ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ವಿಜಯಪುರ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ವಿಜಯಪುರ ನಗರವು ಈಗ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಅಲ್ಲದೇ, ಮಹಾನಗರಪಾಲಿಕೆ ಸುಮಾರು 10ಕಿ.ಮೀ ವ್ಯಾಪ್ತಿ ಒಳಗೊಂಡಿದೆ. ವಿಜಯಪುರ ನಗರದ ಜನಸಂಖ್ಯೆ ಸುಮಾರು 5 ಲಕ್ಷ ತಲುಪಿದೆ. ನಗರದಲ್ಲಿ ನಾನಾ ಸಮುದಾಯದ ಜನರು ಶವಗಳನ್ನು ಹೂಳುವ ಬದಲಾಗಿ ದಹನ ಮಾಡುವ ಸಂಪ್ರದಾಯವಿದೆ. ಈ ಸಮುದಾಯಗಳ ಜನ ನಿಧನರಾದವರ ಅಂತ್ಯಕ್ರಿಯೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ಉಪಯೋಗಿಸಬೇಕಾಗುತ್ತದೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಪರಿಸರ ನಾಶ ಉಂಟಾಗುತ್ತದೆ. ಅಲ್ಲದೇ ಬಡವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಅಲ್ಲದೇ, ಪರಿಸರ ಹಾನಿಯನ್ನೂ ತಡೆಗಟ್ಟಬಹುದಾಗಿದೆ. ಆದ್ದರಿಂದ ತಾವು ಕ್ರೀಯಾ ಯೋಜನೆಯೊಂದನ್ನು ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುನೀಲಗೌಡ ಪಾಟೀಲ ಸೂಚನೆ ನೀಡಿದ್ದಾರೆ.