ವಿಜಯಪುರ: ಗುಮ್ಮಟ ನಗರಿ ವಿಜಯಪುರ ಮಹಾನಗರ ಪಾಲಿಕೆ ಕೈವಶವಾಗಿದೆ. ಸಚಿವ ಎಂ. ಬಿ. ಪಾಟೀಲ ಅವರ ಕೈಚಳಕದಿಂದಾಗಿ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಚುನಾವಣೆ ಮತದಾನ ಬಹಿಷ್ಕರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಕಾರ್ಪೊರೇಟರ್ ಗಳು ಚುನಾವಣಾಧಿಕಾರಿಗಳ ವಿರುದ್ಧ ಘೋಷಣೆ ಹಾಕುತ್ತ ಪಾಲಿಕೆಯಿಂದ ಹೊರ ನಡೆದರು.
ಬೆಳಿಗ್ಗೆಯಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ಸಿನಿಂದ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಮೇಯರ್ ಸ್ಥಾನಕ್ಕೆ ಮತ್ತು ದಿನೇಶ ಹಳ್ಳಿ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ರಶ್ಮಿ ಕೋರಿ ನಾಮಪತ್ರ ಸಲ್ಲಿಸಿದ್ದರು.
ಮಧ್ಯಾಹ್ನ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆ ವಿರೋಧಿಸಿ ಶಾಸಕ ಯತ್ನಾಳ ನೇತೃತ್ವದಲ್ಲಿ ಮತದಾನ ಬಹಿಷ್ಕರಿಸಿ ಚುನಾವಣಾಧಿಕಾರಿಗಳ ವಿರುದ್ಧ ಘೋಷಣೆ ಹಾಕುತ್ತ ಹೊರ ನಡೆದರು. ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾಂಗ್ರೆಸ್ಸಿನ 10 ಜನ ಕಾರ್ಪೊರೇಟರ್ ಗಳು ಮತ್ತು ಮತದಾನ ಹಕ್ಕನ್ನು ಹೊಂದಿರುವ ನಾಲ್ಕು ಜನ ಶಾಸಕರಾದ ಎಂ. ಬಿ. ಪಾಟೀಲ, ವಿಠ್ಠಲ ಧೋಂಡಿಬಾ ಕಟಕದೊಂಡ, ಪ್ರಕಾಶ ರಾಠೋಡ ಮತ್ತು ಸುನೀಲಗೌಡ ಪಾಟೀಲ, ಐದು ಪಕ್ಷೇತರ, ಇಬ್ಬರು ಎಐಎಂಐಎಂ ಮತ್ತು ಓರ್ವ ಜೆಡಿಎಸ್ ಸದಸ್ಯರು ಸೇರಿದಂತೆ ಒಟ್ಟು 22 ಜನ ಮತ ಚಲಾಯಿಸಿದರು. ಈ ಹಿನ್ನೆಲೆಯಲ್ಲಿ ಮಹೆಜಬೀನ್ ಅಬ್ದುಲ್ ರಜಾಕ್ ಹೊರ್ತಿ ನೂತನ ಮೇಯರಾಗಿ ಆಯ್ಕೆಯಾದರು. ರಶ್ಮಿ ಕೋರಿ ಪರ ಯಾರೂ ಮತ ಹಾಕಲಿಲ್ಲ.
ಎಸ್ಟಿ ಸಮುದಾಯಕ್ಕೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಎಸ್ಟಿ ಸಮುದಾಯದಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ದಿನೇಶ ಹಳ್ಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.