿಂದು ಸಂಘಟನೆಗಳ ಒಕ್ಕೂಟ ಆಗ್ರಹ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂಪರ ಸಂಘಟನೆಗಳ ಒಕ್ಕೂಟಗಳಿಗೆ ನೂರು ಅಂಗಡಿಗಳನ್ನು ನೀಡುವುದಾಗಿ ಜಾತ್ರಾ ಉತ್ಸವ ಸಮಿತಿ ಹೇಳಿದೆ.  ಜಾತ್ರೆಯಲ್ಲಿ ಅಂಗಡಿಗಳನ್ನು ಹಾಕಲು ಹಿಂದೂಗಳಿಗೆ ಪ್ರಥಮ ಆದ್ಯತೆ ನೀಡುತ್ತೇವೆ.  ಹಿಂದುಗಳು ತೆಗೆದುಕೊಂಡ ಬಳಿಕ ಉಳಿದರೆ ಇತರರಿಗೆ ನೀಡಲಾಗುತ್ತದೆ ಎಂದು ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕರು ಸ್ಪಷ್ಟಪಡಿಸಿದರು.

ರಾಮ ಮಂದಿರ ಉದ್ಘಾಟನೆ ವಿಚಾರ

ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮತ್ತೊಂದು ಗೋದ್ರಾ ಘಟನೆ ನಡೆಯಬಹುದು ಎಂದು ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮತ್ತೊಂದು ಗೋದ್ರಾ ಮಾಡಲು ಸಂಚು ಮಾಡುತ್ತಿದೆ.  ಇದನ್ನು  ತಮ್ಮ ಹೇಳಿಕೆಯ ಮೂಲಕ ಬಿ. ಕೆ. ಹರಿಪ್ರಸಾದ ಬಹಿರಂಗ ಪಡಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಬಿ. ಕೆ. ಹರಿಪ್ರಸಾದ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು.  ರಾಜ್ಯ ಸರಕಾರ ಅವರ ವಿರುದ್ಧ ಕೇಸ್ ದಾಖಲಿಸಿ, ಏನು ಮಾಹಿತಿ ಇದೆ ಎಂಬುದನ್ನು ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರಾಮ ಮಂದಿರ ಉದ್ಘಾಟನೆಯ ದಿನ ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ರಾಮ ಮಂದಿರ ಉದ್ಘಾಟನೆಯ ದಿನ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಬೇಕು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಡಿರುವ ಆದೇಶವನ್ನು ಸ್ವಾಗತಿಸುತ್ತೇನೆ.  ಅವರಿಗೆ ಅಭಿನಂದನೆ ಸಲ್ಲಿಸುವೆ.  ನಾವೆಲ್ಲ ರಾಮಭಕ್ತರು.  ನಮ್ಮ ದೇಶದ ಮೂಲಪುರುಷ ಶ್ರೀರಾಮ ಎಂದು ಅವರು ಹೇಳಿದರು.

ಕರಸೇವಕರ ಬಂಧನ, ಕೆಜಿ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳನ್ನು ಡಿಸಿಎಂ ಭೇಟಿ ಮಾಡಿದ ವಿಚಾರ

ಕರಸೇವಕರ ಬಂಧನ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಕಾಂಗ್ರೆಸ್ ಸರಕಾರ ಇಡೀ ರಾಜ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿದೆ.  ಸಿದ್ದರಾಮಯ್ಯ ಅವರದು ಪಾಕಿಸ್ತಾನ ಸರಕಾರ.  ಕಾಂಗ್ರೆಸ್ ಸರಕಾರ ತಾಲಿಬಾನ್ ಗಿಂತ ಕಡೆಯಾಗಿದೆ ಎಂದು ಕಿಡಿ ಕಾರಿದರು.

ಡಿಸಿಎಂ ಡಿ. ಕೆ. ಶಿವಕುಮಾರ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಮಾಡಿದವರ ಪರ ಮಾತನಾಡುತ್ತಾರೆ.  ಎನ್ಐಎ ವಿಚಾರಣೆಗೆ ಆ ಪ್ರಕರಣಗಳು ಹೋಗಿದ್ದರೂ ಅವರ ಬಿಡುಗಡೆ ಬಗ್ಗೆ ಮಾತನಾಡುತ್ತಾರೆ.  ಅದೆಲ್ಲ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಡಿಸಿಎಂ ಸಿಬಿಐ ಕುಣಿಕೆಯಿಂದ ಹೊರಬರಲು ಸಾಧ್ಯವಿಲ್ಲ.  ಅವರನ್ನು ಬಿಡಿಸಲು ಆಗುತ್ತಾ? ಮತ ಬ್ಯಾಂಕ್ ಕಾರಣಕ್ಕಾಗಿ ಮುಸ್ಲಿಂ ಓಲೈಕೆ ಮಾಡುತ್ತಾರೆ.  ಕಾಂಗ್ರೆಸ್ ಮುಸ್ಲಿಮರಿಗೂ ನ್ಯಾಯ ಕೊಡುತ್ತಿಲ್ಲ.  ಕಾಂಗ್ರೆಸ್ನವರು ಮೋಸ ಮುಸ್ಲಿಮರಿಗೆ ತಿಳಿಯುತ್ತಿಲ್ಲ.  ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿ ಆರಾಮಾಗಿದ್ದಾರೆ.  ಪಾಕಿಸ್ತಾನದಲ್ಲಿ ತಿನ್ನಲು ಆಹಾರವು ಇಲ್ಲ.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅರಾಜಕತೆ ಇದೆ.  ಕೆಜಿ ಗೋಧಿ ಬೆಲೆ ರೂ. 400 ಆಗಿದೆ ಎಂದು ಅವರು ಹೇಳಿದರು.

