ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಎಬಿವಿಪಿ ವಿಜಯಪುರ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಥ್ರೊಬಾಲ್ ವಿವೇಕ್ ಟ್ರೊಫಿ-2024 ಪಂದ್ಯಾವಳಿಯನ್ನು ಗೆದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಜ್ಞಾನ-ಶೀಲ-ಏಕತೆ ಸಾರಿದ ಸ್ವಾಮಿ ವಿವೇಕಾನಂದರ ಜಯಂತಿ ಸಾಕ್ಷೀಕರಿಸಲು ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ಪೀಳಿಗೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಎಬಿವಿಪಿ ವಿಜಯಪುರ ಘಟಕ ಖೇಲೋ ಭಾರತ ಅಡಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಜನೇವರಿ 10 ರಂದು ಗುರುವಾರ ನಗರದ ಡಾ. ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿ.ಎಲ್.ಡಿ.ಇ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಬಿ.ಎಲ್.ಡಿ.ಇ ಸಂಸ್ಥೆಯ ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ವಿರುದ್ಧ ಜಯಗಳಿಸಿ ರಾಜ್ಯ ಮಟ್ಟದ್ದ ಪಂದ್ಯಾವಳಿಗೆ ಪ್ರವೇಶ ಪಡೆಯಿತು.
ಪಂದ್ಯಾವಳಿಯ ನಂತರ ನಡೆದ ಕಾರ್ಯಕ್ರಮದಲ್ಲಿ ವಿಜಯಪುರದ ಬೆನಕಟ್ಟಿ ಪಿಯು ಕಾಲೇಜಿನ ಕಾರ್ಯಾಧ್ಯಕ್ಷೆ ಹೇಮಲತಾ ಬೆನಕಟ್ಟಿ ಮತ್ತು ಪಿಡಿಜೆ ಹೈಸ್ಕೂಲಿನ ನಿವೃತ್ತ ದೈಹಿಕ ಶಿಕ್ಷಕ ಎಸ್. ಎಸ್. ಹಿರೇಮಠ ಪ್ರಶಸ್ತಿ ಪಶಸ್ತಿ ಪ್ರಧಾನ ಮಾಡಿದರು. ವಿಜೇತ ತಂಡದ ನಾಯಕಿ ರಶ್ಮಿ ಇಂಚಗೇರಿ, ಉಪನಾಯಕಿ ಪೂಜಾ ಬಿರಾದಾರ, ತರಬೇತುದಾರ ಹಣಮಂತ ಪವಾರ, ಆಟಗಾರರಾದ ನೇತ್ರಾವತಿ, ಸನಾ, ಸೌಮ್ಯ, ಪಾರ್ವತಿ, ಪ್ರಿಯೇಶಾ, ಅಶ್ವಿನಿ ಪ್ರಶಸ್ತಿ ಸ್ವೀಕರಿಸಿದರು.
ವಿದ್ಯಾರ್ಥಿನಿಯರ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ನಿರ್ದೇಶಕ ಸುನೀಲಗೌಡ ಪಾಟೀಲ, ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೈಹಿಕ ನಿರ್ದೇಶಕ ಹಣಮಂತ ಪವಾರ ಹಾಗೂ ಬೋಧಕ, ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.