ನಿನ್ನೆ ಡಿಸಿಎಂ ಕೆಜಿ ಹಳ್ಳಿ, ಡಿಜಿ ಹಳ್ಳಿ ಗಲಾಟೆ ಆರೋಪಿಗಳನ್ನು ಭೇಟಿ ಮಾಡಿ ಹಮಾರೆ ಚೋಕರೆ ಕುಚ್ ಬಿ ನಹಿ ಕಿಯಾ.  ಗರ್ ಬೈಠಾ ಥಾ.  ಕೊತಂಬರಿ ಲೇಕೆ ಆನೆ ಕೆ ಲಿಯೇ ಗಯಾ ಥಾ.  ಪೊಲೀಸ್  ಪಕಡ್ ಲಿಯೆ ಅಂದರ್ ಡಾಲ್ ದಿಯೆ ಎಂದಿದ್ದಾರೆ ಎಂದು ಯತ್ನಾಳ ವ್ಯಂಗ್ಯವಾಡಿದರು

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ.  ಪೊಲೀಸ್ ಜೀಪ್ ಸುಟ್ಟಿದ್ದಾರೆ.  ಪೊಲೀಸರ ಮೇಲೆ ಗೂಂಡಾಗಿರಿ ಮಾಡಿದ್ದಾರೆ.  ಇದರಿಂದ ದೇಶ ಹೇಗೆ ಸುರಕ್ಷಿವಾಗಿ ಇರಲು ಸಾಧ್ಯ? ಕಳೆದ ಒಂಬತ್ತು ವರ್ಷಗಳಿಂದ ದೇಶ ಸುರಕ್ಷಿತವಾಗಿ ಉಳಿಯಲು ಮೋದಿ ಕಾರಣ.  ದೇಶದಲ್ಲಿ ಮೋದಿಗೆ ಪರ್ಯಾಯವಾಗಿ ಪ್ರಧಾನಿಯಾಗಲು ಯಾರಿದ್ದಾರೆ ಹೇಳಿ.  ಖರ್ಗೆ ಬೇಡ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.  ದಲಿತರ ಮೇಲೆ ಸಿದ್ದರಾಮಯ್ಯ ಗೆ ಎಷ್ಟು ಪ್ರೀತಿ ಇದೆ ನೋಡಿ.  ಸಿದ್ದರಾಮಯ್ಯಗೆ ಬರಿ ಸಾಬರ ಮೇಲೆ ಪ್ರೀತಿ ಇದೆ.  ರಾಹುಲ್ ಗಾಂಧಿ ಓರ್ವ ಅರೆ ಹುಚ್ಚ. ಎಂದು ಅವರು ಹೇಳಿದರು.

ಪಿಎಸ್ಐ ಹಗರಣ ಬಗ್ಗೆ ಜ. ವೀರಪ್ಪ ಆಯೋಗದಿಂದ ನೋಟಿಸ್ ನೀಡಿರುವ ವಿಚಾರ‌

ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ತಾವು ಮಾಡಿರುವ ಆರೋಪಗಳ ಕುರಿತು ವಿಚಾರಣೆಗೆ ಜಸ್ಟೀಸ್ ವೀರಪ್ಪ ಆಯೋಗದಿಂದ ನೊಟೀಸ್ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ನೋಟಿಸ್ ಬಂದಿಲ್ಲ.  ನೋಟೀಸ್ ಬಂದ್ಮೇಲೆ ಹೇಳುವೆ ಎಂದು ಸ್ಪಷ್ಟಪಡಿಸಿದರು.

ದಾಖಲೆ ಯಾಕೆ ಬೇಕು? ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಪುಂಖಾನು ಪುಂಖವಾಗಿ ವಿಧಾನ ಸಭೆಯಲ್ಲಿ ಮಾತನಾಡಿದ್ದಾರೆ.  ಪ್ರಿಯಾಂಕ ಖರ್ಗೆ ಮಾತನಾಡಿದ್ದಾರೆ.  ನಾನು ಎರಡು ಆರೋಪ ಮಾಡಿದ್ದೇನೆ.  ನೀವು ಯಾಕೆ ಆಯೋಗ ರಚನೆ ಮಾಡಿದಿರಿ? ನಿಮಗೆ ತಾಕತ್ ಇದ್ದರೆ ಎರಡು ಆರೋಪಗಳನ್ನು ನೇರವಾಗಿ ಸಿಬಿಐ ತನಿಖೆಗೆ ಕೊಡಿ.  ಕೊರೊನಾ ಮತ್ತು ಪಿಎಸ್ಐ ನೇಮಕಾತಿ ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಿ.  ಎಡಿಜಿಪಿಯನ್ನು ಒಂದು ತಿಂಗಳು ರಾತ್ರಿ ಜೈಲಿನಲ್ಲಿ ಇಟ್ಟುಕೊಂಡು ಮದ್ಯ ಕುಡಿಸಿ, ತಿನ್ನಿಸಿ ಹೊರಗೆ ಬಿಟ್ಟಿರಿ.  ಒಂದು ಗುಂಪು ಮತ್ತೊಂದು ಗುಂಪು ಎಲ್ಲರೂ ಅಡ್ಜೆಸ್ಟ್ ಮೆಂಟ್ ಇದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